ಕುಂದಾಪುರ: ರೋಗಲಕ್ಷಣ ಇಲ್ಲದ ಕೋವಿಡ್-19 ರೋಗಿಗಳಿಗೆ ಆಯಾ ತಾಲೂಕುಗಳಲ್ಲಿ ಸಿದ್ಧಪಡಿಸಿದ ಕೋವಿಡ್-19 ಆಸ್ಪತ್ರೆಗಳಲ್ಲೇ ಚಿಕಿತ್ಸೆ ನೀಡಲು ಉದ್ದೇಶಿಸಲಾಗಿದೆ. ಜಿಲ್ಲೆಯಲ್ಲಿ ಕೋವಿಡ್-19 ಚಿಕಿತ್ಸೆಗಾಗಿ ಸಲಹೆ, ಮಾರ್ಗದರ್ಶನಕ್ಕೆ ಅತ್ಯುತ್ತಮ ವೈದ್ಯರಿರುವ ವೈದ್ಯಕೀಯ ವಿಶೇಷ ಜಿಲ್ಲಾ ಸಮಿತಿಯನ್ನೇ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.
ಗುರುವಾರ ಸಂಜೆ ಇಲ್ಲಿನ ಸರಕಾರಿ ಆಸ್ಪತ್ರೆಯ ನೂತನ ಕಟ್ಟಡ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ನೀಡಿದ ಲಕ್ಷ್ಮೀ ಸೋಮ ಬಂಗೇರ ಹೆರಿಗೆ ವಾರ್ಡ್‌ನ್ನು ಪರಿವರ್ತಿಸಿ ಸಿದ್ಧಪಡಿಸಲಾದ ಕೋವಿಡ್-19 ಆಸ್ಪತ್ರೆಯ ವ್ಯವಸ್ಥೆ ಪರಿಶೀಲಿಸಿ ಸುದ್ದಿಗಾರರ ಜತೆ ಮಾತನಾಡಿದರು.
ಶೇ. 95ರಷ್ಟು ಮಂದಿಗೆ ರೋಗಲಕ್ಷಣ ಕಂಡು ಬರುತ್ತಿಲ್ಲ. ಕಾರ್ಕಳದಲ್ಲಿ 100 ಹಾಸಿಗೆಗಳ ಆಸ್ಪತ್ರೆ, ಕುಂದಾಪುರದಲ್ಲಿ 120 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮಾಡಲಾಗಿದೆ. ಬೈಂದೂರು, ಕುಂದಾಪುರದ ರೋಗಲಕ್ಷಣರಹಿತ, ಆಕ್ಸಿಜನ್ ಬೇಡದ, ಐಸಿಯು ಅಗತ್ಯವಿಲ್ಲದವರಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ತುರ್ತು ಚಿಕಿತ್ಸೆಯನ್ನು ಉಡುಪಿಯಲ್ಲಿ ನೀಡಲಾಗುತ್ತದೆ. ಪಾಸಿಟಿವ್ ಕಂಡುಬಂದವರಿಗೆ ಸೂಕ್ತ, ಚಿಕಿತ್ಸೆ ನೀಡಲು ಜಿಲ್ಲಾಡಳಿತ ಸಜ್ಜಾಗಿದೆ. ವೈದ್ಯ ಸಿಬಂದಿ ಸಿದ್ಧರಾಗಿದ್ದಾರೆ. ಹೆಚ್ಚುವರಿ ಸಿಬಂದಿ, ಎಎನ್‌ಎಂ, ಡಿ ದರ್ಜೆ, ವೈದ್ಯರ ಅಗತ್ಯವಿದ್ದರೆ ತತ್‌ಕ್ಷಣ ನೇಮಿಸಲು ಸೂಚಿಸಲಾಗಿದೆ. ಖಾಸಗಿ ವೈದ್ಯರ ಸೇವೆ ಪಡೆಯಲು ಐಎಂಎಯವರ ಜತೆ ಮಾತುಕತೆ ನಡೆಸಲಾಗಿದೆ. ಸಾಮಾನ್ಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸರಕಾರಿ ಆಸ್ಪತ್ರೆ ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದರು. ಕೋವಿಡ್-19 ತಡೆಯುವ ಕಾರ್ಯ ಮಾಡಲಾಗದು. ಈಗಾಗಲೇ ಬಂದಾಗಿದೆ. ಕಠಿನ ಪ್ರಕರಣಗಳಿದ್ದರೆ ವೈದ್ಯರ ಸಮಿತಿಯ ತಂಡ ಮಾರ್ಗದರ್ಶನ ನೀಡಲಿದೆ ಎಂದರು.
ರವಿವಾರ ಪೂರ್ಣ ಪ್ರಮಾಣದ ಲಾಕ್‌ಡೌನ್ ನಡೆಯಲಿದೆ. ಎಲ್ಲ ಮಳಿಗೆಗಳೂ ಮುಚ್ಚಿರಲಿವೆ. ಶುಭ ಸಮಾರಂಭ ಹಮ್ಮಿಕೊಂಡಿದ್ದರೆ ಅಂತಹ ಪ್ರಕರಣಗಳನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಸರಕಾರದ ನಿಯಮಾವಳಿ ಪ್ರಕಾರ ಕಾರ್ಯಕ್ರಮ ನಡೆಸಲು ಅನುವು ಮಾಡಿಕೊಡಲಾಗಿದೆ ಎಂದರು.
ಸಹಾಯಕ ಕಮಿಷನರ್ ಕೆ. ರಾಜು, ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ್ ಉಡುಪ, ತಾಲೂಕು ಸರಕಾರಿ ಆಸ್ಪತ್ರೆ ಆಡಳಿತ ಶಸ್ತ್ರಚಿಕಿತ್ಸಕ ವೈದ್ಯಾಧಿಕಾರಿ ಡಾ| ರಾಬರ್ಟ್ ರೆಬೆಲ್ಲೋ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಪರಿಸರ ಎಂಜಿನಿಯರ್ ರಾಘವೇಂದ್ರ, ಕಿರಿಯ ಆರೋಗ್ಯ ಎಂಜಿನಿಯರ್ ರಾಘವೇಂದ್ರ ಉಪಸ್ಥಿತರಿದ್ದರು.