ಬಳ್ಳಾರಿ: ವೈದ್ಯರು ಸಲ್ಲಿಸುತ್ತಿರುವ ಸೇವೆ ಅಮೋಘವಾಗಿದೆ. ಸಾವಿನ ಪ್ರಮಾಣ ದಿಢೀರ್ ಏರಿಕೆ ಆದ ಕಾರಣ ಸೋತಿದ್ದೇವೆ ಎಂದು ನಿರಾಶೆಯಾಗುವುದು ಬೇಡ. ತಮ್ಮೆಲ್ಲರ ಜತೆಗೆ ನಾವಿದ್ದೇವೆ. ತಾವು ಕೋವಿಡ್ ಸೊಂಕಿನಿಂದ ಆಸ್ಪತ್ರೆಗೆ ದಾಖಲಾಗುವ ಪ್ರತಿ ರೋಗಿಯೊಬ್ಬರ ವೈಯಕ್ತಿಕ ಕಾಳಜಿ ವಹಿಸಿ ಪರಿಣಾಮಕಾರಿ ಚಿಕಿತ್ಸೆ ನೀಡಿ ಮತ್ತು ಆ ಮೂಲಕ ಮರಣ ಪ್ರಮಾಣ ಕಡಿಮೆಗೊಳಿಸಲು ಮುಂದಾಗಬೇಕು ಎಂದು ಅರಣ್ಯ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್. ಆನಂದಸಿಂಗ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ಕೋವಿಡ್ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಸಾವುಗಳು ತಡೆಗಟ್ಟುವ ನಿಟ್ಟಿನಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದರು.
880 ಸೋಂಕಿತರು-29 ಮರಣ: ಬಳ್ಳಾರಿ ಜಿಲ್ಲೆಯಲ್ಲಿ ಮಂಗಳವಾರ 107 ಕೋವಿಡ್ ಸೋಂಕಿತರು ದೃಢಪಡುವುದರೊಂದಿಗೆ ಸೋಂಕಿತರ ಸಂಖ್ಯೆ 880ಕ್ಕೇರಿದೆ. ದೀರ್ಘ ಕಾಯಿಲೆಗಳಿಂದ ಬಳಲುತ್ತಿದ್ದ 29 ಜನರು ಸರಿಯಾದ ಸಮಯಕ್ಕೆ ಬಾರದೇ ತಡವಾಗಿ ಬಂದು ಸಾವನ್ನಪ್ಪಿದ್ದಾರೆ. 409 ಜನರು ಡಿಸ್ಚಾರ್ಜ್ ಆಗಿದ್ದು, 442 ಸಕ್ರಿಯ ಪ್ರಕರಣಗಳಿವೆ ಎಂದು ಡಾ| ಜನಾರ್ಧನ್ ಅವರು ಸಭೆಗೆ ವಿವರಿಸಿದರು. ಬಳ್ಳಾರಿ ಜಿಲ್ಲೆಯಲ್ಲಿ 16678 ಸ್ವ್ಯಾಬ್ ಸಂಗ್ರಹಿಸಿ ಪರೀಕ್ಷಿಸಲಾಗಿತ್ತು. ಅವರಲ್ಲಿ 880 ಜನರಿಗೆ ಪಾಸಿಟಿವ್ ಬಂದಿದೆ. ಬಳ್ಳಾರಿ-12, ಸಂಡೂರು-3, ಸಿರಗುಪ್ಪ-2, ಹೊಸಪೇಟೆ- 5, ಅದೋನಿ-3, ಗಂಗಾವತಿ, ಚಿತ್ರದುರ್ಗ, ರಾಯದುರ್ಗ ಮತ್ತು ರಾಯಚೂರು ತಲಾ ಒಂದು ಸಾವನ್ನಪ್ಪಿದ್ದಾರೆ ಎಂದರು.
ಪರಿಣಿತ ತಂಡದಿಂದ ಸಾವುಗಳ ಪರಿಶೀಲನೆ: ಬಳ್ಳಾರಿ ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆ ಬೆಂಗಳೂರಿನ ಪರಿಣಿತ 4 ತಜ್ಞ ವೈದ್ಯರು ವೀಡಿಯೋ ಕಾನ್ಫರೆನ್ಸ್ ಮೂಲಕ 29 ಸಾವುಗಳ ಪರಿಶೀಲನೆ ನಡೆಸಿದರು. ಈ ಸಾವನ್ನಪ್ಪಿದವರು ಯಾವ ಕಾಯಿಲೆಗಳಿಂದ ಬಳಲುತ್ತಿದ್ದರು. ಯಾವಾಗ ಆಸ್ಪತ್ರೆಗೆ ಬಂದಿದ್ದರು. ನೀಡಲಾದ ಚಿಕಿತ್ಸೆ ವಿವರ ಸೇರಿದಂತೆ ಅಗತ್ಯ ಮಾಹಿತಿ ಪಡೆದುಕೊಂಡರು. ಪರಿಣಿತರು ಸಹ ತಾವು ನೀಡಲಾದ ಚಿಕಿತ್ಸೆ ಸರಿಯಾಗಿಯೇ ಇದೇ. ಅವರು ಆಸ್ಪತ್ರೆಗೆ ಬರುವುದು ತಡವಾದ ಕಾರಣ ಈ ರೀತಿ ಸಾವಿನ ಕದ ತಟ್ಟಿದ್ದಾರೆ ಎಂದು ವರದಿ ನೀಡಿದ್ದಾರೆ ಎಂದು ವಿಮ್ಸ್ ನಿರ್ದೇಶಕ ಡಾ|ದೇವಾನಂದ್ ಅವರು ಸಭೆಗೆ ವಿವರಿಸಿದರು.
ವಿಮ್ಸ್ ನಿರ್ದೇಶಕ ಡಾ| ದೇವಾನಂದ ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಬಸರೆಡ್ಡಿ ಅವರು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಹಾಗೂ ಸಾವನ್ನಪ್ಪಿದರೇ ಮೃತದೇಹ ಸ್ಮಶಾನಕ್ಕೆ ತೆಗೆದುಕೊಂಡು ಹೋಗಬೇಕಾಗುವವರೆಗೆ ಎದುರಿಸುತ್ತಿರುವ ಸಮಸ್ಯೆಗಳನ್ನು ಸಭೆಯಲ್ಲಿ ವಿವರವಾಗಿ ಬಿಚ್ಚಿಟ್ಟರು ಮತ್ತು ಭಾವೋದ್ವೇಗಕ್ಕೊಳಗಾದ ಪ್ರಸಂಗಗಳು ಸಭೆಯಲ್ಲಿ ನಡೆದವು. ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಮಾತನಾಡಿ, ಬೆಂಗಳೂರು ಹೊರತುಪಡಿಸಿದರೇ ಅತ್ಯಂತ ಉತ್ತಮ ವೈದ್ಯರು ನಮ್ಮಲ್ಲಿದ್ದಾರೆ. ಸಾವಿನ ಪ್ರಮಾಣ ಅಧಿಕವಾಗಿರುವುದರಿಂದ ಎದೆಗುಂದದೇ ರೋಗಿಗಳ ಗುಣಮುಖವಾಗುವವರೆಗೆ ಕೊನೆಯ ಪ್ರಯತ್ನದ ರೀತಿಯಲ್ಲಿ ಚಿಕಿತ್ಸೆ ಮುಂದುವರಿಸಿ ಎಂದರು.
ವಿಮ್ಸ್‌ನಲ್ಲಿರುವ 200 ಪಿಜಿ ವಿದ್ಯಾರ್ಥಿಗಳನ್ನು ಕೋವಿಡ್ ಚಿಕಿತ್ಸಾ ಕೆಲಸಕ್ಕೆ ಬಳಸಿಕೊಳ್ಳಿ ಎಂದರು. ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಸು ದೀರ್ಘ ಚರ್ಚೆಗಳು ನಡೆದವು. ಸಭೆಯಲ್ಲಿ ಶಾಸಕ ಸೋಮಶೇಖರ್ ರೆಡ್ಡಿ, ಜಿಪಂ ಸಿಇಒ ಕೆ.ನಿತೀಶ್, ಎಸ್ಪಿ ಸಿ.ಕೆ. ಬಾಬಾ ಮತ್ತಿತರರು ಇದ್ದರು.