Advertisement

ಫ್ಯಾಂಟಸಿ ತ್ರಯಂಬಕಂ ಭ್ರಮೆ-ವಾಸ್ತವದ ಸುತ್ತ ….

06:08 PM Apr 11, 2019 | Hari Prasad |

“ಆ ಕರಾಳ ರಾತ್ರಿ’, “ಪುಟ 109′ ಚಿತ್ರದ ನಂತರ ನಿರ್ದೇಶಕ ದಯಾಳ್‌ ಪದ್ಮನಾಭನ್‌ ಮತ್ತೂಂದು ಸಸ್ಪೆನ್ಸ್‌ ಕಹಾನಿಯನ್ನು ಪ್ರೇಕ್ಷಕರ ಮುಂದಿಡಲು ತಯಾರಿ ಮಾಡಿಕೊಂಡಿದ್ದಾರೆ. ಹೌದು, ದಯಾಳ್‌ ಪದ್ಮನಾಭನ್‌ ನಿರ್ದೇಶನದ ಮುಂಬರುವ ಚಿತ್ರ “ತ್ರಯಂಬಕಂ’ ರಿಲೀಸ್‌ಗೆ ರೆಡಿಯಾಗಿದ್ದು, ಇದೇ ಏಪ್ರಿಲ್‌ 19ರಂದು ಚಿತ್ರ ತೆರೆಗೆ ಬರುತ್ತಿದೆ. “ತ್ರಯಂಬಕಂ’ ಚಿತ್ರದ ಬಿಡುಗಡೆಗೂ ಮುನ್ನ ಪತ್ರಕರ್ತರ ಮುಂದೆ ತಮ್ಮ ತಂಡದ ಜೊತೆ ಹಾಜರಾಗಿದ್ದ ನಿರ್ದೇಶಕ ದಯಾಳ್‌ ಚಿತ್ರದ ವಿಶೇಷತೆಗಳು, ಚಿತ್ರೀಕರಣದ ಅನುಭವಗಳು, ಬಿಡುಗಡೆಯ ಪ್ಲಾನಿಂಗ್‌ ಮತ್ತಿತರ ವಿಷಯಗಳ ಬಗ್ಗೆ ಮಾತನಾಡಿದರು.

Advertisement

ಈ ಬಾರಿ ದಯಾಳ್‌ ಪದ್ಮನಾಭನ್‌ ವೈದ್ಯಕೀಯ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯವೊಂದನ್ನು ತೆರೆಮೇಲೆ ತರುತ್ತಿದ್ದಾರೆ. ಸುಮಾರು 5 ಸಾವಿರ ವರ್ಷಗಳ ಹಿಂದೆ ಬಳಕೆಯಲ್ಲಿದ್ದ, ಸರ್ವರೋಗಕ್ಕೂ ಸಿದ್ಧ ಔಷಧವಾಗಿ ಬಳಕೆಯಾಗುತ್ತಿದ್ದ “ನವ ಪಾಶಾಣ’ ಎಂಬ ವಿಷಯವನ್ನು ಆಧುನಿಕ ವೈದ್ಯ ವಿಜ್ಞಾನದಲ್ಲಿ ಹೇಗೆ ಬಳಕೆ ಮಾಡಲಾಗುತ್ತಿದೆ. ಅದರ ಹಿಂದೆ ನಡೆಯುವ ಘಟನೆಗಳೇನು ಎಂಬುದನ್ನು ಚಿತ್ರದಲ್ಲಿ ಹೇಳುತ್ತಿದ್ದಾರಂತೆ. ಚಿತ್ರದ ಕಥಾಹಂದರದ ಒಂದು ಎಳೆಯನ್ನು ಮಾತ್ರ ಹೇಳುವ ದಯಾಳ್‌, ಉಳಿದದ್ದನ್ನು ಚಿತ್ರದಲ್ಲೇ ನೋಡಬೇಕು ಎನ್ನುತ್ತಾರೆ. ಇದೊಂದು ಸಸ್ಪೆನ್ಸ್‌, ಥ್ರಿಲ್ಲರ್‌ ಮತ್ತು ಫ್ಯಾಂಟಸಿ ಚಿತ್ರ ಎನ್ನುವ ದಯಾಳ್‌, ಇತ್ತೀಚೆಗೆ ಬಂದ ತಮ್ಮ ಚಿತ್ರಗಳಿಗಿಂತ “ತ್ರಯಂಬಕಂ’ ವಿಭಿನ್ನವಾಗಿ ನಿಲ್ಲುವಂಥದ್ದು ಎಂಬ ಭರವಸೆಯ ಮಾತುಗಳನ್ನಾಡುತ್ತಾರೆ.

“ತ್ರಯಂಬಕಂ’ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್‌ ಮತ್ತು ಅನುಪಮಾ ಗೌಡ ತಂದೆ-ಮಗಳ ಪಾತ್ರದಲ್ಲಿ ಕಾಣಿಸಿಕೊಂಡರೆ, ಆರ್‌.ಜೆ ರೋಹಿತ್‌ ಪ್ರೈವೇಟ್‌ ಡಿಟೆಕ್ಟೀವ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಶಿವಮಣಿ, ಶ್ರುತಿ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ನಟ ರಾಘವೇಂದ್ರ ರಾಜಕುಮಾರ್‌, “ಈ ಚಿತ್ರದಲ್ಲಿ ನನ್ನದು ಭ್ರಮೆನಾ ಅಥವಾ ವಾಸ್ತವನಾ? ಎಂಬ ಗೊಂದಲದಲ್ಲಿರುವ ಪಾತ್ರ. ತುಂಬಾ ಒಳ್ಳೆಯ ಪಾತ್ರವನ್ನು, ಅಚ್ಚುಕಟ್ಟಾಗಿ ಮಾಡಿದ ತೃಪ್ತಿ ಈ ಚಿತ್ರದಲ್ಲಿ ಸಿಕ್ಕಿದೆ. ಇತ್ತೀಚೆಗೆ ಒಂದರ ಹಿಂದೊಂದು ಚಿತ್ರಗಳಲ್ಲಿ ಅಭಿನಯಿಸುವ ಅವಕಾಶಗಳು ಬರುತ್ತಿವೆ. ಇದನ್ನೆಲ್ಲ ನೋಡುತ್ತಿದ್ದರೆ, ನಿಜಕ್ಕೂ ಇದು ಭ್ರಮೆನಾ ಅಥವಾ ವಾಸ್ತವನಾ? ಅನ್ನೋದು ನನಗೆ ಗೊತ್ತಾಗುತ್ತಿಲ್ಲ’ ಎಂದರು.

“ತ್ರಯಂಬಕಂ’ ನಲ್ಲಿ ನಟಿ ಅನುಪಮಾ ಗೌಡ ಅವರಿಗೂ ಹೊಸಥರದ ಅನುಭವವಾಗಿದೆಯಂತೆ. ರಾಘವೇಂದ್ರ ರಾಜಕುಮಾರ್‌ ಅವರೊಂದಿಗೆ ಸ್ಕ್ರೀನ್‌ ಶೇರ್‌ ಮಾಡುವಾಗ ಮೊದ ಮೊದಲು ಸಾಕಷ್ಟು ಭಯಪಟ್ಟಿದ್ದ ಅನುಪಮಾ, ನಂತರ ಚಿತ್ರೀಕರಣ ನಡೆಸಿದ್ದೇ ಗೊತ್ತಾಗಲಿಲ್ಲ ಎನ್ನುತ್ತಾರೆ.

Advertisement

“ತ್ರಯಂಬಕಂ’ ಚಿತ್ರದ ಹಾಡುಗಳಿಗೆ ಗಣೇಶ್‌ ನಾರಾಯಣ್‌ ಸಂಗೀತ ಸಂಯೋಜನೆಯಿದ್ದು, ಚಿತ್ರದ ಮುಕ್ಕಾಲು ಭಾಗ ಹಿನ್ನೆಲೆ ಸಂಗೀತಕ್ಕೆ ಸಿತಾರ್‌ ಅನ್ನು ಬಳಸಿಕೊಳ್ಳಲಾಗಿದೆ. ಮಾಮೂಲಿ ಥ್ರಿಲ್ಲರ್‌ ಚಿತ್ರಗಳಿಗಿಂತ ಭಿನ್ನ ಶೈಲಿಯಲ್ಲಿ ಹಿನ್ನೆಲೆ ಸಂಗೀತವಿರಬೇಕು ಎನ್ನುವ ಕಾರಣಕ್ಕೆ ಇಂಥದ್ದೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದೇವೆ ಎನ್ನುವುದು ಚಿತ್ರತಂಡದ ಮಾತು.

ಚಿತ್ರದ ನಿರ್ಮಾಪಕರಾದ ಅವಿನಾಶ್‌ ಶೆಟ್ಟಿ, ಸಂದೀಪ್‌ ಕೂಡ “ತ್ರಯಂಬಕಂ’ ಚಿತ್ರದ ಹಿನ್ನೆಲೆ, ಸಾಗಿಬಂದ ರೀತಿಯ ಬಗ್ಗೆ ಮಾತನಾಡಿದರು. ಸದ್ಯ “ತ್ರಯಂಬಕಂ’ ಚಿತ್ರದ ಪ್ರಮೋಶ‌ನ್‌ ಕೆಲಸಗಳು ಜೋರಾಗಿ ನಡೆಯುತ್ತಿದ್ದು, ಚಿತ್ರದ ಬಗ್ಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದ ಸಬ್ಜೆಕ್ಟ್ ಮತ್ತು ಕಂಟೆಂಟ್‌ ಚೆನ್ನಾಗಿದ್ದರೆ, ಜನ ಖಂಡಿತಾ ಚಿತ್ರವನ್ನು ನೋಡುತ್ತಾರೆ ಎನ್ನುವ ದಯಾಳ್‌ ಮತ್ತು ತಂಡ ಇದೇ 19ರಂದು ರಾಜ್ಯದಾದ್ಯಂತ ಚಿತ್ರವನ್ನು ರಿಲೀಸ್‌ ಮಾಡಲಿದ್ದೇವೆ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next