Advertisement

ಒಂದೇ ಭಾಷೆ ಎನ್ನುವುದು ದೇಶದ್ರೋಹ

09:30 PM Sep 18, 2019 | Lakshmi GovindaRaju |

ಮೈಸೂರು: ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ಬಹುತ್ವದ ರಾಷ್ಟ್ರವಾಗಿದ್ದು, ಒಂದೇ ಭಾಷೆ ಎನ್ನುವುದು ದೇಶಕ್ಕೆ ಬಗೆಯುವ ದ್ರೋಹವಾಗಿದೆ ಎಂದು ಸಾಹಿತಿ ಡಾ.ಓ.ಎಲ್‌. ನಾಗಭೂಷಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಬಸವರಾಜ ಕಟ್ಟಿಮನಿ ಪ್ರತಿಷ್ಠಾನ ಬೆಳಗಾವಿ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಬಸವರಾಜ ಕಟ್ಟಿಮನಿ ಜನ್ಮಶತಮಾನೊತ್ಸವ ಅಂಗವಾಗಿ ಮುಕ್ತ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಬಸವರಾಜ ಕಟ್ಟಿಮನಿ ಸಾಹಿತ್ಯ ಸಮಕಾಲೀನ ಸಂದರ್ಭ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ವೈವಿಧ್ಯತೆಯಲ್ಲಿ ಏಕತೆ: ಭಾರತದಲ್ಲಿ ವೈವಿಧ್ಯತೆಯಲ್ಲಿ ಏಕತೆಯಿದೆ. ಮನುಷ್ಯರಾಗಿ ಬಹುತ್ವವನ್ನು ಮೈಗೂಡಿಸಿಕೊಳ್ಳದಿದ್ದರೆ ಜೀವನವೆಲ್ಲ ನಿರುಪಯುಕ್ತವಾಗಿದೆ. ಕನ್ನಡ ಸಾಹಿತ್ಯದಲ್ಲಿ ಬಂದ ಕಾದಂಬರಿಗಳು ಬಹುತ್ವವನ್ನು ಸಾಬೀತುಪಡಿಸಿವೆ. ಒಬ್ಬ ಪೊಲೀಸ್‌ ಪೇದೆಯ ಮಗನಾಗಿದ್ದ ಬಸವರಾಜ ಕಟ್ಟಿಮನಿ ಸಾರ್ವಜನಿಕರಂತೆ ನಿಂತು “ನಾನು ಪೊಲೀಸನಾಗಿ’ ಎಂಬ ಕಾದಂಬರಿ ಬರೆದರು. ಬೇರೆಯವರು ಪೊಲೀಸರ ಬಗ್ಗೆ ಬರೆಯುವುದಕ್ಕಿಂತ ಪೊಲೀಸ್‌ ಅಥವಾ ಆ ಮನೆಯವನಾಗಿ ಬರೆಯುವುದು ಮುಖ್ಯ ಎಂದು ತಿಳಿಸಿದರು.

ಬರೆದಂತೆಯೇ ಬದುಕಿದರು: ಪ್ರಗತಿಶೀಲ ಪಂಥದಲ್ಲಿ ಗುರುತಿಸಿಕೊಂಡ ಬಸವರಾಜ ಕಟ್ಟಿಮನಿ ಬಡತನದಿಂದ ಬಂದು ಕಾದಂಬರಿ ಬರೆದು ಅದರಲ್ಲಿಯೇ ಬದುಕಿದ ಸಾಹಿತಿ. ನಮ್ಮ ಸಮಾಜ ಕಟ್ಟಿಮನಿಯವರನ್ನು ಮರೆವಿನ ಸಾಹಿತಿಯನ್ನಾಗಿ ಮಾಡಿಬಿಟ್ಟಿದೆ. ಯಾವ ಸಾಹಿತಿ ಅಧಿಕಾರ, ಪ್ರಶಸ್ತಿಯಿಂದ ಇರುತ್ತಾರೋ ಅಂತವರನ್ನು ನೆನೆಸಿಕೊಳ್ಳುತ್ತೇವೆ. ಅದೇ ಯಾವ ಲಾಬಿಯೂ ಇಲ್ಲದೆ, ತಮಗೆ ಅನಿಸಿದ್ದನ್ನು ಬರೆಯುವ ಸಾಹಿತಿ ಮತ್ತು ಸಾಹಿತ್ಯವನ್ನು ವಿಸ್ಮತಿಗೆ ಸರಿಸುತ್ತೇವೆ. ಬಸವರಾಜ ಕಟ್ಟಿಮನಿ ಪ್ರತಿಷ್ಠಾನವೂ ಈಗ ಕಾದಂಬರಿ ರಚಿಸುವ ಕುರಿತ ಕಾರ್ಯಾಗಾರ ಮಾಡಿ ಇಂತಹ ಸಾಹಿತಿಗಳನ್ನು ಪ್ರಚಾರಪಡಿಸಬೇಕು ಎಂದು ಹೇಳಿದರು.

ಓದುಗರ ಅಭಿಮತ: ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಶ್ರೇಷ್ಠ ಸಾಹಿತ್ಯ ಮತ್ತು ಕೆಲಸಕ್ಕೆ ಬಾರದ ಸಾಹಿತ್ಯ ಎಂಬುದಾಗಿ ವಿಂಗಡಿಸಿದರೂ ಬಸವರಾಜ ಕಟ್ಟಿಮನಿ, ಅನಕೃ, ತರಾಸು ಮಧ್ಯಮ ಪಥದಲ್ಲಿ ನಿಂತು ಸಾಹಿತ್ಯ ರಚಿಸಿಕೊಟ್ಟಿದ್ದಾರೆ. ಕೆಲವು ಕಾದಂಬರಿಗಳು ಓದಿದಾಗ ಅರ್ಥವಾಗುತ್ತವೆ. ಮತ್ತೆ ಕೆಲವು ಅರ್ಥವಾದರೂ ಮತ್ತೆ ಮತ್ತೆ ಓದಿಸಿಕೊಳ್ಳುತ್ತವೆ. ಅಂತವನ್ನು ಶ್ರೇಷ್ಠ ಎನ್ನಬಹುದು. ಇಂತವನ್ನು ವಾಚಾನಾಭಿಮುಖ ಲೇಖನ ಎನ್ನುಬಹುದು. ಓದಿಸಿಕೊಳ್ಳುವ ಕಾದಂಬರಿ ಪ್ರೇಯಸಿಯಾದರೆ, ಒಂದೇ ಬಾರಿಗೆ ಅರ್ಥವಾಗುವ ಕಾದಂಬರಿ ಹೆಂಡತಿಯಂತೆ. ಆದರೂ ಅರ್ಥ ಮಾಡಿಕೊಂಡು ಬಂಧವನ್ನು ಹೆಚ್ಚಿಸಿಕೊಳ್ಳುವುದು ಓದುಗರ ಕೈಯಲ್ಲಿದೆ ಎಂದು ಅವರು ತಿಳಿಸಿದರು.

Advertisement

ಅಂತರಂಗ, ಬಹಿರಂಗ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಸ್‌. ವಿದ್ಯಾಶಂಕರ್‌ ಮಾತನಾಡಿ, ಮನುಷ್ಯನ ಅಂತರಂಗ ಹಾಗೂ ಬಹಿರಂಗ ಎರಡೂ ಒಂದೇ ಆಗಿರಬೇಕು. ಒಳಗೊಂದು ಹೊರಗೊಂದು ವಿಚಾರಗಳು ಇರಬಾರದು. ಬಹಿರಂಗದಲ್ಲಿ ನಾವು ಏನು ಹೇಳುತ್ತೇವೆಯೋ ಅದನ್ನು ಅಂತರಂಗದಲ್ಲಿ ಅನುಸರಿಸಬೇಕು. ಆಗ ಬದುಕಿಗೊಂದು ಅರ್ಥ ಬರಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೆಳಗಾವಿ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಧ್ಯಕ್ಷ ಪ್ರೊ. ಮಲ್ಲಿಕಾರ್ಜುನ ಹಿರೇಮಠ, ಸದಸ್ಯರಾದ ಪ್ರೊ. ರಾಮಸ್ವಾಮಿ, ಮುಕ್ತ ವಿವಿ ಕನ್ನಡ ಅಧ್ಯಯನ ಮತ್ತು ಸಂಶೋಧನ ವಿಭಾಗದ ಅಧ್ಯಕ್ಷೆ ಡಾ. ಕವಿತಾ ರೈ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಬಸವರಾಜ ಕಟ್ಟಿಮನಿ ಅಗ್ರಗಣ್ಯ ಲೇಖಕ: ಕನ್ನಡದ ಅಗ್ರಗಣ್ಯ ಲೇಖಕರಲ್ಲಿ ಮತ್ತು ಪ್ರಗತಿಶೀಲ ಪಂಥವನ್ನು ತಾತ್ವಿಕವಾಗಿ ರೂಪಿಸಿದವರಲ್ಲಿ ಬಸವರಾಜ ಕಟ್ಟಿಮನಿ ಪ್ರಮುಖರು. ಇವರ ಸಾಹಿತ್ಯಾಧ್ಯಯನದ ಹರವು ವಿಸ್ತಾರವಾಗಿದ್ದು, ಗಾಂಧೀಜಿ, ನೆಹರೂ, ರವೀಂದ್ರನಾಥ್‌ ಟ್ಯಾಗೋರ, ಸ್ವಾಮಿವಿವೇಕನಂದ ಮೊದಲಾದವರ ಬಗೆಗೆ ಅಧ್ಯಯನ ನಡೆಸಿದ್ದರು ಎಂದು ಕರಾಮುವಿ ಕುಲಪತಿ ಪ್ರೊ.ಎಸ್‌. ವಿದ್ಯಾಶಂಕರ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ನಾಡು-ನುಡಿ ಜನರ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಕಟ್ಟಿಮನಿ ಕರ್ನಾಟಕ ಗಡಿ ವಿವಾದದ ಬಗ್ಗೆ, ಕನ್ನಡ ಭಾಷಾ ಸ್ಥಾನಮಾನದ ಬಗ್ಗೆ ಕ್ರಿಯಾತ್ಮಕವಾದ ಹೋರಾಟ ನಡೆಸಿದರು. ಅವರ ಹೋರಾಟದಲ್ಲಿ ವ್ಯಕ್ತಿಗಳ ವೈಯಕ್ತಿಕ ಜೀವನ ಪ್ರಗತಿಯ ಗುರಿ ಮಾತ್ರವಲ್ಲದೇ, ಸಮಾಜದ, ರಾಷ್ಟ್ರದ ಹಾಗೂ ಸಮಗ್ರ ಮಾನವತೆಯ ಪ್ರಗತಿಯೂ ಆಗಿತ್ತು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next