Advertisement

Mangaluru: ಸೈನಿಕರನ್ನು ಗೌರವದಿಂದ ನಡೆಸಿಕೊಳ್ಳಿ: ಬ್ರಿ| ಐ.ಎನ್‌. ರೈ

11:28 AM Jul 27, 2024 | Team Udayavani |

ಮಂಗಳೂರು, ಜು. 26: ಸೈನಿಕರಿಗೆ ಸಮ್ಮಾನ ಮಾಡದಿದ್ದರೂ ಪರವಾಗಿಲ್ಲ. ಆದರೆ ಯಾವತ್ತಿಗೂ ಅವಮಾನ, ಅಗೌರವ ಮಾಡಲೇಬಾರದು. ಸೈನಿಕರು ಕಚೇರಿ ಕೆಲಸ ಅಥವಾ ಇತರ ಕಾರ್ಯಗಳಿಗೆ ಇಲಾಖೆಗಳಿಗೆ ಬಂದಾಗ ಅವರನ್ನು ಗೌರವದಿಂದ ನಡೆಸಿಕೊಳ್ಳಿ ಎಂದು ನಿವೃತ್ತ ಸೇನಾನಿ ಐ.ಎನ್‌. ರೈ ಹೇಳಿದರು.

Advertisement

ಕಾರ್ಗಿಲ್‌ ವಿಜಯ ದಿವಸ್‌ 25ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಮನಪಾ ಮಂಗಳಾ ಸಭಾಂಗಣದಲ್ಲಿ ಶುಕ್ರವಾರ ಜರಗಿದ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕುಟುಂಬ ಸಮೇತ ವಿದೇಶಗಳಿಗೆ ಪ್ರವಾಸ ತೆರಳುವವರು ಕೆಲವರಿದ್ದಾರೆ. ಆದರೆ ಅಲ್ಲಿಗೆ ತೆರಳುವ ಬದಲು ನಮ್ಮ ದೇಶದ ಜಮ್ಮು, ಕಾಶ್ಮೀರ, ಲೇಹ್‌, ಕಾರ್ಗಿಲ್‌ ಪ್ರದೇಶಗಳಿಗೆ ತೆರಳಿದರೆ ದೇಶದ ಸೈನಿಕರ ಬಗ್ಗೆ ತಿಳಿಯಬಹುದಾಗಿದೆ ಎಂದರು.

ನಾನು ಸೈನ್ಯಕ್ಕೆ ಸೇರಲು ಹೊರಟಾಗ ಅವನು ಸಾಯಲು ಹೋಗುತ್ತಿದ್ದಾನೆ ಎಂದು ಹೇಳಿದ್ದರು. 4-5 ಬಾರಿ ಸಾವಿನ ಅಂಚಿಗೆ ತೆರಳಿ ಮತ್ತೆ ಬದುಕಿ ಬಂದಿದ್ದೇನೆ. ಮೂರು ತಿಂಗಳ ಕಾಲ ಐಸಿಯುನಲ್ಲಿದ್ದೆ ಎಂದು ಬ್ರಿ| ರೈ ಹೇಳಿದರು.

ಮಂಗಳೂರು ಪಾಲಿಕೆಯಿಂದ “ನಮ್ಮ ಯೋಧ’ ನೆರವು: ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಮಾತನಾಡಿ, ದೇಶ ಸೇವೆ ಸಲ್ಲಿಸುತ್ತಿರುವ ಯೋಧರು ಸೇವಾ ಅವಧಿಯಲ್ಲಿ ವೀರ ಮರಣ ಹೊಂದಿದಲ್ಲಿ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ “ನಮ್ಮ ಯೋಧ’ ಎಂಬ ವಿಶೇಷ ಕಾರ್ಯಕ್ರಮವನ್ನು ಪಾಲಿಕೆ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಅದರಂತೆ ಪಾಲಿಕೆ ವ್ಯಾಪ್ತಿಯ ಇಬ್ಬರು ಯೋಧರ ಕುಟುಂಬಗಳಿಗೆ ತಲಾ 5 ಲಕ್ಷ
ರೂ. ಮೊತ್ತದ ಚೆಕ್‌ ನೀಡಲಾಗುತ್ತಿದೆ. ಹುತಾತ್ಮ ಕ್ಯಾ| ಎಂ.ವಿ. ಪ್ರಾಂಜಲ್‌ ಅವರ ಹೆಸರಿನಲ್ಲಿ ವೃತ್ತ ನಿರ್ಮಾಣ, ರೊನಾಲ್ಡ್‌ ಕೆವಿನ್‌ ಸೆರಾವೊ ಅವರ ಹೆಸರಿನ ರಸ್ತೆ ನಿರ್ಮಾಣಕ್ಕೂ ಅನುದಾನ ನೀಡಲಾಗುತ್ತಿದೆ ಎಂದರು.

Advertisement

ಉಪಮೇಯರ್‌ ಸುನೀತಾ, ಮನಪಾ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ವಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ನಿವೃತ್ತ ಯೋಧ ಹಾಗೂ ಮನಪಾ ಆಯುಕ್ತ ಆನಂದ ಸಿ.ಎಲ್‌. ಉಪಸ್ಥಿತರಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ವರುಣ್‌ ಚೌಟ ಸ್ವಾಗತಿಸಿದರು. ಕಾರ್ಪೊರೇಟರ್‌ ಕಿರಣ್‌ ಕುಮಾರ್‌ ಕೋಡಿಕಲ್‌ ವಂದಿಸಿದರು. ಮಂಜುಳಾ ಶೆಟ್ಟಿ ನಿರೂಪಿಸಿದರು. ಕಾರ್ಪೊರೇಟರ್‌ ಜಗದೀಶ್‌ ಶೆಟ್ಟಿ ದೇಶಭಕ್ತಿ ಗೀತೆ ಹಾಡಿದರು.

ಮನಪಾದಿಂದ 10 ಲಕ್ಷ ರೂ. ನೆರವು
ವೀರ ಮರಣ ಹೊಂದಿದ ಅಳಪೆ ಉತ್ತರ ಉಮೀಕಾನದ ಬಿಎಸ್‌ ಎಫ್‌ ಹವಾಲ್ದಾರ್‌ ಹರೀಶ್‌ ಕುಮಾರ್‌ ಅವರ ಪತ್ನಿ ಗೀತಾಕುಮಾರಿ ಹಾಗೂ ಶಕ್ತಿನಗರ ಮುಗ್ರೋಡಿಯ ಪ್ಯಾರಾ ಮಿಲಿಟರಿ ಹೆಡ್‌ ಕಾನ್‌ ಸ್ಟೆಬಲ್‌ ಮುರಳೀಧರ ಬಿ.ಎಸ್‌. ಅವರ ಪತ್ನಿ ಉಷಾಕಿರಣ್‌ ಅವರಿಗೆ ತಲಾ 5 ಲಕ್ಷ ರೂ. ಮೊತ್ತದ ಚೆಕ್‌ ವಿತರಿಸಲಾಯಿತು. ನಿವೃತ್ತ ಯೋಧರನ್ನು ಸಮ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next