Advertisement
ಸತತ ಎರಡು ಬಾರಿಗೆ ದೇಶದ ನಂಬರ್ ಒನ್ ಸ್ವಚ್ಛ ನಗರಿ ಎಂಬ ಪ್ರಶಸ್ತಿಗಳಿಸಿದ ಹಿರಿಮೆ ಹೊಂದಿರುವ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮ್ಯಾನ್‌ಹೋಲ್‌ಗಳನ್ನು ಪೌರಕಾರ್ಮಿಕರಿಂದ ಸ್ವಚ್ಛಗೊಳಿಸಲಾಗುತ್ತಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾದ ಬೆನ್ನಲ್ಲೇ ಸ್ವತಃ ಮೈಸೂರು ಮಹಾ ನಗರಪಾಲಿಕೆ, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ದೂರಿನಲ್ಲಿ ಚರಂಡಿಗಳಲ್ಲಿ ನಿಧಿ ಶೋಧನೆ ಎಂಬ ಹೊಸದೊಂದು ವಿಚಾರವನ್ನು ಬಯಲು ಮಾಡಿದೆ.
Related Articles
Advertisement
ನಗರದ ರಾಮಾನುಜ ರಸ್ತೆಗೆ ಹೊಂದಿಕೊಂಡಂತಿರುವ ಬಸವೇಶ್ವರ ರಸ್ತೆಯ 15ನೇ ಕ್ರಾಸ್‌ನಲ್ಲಿ ಭಾನುವಾರ, ಮೂವರು ವ್ಯಕ್ತಿಗಳು ಮ್ಯಾನ್‌ಹೋಲ್‌ನಲ್ಲಿ ಇಳಿದು ಒಳಚರಂಡಿಯಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯವನ್ನು ಹೊರ ತೆಗೆಯುತ್ತಿದ್ದುದನ್ನು ಗಮನಿಸಿದ ಕಾನೂನು ವಿದ್ಯಾರ್ಥಿ ಎನ್.ಪುನೀತ್ ಎಂಬುವರು ಅವರನ್ನು ಮ್ಯಾನ್‌ಹೋಲ್‌ಗೇಕೆ ಇಳಿದಿದ್ದೀರಿ ಎಂದು ಪ್ರಶ್ನಿಸಿದಾಗ ಉತ್ತರಿಸಲು ತಡಬಡಾಯಿಸಿದ್ದಾರೆ.
ಪಾಲಿಕೆ ಹೇಳುವುದೇನು?: ಜುಲೈ 21ರಂದು ಮೈಸೂರು ನಗರದ ಬಸವೇಶ್ವರ ರಸ್ತೆ 15ನೇ ಕ್ರಾಸ್‌ನಲ್ಲಿ ಮ್ಯಾನ್‌ಹೋಲ್‌ನಲ್ಲಿ ಇಳಿದಿದ್ದಾರೆ ಎಂದು ವಾಹಿನಿಗಳಲ್ಲಿ ಸುದ್ದಿ ಪ್ರಸಾರವಾದ ಹಿನ್ನೆಲೆಯಲ್ಲಿ ತಕ್ಷಣ ಸ್ಥಳಕ್ಕೆ ಹೋಗಿ ಪರಿಶೀಲಿಸಲಾಗಿದ್ದು, ಈ ಸ್ಥಳದಲ್ಲಿ ಯಾವುದೇ ರೀತಿಯ ಮ್ಯಾನ್‌ಹೋಲ್ ಬ್ಲಾಕ್ ಆಗಿದೆ ಎಂದು ನಗರಪಾಲಿಕೆಯ ನಿಯಂತ್ರಣ ಕೊಠಡಿಯಲ್ಲಿ ದೂರು ದಾಖಲಾಗಿರುವುದಿಲ್ಲ.
ಈ ಸಂಬಂಧ ವಾಹಿನಿಯಲ್ಲಿ ಪ್ರಸಾರವಾದ ದೃಶ್ಯದಲ್ಲಿ ಕಂಡುಬಂದ ವ್ಯಕ್ತಿಗಳು ನಗರಪಾಲಿಕೆ ಒಳಚರಂಡಿ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಯಾಗಲಿ ಅಥವಾ ಗುತ್ತಿಗೆದಾರರಿಗೆ ಸೇರಿದ ಸಿಬ್ಬಂದಿಯಲ್ಲ. ಸ್ಥಳ ಪರಿಶೀಲನೆ ನಡೆಸಿದ ಸಮಯದಲ್ಲಿ ಈ ಸ್ಥಳದಲ್ಲಿನ ಮ್ಯಾನ್‌ಹೋಲ್ ಬ್ಲಾಕ್ ಆಗಿರುವುದಿಲ್ಲ ಮತ್ತು ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರನ್ನು ವಿಚಾರಿಸಲಾಗಿದ್ದು, ಯಾರೋ ಮೂವರು ವ್ಯಕ್ತಿಗಳು ಬಂದು ಮ್ಯಾನ್‌ಹೋಲ್ ತೆರೆದು ಒಳಗೆ ಇಳಿದಿದ್ದರು.
ಹತ್ತಿರ ಹೋಗಿ ವಿಚಾರಿಸಿದಾಗ ಚಿನ್ನ-ಬೆಳ್ಳಿ ಮತ್ತು ದುಡ್ಡನ್ನು ಹುಡುಕುತ್ತಿದ್ದೇವೆ ಎಂದು ಹೇಳಿದರು ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಮೈಸೂರು ಮಹಾ ನಗರಪಾಲಿಕೆಯಿಂದ ಒಳಚರಂಡಿ ನಿರ್ವಹಣೆಗಾಗಿ ಅವಶ್ಯಕತೆ ಇರುವ ಸಾಕಷ್ಟು ಜೆಟ್ಟಿಂಗ್, ಡಿ-ಸಿಲ್ಟಿಂಗ್ ಹಾಗೂ ರಾಡಿಂಗ್ ಯಂತ್ರಗಳಿದ್ದು, ಯಂತ್ರೋಪಕರಣಗಳಿಂದ ಒಳಚರಂಡಿ ದೂರುಗಳನ್ನು ನಿರ್ವಹಣೆ ಮಾಡಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ.
ಪೊಲೀಸ್ ಠಾಣೆಗೆ ಪಾಲಿಕೆ ದೂರು: ಮೈಸೂರು ಮಹಾ ನಗರ ಪಾಲಿಕೆಯ ಒಳಚರಂಡಿ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ಮ್ಯಾನ್‌ಹೋಲ್ ಒಳಗೆ ಇಳಿದು ಕೆಲಸ ಮಾಡುವುದಿಲ್ಲ. ಅಪರಿಚಿತ ವ್ಯಕ್ತಿಗಳು ಕಾನೂನು ಬಾಹಿರವಾಗಿ ಮ್ಯಾನ್‌ಹೋಲ್‌ಗೆ ಇಳಿದಿರುವ ಕಾರಣ ಇವರುಗಳ ಮೇಲೆ ನಗರ ಪಾಲಿಕೆ ವತಿಯಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ತಿಳಿಸಿದ್ದಾರೆ.