ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೆಮ್ಮು, ಶೀತ, ಜ್ವರ ಇದ್ದರೆ ಹಾಗೂ ಕಂಟೈನ್ಮೆಂಟ್ ವಲಯದಿಂದ ಬರುವ ವಿದ್ಯಾರ್ಥಿಗಳಿಗೆ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಎರಡು ವಿಶೇಷ ಕೊಠಡಿ ಇರಲಿದ್ದು, ರೋಗ ಲಕ್ಷಣ ಕಂಡು ಬಂದರೆ ಪರೀಕ್ಷೆ ಮುಗಿದ ತಕ್ಷಣವೇ ಚಿಕಿತ್ಸೆಗೆ ಕಳುಹಿಸಲಾಗುತ್ತದೆ. ಹೀಗಾಗಿ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ನಿಯಮ ಮಕ್ಕಳಿಗೂ ಕಠಿಣವಾಗಿರಲಿದೆ. ಅಲ್ಲದೇ, ಕೊಠಡಿ ಮೇಲ್ವಿಚಾರಕರಿಗೂ ಅದನ್ನು ಅನುಷ್ಠಾನ ಮಾಡುವುದು ಸವಾಲಾಗಲಿದೆ. ಈ ಕುರಿತು ಶಿಕ್ಷಣ ಇಲಾಖೆ ನಿರ್ದೇಶನ ಹೊರಡಿಸಿದೆ.
ಕಂಟೈನ್ಮೆಂಟ್ ವಲಯದಿಂದ ಬರುವ ವಿದ್ಯಾರ್ಥಿಗಳ ಪಟ್ಟಿಯನ್ನು ಆಯಾ ಶಾಲಾ ಮುಖ್ಯ ಶಿಕ್ಷಕರು ಸಿದ್ಧಪಡಿಸಿ, ಕ್ಷೇತ್ರ ಶಿಕ್ಷಾಧಿಕಾರಿಗಳ ಮೂಲಕ ಇನ್ಸಿಡೆಂಟ್ ಕಮಾಂಡರ್‌ಗೆ ಸಲ್ಲಿಸಿ, ಪರೀಕ್ಷೆಗೆ ಅನುಮತಿ ಪಡೆಯಬೇಕು. ಪ್ರವೇಶ ಪತ್ರದಲ್ಲಿ ಕಂಟೈನ್ಮೆಂಟ್ ವಲಯದಲ್ಲಿರುವ ಮುದ್ರೆ (ಸೀಲ್) ಹಾಕಬೇಕು. ಪ್ರತಿ ತಾಲೂಕು, ಜಿಲ್ಲಾ ಕೇಂದ್ರದಲ್ಲಿ ಎರಡು ಹೆಚ್ಚುವರಿ ಕೇಂದ್ರ ಗುರುತಿಸಿ, ಕಾಯ್ದಿರಿಸಿದ ಪರೀಕ್ಷಾ ಕೇಂದ್ರವಾಗಿ ಇಟ್ಟುಕೊಳ್ಳಬೇಕು ಎಂದು ಜಿಲ್ಲಾಡಳಿತಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕೃತ ನಿರ್ದೇಶನ ಹೊರಡಿಸಿದೆ.
ಪ್ರತಿ ಪರೀಕ್ಷಾ ಕೇಂದ್ರದಲ್ಲಿ 200 ಮಕ್ಕಳಿಗೆ ಒಂದರಂತೆ ಆರೋಗ್ಯ ತಪಾಸಣಾ ಕೌಂಟರ್ ಅನ್ನು ಕೇಂದ್ರದ ಮುಖ್ಯ ದ್ವಾರದಲ್ಲಿ ರಚಿಸಬೇಕು. ಪ್ರತಿ ಕೇಂದ್ರಕ್ಕೆ ಆರೋಗ್ಯ ಇಲಾಖೆ ಇಬ್ಬರು ಅರೆವೈದ್ಯಕೀಯ ಅಥವಾ ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿ ಇರಬೇಕು. ಥರ್ಮಲ್ ಸ್ಕ್ಯಾನರ್ ಹಾಗೂ ಪ್ರಥಮ ಚಿಕಿತ್ಸಾ ಪಟ್ಟಿಗೆಯೊಂದಿಗೆ ಈ ಸಿಬ್ಬಂದಿ ಹಾಜರಾಗಬೇಕು. ಪ್ರತಿ ಆರೋಗ್ಯ ತಪಾಸಣೆ ಕೌಂಟರ್ ಗೆ ಇಬ್ಬರು ಸ್ವಯಂ ಸೇವಕರು ಇರಬೇಕು. ಬೆಳಗ್ಗೆ 8.30ರಿಂದಲೇ ಈ ಕೌಂಟರ ಕಾರ್ಯ ನಿರ್ವಹಿಸಬೇಕು ಎಂದು ಇಲಾಖೆ ಖಡಕ್ ನಿರ್ದೇಶನ ಹೊರಡಿಸಿದೆ.
ತಪಾಸಣೆ ವೇಳೆ ಕೆಮ್ಮು, ನೆಗಡಿ, ಜ್ವರದಿಂದ ಬಳಲುತ್ತಿರುವುದು ಕಂಡು ಬಂದರೆ ವಿಶೇಷ ಕೊಠಡಿಯಲ್ಲಿ ಕೂರಿಸಬೇಕು. ಆರೋಗ್ಯ ಇಲಾಖೆ ಜತೆ ಮಾತುಕತೆ ನಡೆಸಿ, ಪ್ರತಿ ತಾಲೂಕಿಗೆ ಒಂದರಂತೆ ತುರ್ತು ಚಿಕಿತ್ಸಾ ವಾಹನವನ್ನು ಎಸ್ಸೆಸ್ಸೆಲ್ಸಿ ಪರೀಕ್ಷಾ ಮಕ್ಕಳಿಗಾಗಿಯೇ ಮೀಸಲಿಡಬೇಕು. ರೋಗ ಲಕ್ಷಣ ಇರುವ ಮಕ್ಕಳನ್ನು ಪರೀಕ್ಷೆ ಮುಗಿದ ತಕ್ಷಣವೇ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆ ಕಳುಹಿಸುವ ಜವಾಬ್ದಾರಿಯೂ ಜಿಲ್ಲಾಡಳಿತಕ್ಕೆ ವಹಿಸಲಾಗಿದೆ.
ಕಂಟೈನ್ಮೆಂಟ್ ವಲಯದ ಮಕ್ಕಳಿಗೆ ಅವಕಾಶ: ಕಂಟೈನ್ಮೆಂಟ್ ವಲಯದ ಮಕ್ಕಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದ್ದು ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಈ ಮಕ್ಕಳಿಗೆ ಆರೋಗ್ಯ ಇಲಾಖೆಯಿಂದ ಎನ್ 95 ಮಾಸ್ಕ್ ಕೇಂದ್ರದಲ್ಲಿ ಒದಗಿಸಬೇಕು. ಕಂಟೈನ್ಮೆಂಟ್ ವಲಯದ ಮಕ್ಕಳಿಗೆ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದಿದ್ದಲ್ಲಿ, ಪೂರಕ ಪರೀಕ್ಷೆಗೆ ಹೊಸ ಅಥವಾ ಮೊದಲ ಪ್ರಯತ್ನವೆಂದೇ ಪರಿಗಣಿಸಬೇಕು ಎಂದು ಇಲಾಖೆ ನಿರ್ದೇಶನ ನೀಡಿದೆ.
ಸಮರ್ಪಕ ಅನುಷ್ಠಾನಕ್ಕೆ ನಿರ್ದೇಶನ: ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂಬಂಧ ಪರೀಕ್ಷಾ ಕೇಂದ್ರ, ಮಕ್ಕಳ ಸಾರಿಗೆ ಸೌಲಭ್ಯ, ಸಾಮಾಜಿಕ ಅಂತರ, ಆರೋಗ್ಯ ತಪಾಸಣೆ, ಅಧಿಕಾರಿ, ಸಿಬ್ಬಂದಿ ಕಾರ್ಯಾಚರಣೆ, ವಲಸೆ ಮಕ್ಕಳು, ಹಾಸ್ಟೆಲ್ ಮಕ್ಕಳು, ಹೊರ ರಾಜ್ಯದ ಮಕ್ಕಳ ಕುರಿತು ತೆಗೆದುಕೊಳ್ಳಬೇಕಾದ ವಿಸ್ತೃತ ಮಾರ್ಗ ಸೂಚಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳಿಗೆ, ಜಿಪಂ ಸಿಇಒ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಕಳುಹಿಸಿದೆ. ಅಲ್ಲದೇ, ಸಮರ್ಪಕ ಅನುಷ್ಠಾನಕ್ಕೆ ನಿರ್ದೇಶಿಸಿದೆ.
ಗ್ರಾಮೀಣ ಭಾಗದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ಸಾರಿಗೆ ವ್ಯವಸ್ಥೆಗೆ ಜಿಲ್ಲಾ ಉಪನಿರ್ದೇಶಕರಿಗೆ ಸೂಚನೆ ನೀಡಿದ್ದೇವೆ. ಕಂಟೈನ್ಮೆಂಟ್ ವಲಯದ ಮಕ್ಕಳು ಪರೀಕ್ಷೆಗೆ ಬರಬಹುದು, ವಿಶೇಷ ಕೊಠಡಿ ವ್ಯವಸ್ಥೆ ಇರುತ್ತದೆ.
-ವಿ.ಸುಮಂಗಳಾ, ನಿರ್ದೇಶಕಿ, ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ
* ರಾಜು ಖಾರ್ವಿ ಕೊಡೇರಿ