ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಹೃದಯ ಸಂಬಂಧಿ ಆ್ಯಂಜಿಯೋಬ್ಲಾಸ್ಟ್ ಸಮಸ್ಯೆಯಿಂದ ಬಳಲುವ ಬಿಬಿಎಂಪಿ ವ್ಯಾಪ್ತಿಯ ಬಡ ರೋಗಿಗಳಿಗೆ ಉಚಿತವಾಗಿ ಆ್ಯಂಜಿಯೋಬ್ಲಾಸ್ಟ್ ಮತ್ತು ಸ್ಟಂಟ್ ಅಳವಡಿಕೆಗೆ ಜಯದೇವ ಹೃದ್ರೋಗ ಚಿಕಿತ್ಸಾ ಮತ್ತು ಸಂಶೋಧನಾ ಸಂಸ್ಥೆ ಹಾಗೂ ವಿಕ್ಟೋರಿಯಾ ಆಸ್ಪತ್ರೆಗಳೊಂದಿಗೆ ಬಿಬಿಎಂಪಿ ಒಡಂಬಡಿಕೆ ಮಾಡಿಕೊಳ್ಳಲು ತೀರ್ಮಾನಿಸಿದೆ.
ನಗರದಲ್ಲಿನ ಬಡ ರೋಗಿಗಳಿಂದ ಇಂತಹ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವುದು ಕಷ್ಟವಾಗುತ್ತದೆ. ಆ ಹಿನ್ನೆಲೆಯಲ್ಲಿ ಬಡ ರೋಗಿಗಳಿಗೆ ಉಚಿತ ಸ್ಟಂಟ್ಸ್ ಅಳವಡಿಕೆ ಯೋಜನೆಯನ್ನು ಪಾಲಿಕೆಯ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಅದರಂತೆ ಎರಡು ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳು ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ.
ಇದರಿಂದಾಗಿ ನಗರದಲ್ಲಿ ಬಡ ರೋಗಿಗಳು ಜಯದೇವ ಹಾಗೂ ವಿಕ್ಟೋರಿಯಾ ಆಸ್ಪತ್ರೆಗಳಲ್ಲಿ ಉಚಿತವಾಗಿ ಆ್ಯಂಜಿಯೋಬ್ಲಾಸ್ಟ್ ಮತ್ತು ಸ್ಟಂಟ್ಸ್ ಅಳವಡಿಕೆ ಮಾಡಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ಬಜೆಟ್‌ನಲ್ಲಿ 4 ಕೋಟಿ ರೂ. ಮೀಸಲಿಡಲಾಗಿದ್ದು, ಅದರಂತೆ ಜಯದೇವ ಆಸ್ಪತ್ರೆಗೆ 3.5 ಕೋಟಿ ರೂ. ಹಾಗೂ ವಿಕ್ಟೋರಿಯಾ ಆಸ್ಪತ್ರೆಗೆ 50 ಲಕ್ಷ ರೂ. ನೀಡಲಾಗುತ್ತದೆ.
ಈಗಾಗಲೇ ಎರಡು ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಒಡಂಬಡಿಕೆಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸಿದ್ದಪಡಿಸಲಾಗಿದ್ದು, ಬಿಬಿಎಂಪಿ ಆಯುಕ್ತರು ಒಪ್ಪಿಗೆ ಸೂಚಿಸಿದ ಕೂಡಲೇ ಬಡವರು ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ.
ಪ್ರತಿ ವಾರ್ಡ್‌ನ ಇಬ್ಬರಿಗೆ ಉಚಿತ ಚಿಕಿತ್ಸೆ: ಪಾಲಿಕೆಯ ಪ್ರತಿ ವಾರ್ಡ್‌ನಲ್ಲಿ ವರ್ಷಕ್ಕೆ ಇಬ್ಬರಿಗೆ ಮಾತ್ರ ಆ್ಯಂಜಿಯೋಬ್ಲಾಸ್ಟ್ ಮತ್ತು ಸ್ಟಂಟ್ಸ್ ಅಳವಡಿಕೆ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ಆಯಾ ವಾರ್ಡ್ ಪಾಲಿಕೆಯ ಸದಸ್ಯರು ಬಡ ರೋಗಿಗಳನ್ನು ಗುರುತಿಸಲಿದ್ದು, ರೋಗಿಗಳ ಪಟ್ಟಿಯನ್ನು ಪಾಲಿಕೆಗೆ ನೀಡಬೇಕು. ಅದರಂತೆ ವರ್ಷಕ್ಕೆ 396 ಹೃದ್ರೋಗಿಗಳಿಗೆ ಯೋಜನೆಯ ಲಾಭ ಸಿಗಲಿದೆ.
ನಗರದಲ್ಲಿ ಹೃದಯ ಸಂಬಂಧಿಸಿ ಆ್ಯಂಜಿಯೋಬ್ಲಾಸ್ಟ್ ಸಮಸ್ಯೆಯಿಂದ ಬಳಲುವ ಬಡರೋಗಿಗಳಿಗೆ ಎರಡು ಮೂರು ಲಕ್ಷಗಳು ವೆಚ್ಚ ಮಾಡಿ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ. ಆ ಕಾರಣದಿಂದಾಗಿ ನಗರದಲ್ಲಿನ ಬಡರೋಗಿಗಳಿಗೆ ಉಚಿತವಾಗಿ ಆ್ಯಂಜಿಯೋಬ್ಲಾಸ್ಟ್ ಮತ್ತು ಸ್ಟಂಟ್ಸ್ ಅಳವಡಿಕೆ ಮಾಡುವ ಉದ್ದೇಶದಿಂದಿಂದ ಬಜೆಟ್‌ನಲ್ಲಿ ಯೋಜನೆ ಘೋಷಿಸಲಾಗಿತ್ತು. ಇದೀಗ ಎರಡು ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ್ದು, ಒಡಂಬಡಿಕೆ ನಂತರ ಆಸ್ಪತ್ರೆಗಳಿಗೆ ಹಣ ಪಾವತಿಸಲಾಗುವುದು.
-ಎಂ.ಕೆ.ಗುಣಶೇಖರ್, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ