Advertisement

ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ: ಡಿಸಿ ಡಾ|ರಾಜೇಂದ್ರ

01:30 AM Oct 02, 2020 | mahesh |

ಮಂಗಳೂರು: ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಬರುವ ರೋಗಿಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸುವುದರ ಜತೆಗೆ ಉತ್ತಮ ಚಿಕಿತ್ಸೆ ನೀಡಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ಸೂಚಿಸಿದ್ದಾರೆ.

Advertisement

ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ಅಧೀಕ್ಷಕರ ಕೊಠಡಿಯಲ್ಲಿ ಗುರುವಾರ ನಡೆದ ಆರೋಗ್ಯ ರಕ್ಷಾ ಸಮಿತಿಯ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಡರೋಗಿಗಳು ಹೆಚ್ಚಾಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬರುತ್ತಾರೆ. ರೋಗಿಗಳನ್ನು ಮಾನವೀಯತೆಯ ನೆಲೆಯಲ್ಲಿ ಪ್ರೀತಿ, ವಿಶ್ವಾಸದಿಂದ ನೋಡುವುದರ ಜತೆ ಒಳ್ಳೆಯ ಚಿಕಿತ್ಸೆ ನೀಡಿದರೆ ಬೇಗ ಗುಣಮುಖರಾಗುತ್ತಾರೆ ಎಂದರು.

ವೈದ್ಯಕೀಯ ನೆರವನ್ನು ಕೇಳಿ ಬರುವ ರೋಗಿಗಳಿಗೆ ಉಚಿತ ಔಷಧಗಳು ಸಿಗು ವಂತೆ ನೋಡಿಕೊಳ್ಳಬೇಕು. ಹೊರಗಡೆ ಔಷಧ ಪಡೆಯಲು ಚೀಟಿಯನ್ನು ನೀಡಬಾರದು ಇದಕ್ಕಾಗಿ ಔಷಧಗಳ ದಾಸ್ತಾನುಗಳು ಆಸ್ಪತ್ರೆಗಳಲ್ಲಿ ಇರುವಂತೆ ನೋಡಿಕೊಳ್ಳ ಬೇಕೆಂದು ಸೂಚನೆ ನೀಡಿದರು. ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ ಅಭಿಯಾನದಡಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಾಗ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಂದ ಅಭಿಪ್ರಾಯಗಳನ್ನು ಪಡೆದು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಜಿಲ್ಲಾ ಆಸ್ಪತ್ರೆಗಳನ್ನು ಬೆಂಕಿ ಅವಘಡಗಳಿಂದ ತಪ್ಪಿಸಲು ಅಗತ್ಯ ಇರುವ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು. ಪ್ರತೀ 6 ತಿಂಗಳಿಗೊಮ್ಮೆ ಅಗ್ನಿಶಾಮಕ ದಳದ ಸುರಕ್ಷಾ ಅಧಿಕಾರಿಯಿಂದ ಫೈರ್‌ ಸೇಫ್ಟಿಯ ಬಗ್ಗೆ ತಪಾಸಣೆ ನಡೆಸಿ, ಅವರು ನೀಡುವ ವರದಿಯನ್ನು ಆಧರಿಸಿ ಫೈರ್‌ ಸೇಫ್ಟಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದರು.

ಸರಕಾರದ ನಿಯಮದಂತೆ ಖರೀದಿ
ಆಸ್ಪತ್ರೆಗೆ ತುರ್ತಾಗಿ ಆವಶ್ಯಕವಿರುವ ಔಷಧಗಳನ್ನು ಖರೀದಿಸುವಾಗ ಸರಕಾರದ ನಿಯಮಗಳನ್ನು ಪಾಲಿಸಿ ಖರೀದಿ ಮಾಡಬೇಕು. ಜಿಲ್ಲಾ ಆಸ್ಪತ್ರೆಯ ಪ್ರತೀ ವರ್ಷದ ಆದಾಯವನ್ನು ಕ್ರೋಡೀಕರಿಸುವ ಜತೆ ಹೆಚ್ಚುವರಿ ಹಣವನ್ನು ಆಸ್ಪತ್ರೆಯ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಬೇಕೆಂದು ಸೂಚನೆ ನೀಡಿದರು. ಮಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ವತಿಯಿಂದ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಸಂಬಂಧ ಪ್ರತ್ಯೇಕ ಸಭೆಯನ್ನು ಮುಂದಿನ ದಿನಗಳಲ್ಲಿ ಕರೆಯುವುದರೊಂದಿಗೆ ಚರ್ಚಿಸಿ ಅಗತ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳವಂತೆ ಸೂಚನೆ ನೀಡಿದರು.

Advertisement

ಕಾರ್ಡ್‌ ಇಲ್ಲದಿದ್ದರೂ ಚಿಕಿತ್ಸೆ ನೀಡಿ
ಜಿಲ್ಲಾ ಆಸ್ಪತ್ರೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡು ಕಾರ್ಯ ನಿರ್ವಹಿಸುತ್ತಿರುವ ಸಿಬಂದಿಗೆ ಇಎಸ್‌ಐ, ಪ್ರಾವಿಡೆಂಟ್‌ ಫಂಡ್‌ ಒಳಗೊಂಡಂತೆ ಟೆಂಡರ್‌ನಲ್ಲಿ ನಿಗದಿಪಡಿಸಿರುವ ವೇತನವನ್ನು ತಲಪುವಂತೆ ನೋಡಿಕೊಳ್ಳಬೇಕು. ಕೆಲವು ಅರ್ಹ ಬಡತನ ರೇಖೆಗಳಗಿಂತ ಕೆಳಗಿರುವವರು ಚಿಕಿತ್ಸೆಗೆ ಬಂದಾಗ ಬಿಪಿಎಲ್‌ ಕಾರ್ಡ್‌ ಹೊಂದಿಲ್ಲ ಎಂಬ ಕಾರಣಕ್ಕೆ ಚಿಕಿತ್ಸೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಮತ್ತು ಅವರ ನೆರವಿಗೆ ಸಮಾಲೋಚಕರನ್ನು ನೇಮಿಸಿಕೊಳ್ಳಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಚಂದ್ರ ಬಾಯರಿ, ಲೇಡಿಗೋಶನ್‌ ಪ್ರಭಾರ ಅಧೀಕ್ಷಕಿ ದುರ್ಗಾಪ್ರಸಾದ್‌, ಕೆ.ಎಂ.ಸಿ. ಡೀನ್‌ ಎಂ.ವಿ. ಪ್ರಭು, ವೆನ್‌ಲಾಕ್‌ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರು ಹಾಗೂ ಅಧೀಕ್ಷಕ ಡಾ| ಸದಾಶಿವ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next