ಕೊಪ್ಪಳ: ಶ್ರೀ ಗವಿಸಿದ್ಧೇಶ್ವರ ಸಂಸ್ಥಾನ ಗವಿಮಠದ 17ನೇ ಪೀಠಾ ಧಿಪತಿ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ಪುಣ್ಯಾರಾಧನೆ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಶತಮಾನೋತ್ಸವ ನಿಮಿತ್ತ ಮಾ. 26ರಂದು ನಗರದ ಶ್ರೀ ಗವಿಸಿದ್ಧೇಶ್ವರ ಆರ್ಯುವೇದ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿರುವ ಕ್ಯಾನ್ಸರ್ ತಪಾಸಣೆ ಮತ್ತು ಉಚಿತ ಚಿಕಿತ್ಸಾ ಶಿಬಿರದ ಜಾಗೃತಿಗೆ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಗೆ ಬುಧವಾರ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಚಾಲನೆ ನೀಡಿದರು.
ಗವಿಮಠದ ಆವರಣದಲ್ಲಿ ಚಾಲನೆ ನೀಡಿದ ಬಳಿಕ ಬೈಕ್ ರ್ಯಾಲಿಯು ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕ ವೃತ್ತ, ಬಸವೇಶ್ವರ ವೃತ್ತದ ಮೂಲಕ ಗವಿಮಠ ತಲುಪಿತು. ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ| ಶ್ರೀನಿವಾಸ ಹ್ಯಾಟಿ ಅವರು, ಕ್ಯಾನ್ಸರ್ ಮಾರಕ ಕಾಯಿಲೆಯಾಗಿದ್ದರೂ ಗುಣಮುಖವಾಗುವ ಕಾಯಿಲೆಯಾಗಿದೆ. ಹೀಗಾಗಿ ಬೇಗನೆ ಪತ್ತೆಯಾದರೆ ಸಂಪೂರ್ಣ ಗುಣವಾಗುವುದರಿಂದ ಕ್ಯಾನ್ಸರ್‌ಗೆ ಭಯಪಡುವ ಅಗತ್ಯವಿಲ್ಲ. ಆದರೆ ಅದರ ಕುರಿತು ಜಾಗೃತಿ ಹಾಗೂ ಮುನ್ನೆಚ್ಚರಿಕೆ ಅಗತ್ಯ ಎಂದರು.
ಈಗ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಕ್ಯಾನ್ಸರ್ ತಪಾಸಣೆ ಮತ್ತು ಉಚಿತ ಚಿಕಿತ್ಸಾ ಶಿಬಿರ ಹಮ್ಮಿಕೊಂಡಿದ್ದು, ಎಲ್ಲರೂ ಇದರ ಸದುಪಯೋಗ ಪಡೆಯಬೇಕು. ಕ್ಯಾನ್ಸರ್ ಲಕ್ಷಣ ಇರುವವರು ಭಯಪಡದೇ ಶಿಬಿರದಲ್ಲಿ ತಪಾಸಣೆಗೆ ಒಳಗಾಗಿ ಅಗತ್ಯವಿದ್ದರೇ ಉಚಿತ ಚಿಕಿತ್ಸೆ ಸಹ ಪಡೆದುಕೊಳ್ಳಬಹುದು ಎಂದರು.
ಈ ಉಚಿತ ಚಿಕಿತ್ಸಾ ಶಿಬಿರದ ಕುರಿತು ಈಗಾಗಲೇ ಜಿಲ್ಲಾದ್ಯಂತ ಜಾಗೃತಿ ಮೂಡಿಸಲಾಗಿದೆ. ಜಿಲ್ಲೆಯ ವಿವಿಧೆಡೆ ಸ್ಕ್ರೀನಿಂಗ್ ಕ್ಯಾಂಪ್ ಸಹ ನಡೆಸಲಾಗಿದೆ. ಈಗಾಗಲೇ ಸಂಶಯಸ್ಪಾದ ರೋಗಿಗಳನ್ನು ಚಿಕಿತ್ಸೆಗೆ ಒಳಪಡಿಸಲಾಗುವುದು. ಪತ್ತೆಯಾದರೇ ಅವರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲು ಶ್ರೀಗಳು ನಿರ್ಧರಿಸಿದ್ದಾರೆ. ಹೀಗಾಗಿ, ಇದೊಂದು ಬಹುದೊಡ್ಡ ಅವಕಾಶವಾಗಿರುವುರಿಂದ ಪ್ರತಿಯೊಬ್ಬರಲ್ಲಿಯೂ ಈ ಜಾಗೃತಿ ಮೂಡಿಸುವ ಉದ್ದೇಶದಿಂದ ರ್ಯಾಲಿ ನಡೆಸಲಾಯಿತು ಎಂದು ಮಾಹಿತಿ ನೀಡಿದರು.
ಶ್ರೀ ಗವಿಸಿದ್ಧೇಶ್ವರ ಆರ್ಯುವೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಬಿ.ಎಸ್. ಸವಡಿ ಮಾತನಾಡಿ, ಕ್ಯಾನ್ಸರ್ ರೋಗಿಗಳ ಕುರಿತು ಮಾಹಿತಿಯನ್ನು ನೀಡಿ, ಶಿಬಿರಕ್ಕೆ ಕರೆ ತರಲು ಮನವಿ ಮಾಡಿದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಸೋಮರಡ್ಡಿ ಅಳವಂಡಿ, ಪ್ರಧಾನ ಕಾರ್ಯದರ್ಶಿ ಡಾ| ಶ್ರೀನಿವಾಸ ಹ್ಯಾಟಿ, ಡಾ| ಮಂಜುನಾಥ, ಡಾ| ಶಿವನಗೌಡ, ಸು ಧೀರ್ ಅವರಾದಿ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ನೀತಾ ತಂಬ್ರಳ್ಳಿ, ಉಪಾಧ್ಯಕ್ಷೆ ಪದ್ಮಾ ಜೈನ್, ಜೆಸಿಐ ವಿನೀತಾ ಪಟ್ಟಣಶೆಟ್ಟಿ, ಗೀತಾ ಪಾಟೀಲ್, ಮಂಜುಳಾ ಕರಡಿ, ಪ್ರತಿಭಾ ಗಾಯಕವಾಡ್, ಕೀರ್ತಿ ಪಾಟೀಲ, ಸುಜಾತಾ ಪಟ್ಟಣಶೆಟ್ಟಿ, ತ್ರೀಶಾಲ, ಡಾ| ಪ್ರಭು ನಾಗಲಾಪುರ, ಡಾ| ಸಿ.ಎಸ್. ಕರಮುಡಿ, ಕರ್ನಾಟಕ ವಾರಿಯರ್ಸ್ ನ್ಪೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷ ಬಸವರಾಜ ಕರುಗಲ್ ಸೇರಿ ಇತರರಿದ್ದರು.