Advertisement

ಸರ್ಕಾರಗಳಿಂದ ಆಲಯಗಳ ಸಂಪತ್ತು ಕೊಳ್ಳೆ

06:17 AM Jan 14, 2019 | |

ಬೆಂಗಳೂರು: ಹೆಚ್ಚು ಭಕ್ತರು ಭೇಟಿ ನೀಡುವ ಮತ್ತು ಹೆಚ್ಚು ಆದಾಯ ಬರುವ ದೇವಾಲಯಗಳ ಮೇಲೆ ಸರ್ಕಾರಗಳ ಕಣ್ಣು ಹೆಚ್ಚಾಗಿದೆ. ಹಿಂದೆ ಘಜ್ನಿ ಮೊಹಮ್ಮದ್‌ ಸೋಮವಾನಾಥ ದೇವಾಯಲದ ಮೇಲೆ 17 ಬಾರಿ ದಾಳಿ ನಡೆಸಿ ಸಂಪತ್ತು ದೋಚಿಕೊಂಡು ಹೋಗಿದ್ದ. ಆದರೆ, ಈಗ ಸರ್ಕಾರದ ರೂಪದಲ್ಲಿರುವ ಈಗಿನ ಘಜ್ನಿ ಮೊಹಮ್ಮದ್‌ಗಳು ಸಂಪತರಿತ ದೇವಾಲಯಗಳ ಮೇಲೆ ದಾಳಿ ಮಾಡಿ ಅಲ್ಲಿನ ಸಂಪತ್ತು ಹೊಡೆಯುತ್ತಿದ್ದಾರೆ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎನ್‌. ಕುಮಾರ್‌ ಕಳವಳ ವ್ಯಕ್ತಪಡಿಸಿದ್ದಾರೆ.

Advertisement

ದಿ ಮಿಥಿಕ್‌ ಸೊಸೈಟಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ “ಶ್ರೀ ಕುಕ್ಕೆ ಸುಬ್ರಹ್ಮಣ್ಯ: ಇತಿಹಾಸ ಮತ್ತು ಸಂಸ್ಕೃತಿ’ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಆವರು, ದೇಶದಲ್ಲಿ ಯಾವ್ಯಾವ ದೇವಸ್ಥಾನಗಳಿಗೆ ಹೆಚ್ಚು ಭಕ್ತರಿದ್ದಾರೆೆ, ಎಲ್ಲಿ ಹೆಚ್ಚು ಸಂಪತ್ತು ಮತ್ತು ಆದಾಯ ಇರುತ್ತದೆ ಅವುಗಳ ಮೇಲೆ ಸರ್ಕಾರಗಳ ಕಣ್ಣು ಯಾವಾಗಲೂ ಇರುತ್ತದೆ.

ಚರಿತ್ರೆಯ ಪುಟಗಳನ್ನು ತಿರುವಿ ಹಾಕಿದರೆ ಸೋಮನಾಥ ದೇವಾಲಯದ ಮೇಲೆ ಘಜ್ನಿ ಮೊಹಮ್ಮದ್‌ 17 ಬಾರಿ ದಾಳಿ ಮಾಡಿ ಸಂಪತ್ತನ್ನು ದೋಚಿಕೊಂಡು ಹೋಗಿದ್ದ. ಈಗಿನ ಸರ್ಕಾರಗಳು ಸಹ ಸಂಪತºರಿತ ದೇವಾಲಯಗಳ ಹಣ ಹೊಡೆದು, ಆ ದೇವಸ್ಥಾನಗಳಿಗೆ ಏನನ್ನೂ ಮಾಡದೆ ಜೀವನ ಮಾಡುತ್ತವೆ. ದೇವಾಲಯಗಳ ಸಂಪತ್ತು ದೋಚುವ ಈ ಕೆಟ್ಟ ಸಂಸ್ಕೃತಿ ನಿಲ್ಲಬೇಕು. ಇದಕ್ಕಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.

ವೈವಿಧ್ಯತೆಯಲ್ಲಿ ಏಕತೆ ನಮ್ಮ ದೇಶದ ಶಕ್ತಿ ಹಾಗೂ ಗುಣ. ಆದರೆ, ಅದು ದೇಶದ ಸಂಸ್ಕೃತಿ ಧ್ವಂಸ ಮಾಡುವ ಕೈಗಳಿಗೆ ಸಿಗದಂತೆ ರಕ್ಷಣೆ ಮಾಡಬೇಕಾಗಿದೆ. ನಂಬಿಕೆಯ ಬಲವನ್ನು ಧ್ವಂಸ ಮಾಡಲು ಹಲವು ಮಾರ್ಗಗಳನ್ನು ಹುಡುಕಿ ಅಲ್ಲಿ ಏನೂ ಮಾಡಲಾಗದೆ ಇಂದು ಧರ್ಮ ಮತ್ತು ನಂಬಿಕೆಯ ಮೇಲೆ ಆಕ್ರಮಣ ನಡೆಸಲಾಗುತ್ತಿದೆ.

ಎಲ್ಲ ದೇಶದವರಿಗೆ ನೆಲೆ ಕೊಟ್ಟು ಬೆಳೆಯಲು ಬಿಟ್ಟು ಈ ದೇಶದ ಧರ್ಮ ಮತ್ತು ನಂಬಿಕೆಗಳನ್ನು ಸಂವಿಧಾನ, ಮಾನವಹಕ್ಕು, ಲಿಂಗ ತಾರತಮ್ಯ ಹಾಗೂ ಅಸ್ಪೃಶ್ಯತೆಯ ಮೂಲಕ ನೋಡುವ ಧರ್ಮ, ನಂಬಿಕೆ ಮತ್ತು ಸಂಸ್ಕೃತಿಯನ್ನು ಧ್ವಂಸಗೊಳಿಸುವ ಹೊಸ ವರ್ಗ ಹುಟ್ಟಿಕೊಂಡಿದೆ. ಧರ್ಮವನ್ನು ಸಂವಿಧಾನ ವಿರೋಧಿ ಎಂಬಂತೆ ಬಿಂಬಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದರು.

Advertisement

ಪಂಡಿತರ ಜವಾಬ್ದಾರಿ ದೊಡ್ಡದು: ಧರ್ಮ ಮತ್ತು ನಂಬಿಕೆಗೆ ಸಂಬಂಧಿಸಿದ ವಿಚಾರಗಳು ಸುಪ್ರೀಂಕೋರ್ಟ್‌ ಅಂಗಳಕ್ಕೆ ಹೋಗುತ್ತಿವೆ. ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಸಹ ಕೋರ್ಟ್‌ ಬಾಗಿಲು ತಟ್ಟಬೇಕಾಯಿತು. ದೇವಾಲಯಗಳ ವಿಚಾರ ಬಂದಾಗ ಧಾರ್ಮಿಕ ನಂಬಿಕೆಗಳ ದೃಷ್ಟಿಕೋನ ಪರಿಗಣಿಸಬೇಕು.

ಧರ್ಮ ಮತ್ತು ನಂಬಿಕೆಗಳ ಮೇಲೆ ಆಕ್ರಮಣಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಪಂಡಿತರ ಜವಾಬ್ದಾರಿ ಬಹಳ ದೊಡ್ಡದು. ಧರ್ಮ ಮತ್ತು ನಂಬಿಕೆಗಳ ಬಗೆಗಿನ ಗೊಂದಲಗಳ ಬಗ್ಗೆ ಜನ ಸಾಮಾನ್ಯರಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ಪಂಡಿತರು ಬರೆಯಬೇಕು ಎಂದು ನಿವೃತ್ತ ನ್ಯಾ. ಕುಮಾರ್‌ ಸಲಹೆ ನೀಡಿದರು. ಮಿಥಿಕ್‌ ಸೊಸೈಟಿಯ ಗೌರವ ಅಧ್ಯಕ್ಷ ಪ್ರೊ. ಕೃ. ನರಹರಿ, ಗೌರವ ಕಾರ್ಯದರ್ಶಿ ವಿ.ನಾಗರಾಜ್‌, ಪ್ರೊ.ಎಂ.ಕೊಟ್ರೇಶ್‌ ಮತ್ತಿತರರು ಉಪಸ್ಥಿತರಿದ್ದರು.

ವಿದ್ವತೂರ್ಣ ಗೋಷ್ಠಿಗಳು: ವಿಚಾರ ಸಂಕಿರಣದ ಅಂಗವಾಗಿ ಎರಡು ವಿದ್ವತೂರ್ಣ ವಿಚಾರಗೋಷ್ಠಿಗಳು ನಡೆದವು. ಇದರಲ್ಲಿ ಕುಕ್ಕೆ ಸುಬ್ರಹ್ಮಣ್ಯದ ಭೌಗೋಳಿಕ ಪರಿಸರ ಹಾಗೂ ಪ್ರಾಗೈತಿಹಾಸ, ಸುಬ್ರಹ್ಮಣ್ಯ ಆರಾಧನೆ: ಮೂಲ ಮತ್ತು ವಿಕಾಸ, ಶಾಸನಗಳು, ದೇವಾಲಯ ವಾಸ್ತು, ಜಲವಿಜ್ಞಾನ, ಜಾನಪದ ಸಂಸ್ಕೃತಿ, ಐತಿಹ್ಯ ಮತ್ತು ನಂಬಿಕೆ,

ತಾಡೋಲೆಗಳು; ಪೂಜಾ ವಿಧಾನಗಳ ವಿಷಯಗಳ ಬಗ್ಗೆ ಡಾ. ಜೆ.ಕೆ.ಮಲ್ಲಿಕಾರ್ಜುನಪ್ಪ, ಪ್ರೊ. ವಾಸದೇವ ಬಡಿಗೇರ, ಪ್ರೊ. ಎಂ. ಕೊಟ್ರೇಶ್‌, ಎಸ್‌. ಕಾರ್ತಿಕ್‌, ಡಾ. ಹರಿಹರ ಶ್ರೀನಿವಾಸರಾವ್‌, ಡಾ. ಮಂಜುನಾಥ ಬೇವಿನಕಟ್ಟಿ, ದು.ಗು. ಲಕ್ಷ್ಮಣ್‌ ಹಾಗೂ ಸಿ.ಜೆ. ವಿಜಯಸಿಂಗ ಆಚಾರ್ಯ ಪ್ರಬಂಧಗಳನ್ನು ಮಂಡಿಸಿದರು.

ಒಂಬತ್ತನೇ ಶತಮಾನದ ಶಾಸನಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯದ ಬಗ್ಗೆ ಉಲ್ಲೇಖವಿದೆ. ಆದರೆ ಅದಕ್ಕಿಂತಲೂ ಹಿಂದಿನಿಂದ ಆದು ಇತ್ತು. 33 ಯತಿಗಳ ಪರಂಪರೆ ಇದೆ. ಶಾಸನಗಳ ಆಧಾರದಲ್ಲಿ ಕುಕ್ಕೆ ಸುಬ್ರಹ್ಮಣ್ಯದ ಪುನರ್‌ರಚನೆ, ಪುನರ್‌ ಅವಲೋಕನ ಅಗತ್ಯ.
-ಪ್ರೊ. ಎಂ. ಕೊಟ್ರೇಶ್‌

ಕುಕ್ಕೆ ಎಂಬ ಹೆಸರಿಗೆ ಪುರಾಣ ಮತ್ತು ಶಾಸನಗಳಲ್ಲಿ ಪುರಾವೆ ಇದೆ. ಅದಲ್ಲದೇ ಕುಕ್ಕೆಗೆ ಅಲ್ಲಿನ ಮೂಲನಿವಾಸಿಗಳಾದ ಮಲೆ ಕುಡಿಯರ ವ್ಯಕ್ತಿ ನಾಮ, ಸ್ಥಳ ನಾಮ, ಕುಲಕಸಬಿನಿಂದಲೂ ಆ ಹೆಸರು ಬಂದಿರಬಹುದು.
-ಪ್ರೊ. ಮಂಜುನಾಥ ಬೇವಿನಕಟ್ಟಿ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಎಲ್ಲ ಪೂಜಾ ವಿಧಾನಗಳು, ಧಾರ್ಮಿಕ ಕೈಂಕರ್ಯಗಳು ತಂತ್ರಸಾರ ಸಂಗ್ರಹದ ಪ್ರಕಾರವೇ ನಡೆಯುತ್ತಿವೆ. ಪೂಜಾ ವಿಧಾನಗಳ ವಿಚಾರದಲ್ಲಿ ಶಾಸ್ತ್ರ ನಿರ್ಣಯದ ಅಂತರಂಗ ಪ್ರಮಾಣಗಳನ್ನು ಪರಿಗಣಿಸಬೇಕು.
-ಸಿ.ಜೆ.ವಿಜಯಸಿಂಹ ಆಚಾರ್ಯ

Advertisement

Udayavani is now on Telegram. Click here to join our channel and stay updated with the latest news.

Next