Advertisement

ಒಂದು ಬೀಚಿನ ಕಥೆ! ; ಆ ಎರಡು ಫೊಟೋಗಳು ಹೇಳುತ್ತಿರುವುದೇನು?

09:04 AM May 11, 2019 | Hari Prasad |

ನೀವು ಪ್ರವಾಸ ಪ್ರಿಯರಾಗಿದ್ದರೆ ಕೆಲವೊಂದು ಜಾಗಗಳು ನಿಮ್ಮನ್ನು ಮತ್ತೆ ಮತ್ತೆ ಸೆಳೆಯುತ್ತಿರುತ್ತದೆ. ಅದಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ಆದರೆ ಪ್ರತೀ ಸಲ ನೀವು ನಿಮ್ಮ ಫೆವರಿಟ್ ಸ್ಥಳಕ್ಕೆ ಹೋದಾಗ ಅಲ್ಲಿ ಆಗಿರುವಂತಹ ಬದಲಾವಣೆಗಳನ್ನು ಗಮನಿಸುತ್ತೀರಾ?. ಈ ಪ್ರಶ್ನೆಗೆ ಕೆಲವರ ಉತ್ತರ ಹೌದೆಂದಾದರೆ ಇನ್ನು ಕೆಲವರು ಇಲ್ಲ ಎನ್ನಬಹುದು.

Advertisement

ಆದರೆ ಇಲ್ಲೊಬ್ಬರು ದಂಪತಿ ಇದ್ದಾರೆ. ಇಬ್ಬರೂ ಪ್ರವಾಸ ಪ್ರಿಯರು. ಪ್ರಪಂಚದ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಅಲ್ಲಿನ ಫೊಟೋಗಳನ್ನು ಮತ್ತು ಮಾಹಿತಿಗಳನ್ನುತಮ್ಮ ಇನ್ ಸ್ಟ್ರಾಗ್ರಾಂ ಖಾತೆಗಳಲ್ಲಿ ಅಪ್ ಲೋಡ್ ಮಾಡುತ್ತಲೇ ಇರುತ್ತಾರೆ. ಈ ಪ್ರವಾಸ ಪ್ರಿಯ ದಂಪತಿಯ ಹೆಸರು ಮೇರಿ ಫೇ ಮತ್ತು ಜ್ಯಾಕ್ ಸ್ನೋ. ಮೇರಿ ಜರ್ಮನಿ ಮೂಲದವರಾಗಿದ್ದರೆ ಜ್ಯಾಕ್ ಸ್ನೋ ಆಸ್ಟ್ರೇಲಿಯಾದವರು.

ಮೇರಿ ಮತ್ತು ಜ್ಯಾಕ್ ದಂಪತಿ ಕೇವಲ ಪ್ರವಾಸಪ್ರಿಯರು ಮಾತ್ರವಲ್ಲ ಪರಿಸರದ ಕುರಿತಾಗಿ ಅಪಾರವಾದ ಕಾಳಜಿ ಉಳ್ಳವರಾಗಿದ್ದು, ಪರಿಸರ ರಕ್ಷಣೆ, ಪ್ಲಾಸ್ಟಿಕ್ ನಿರ್ಮೂಲನೆ ಸಹಿತ ಹಲವಾರು ಪರಿಸರ ಸಂಬಂಧಿ ವಿಚಾರಗಳ ಕುರಿತು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳನ್ನೇ ಬಳಸಿಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದ್ದಾರೆ.

ಈ ದಂಪತಿ ಇದೀಗ ಸುದ್ದಿಯಲ್ಲಿರುವುದು ಒಂದು ವಿಭಿನ್ನವಾದ ಕಾರಣಕ್ಕೆ. ಪ್ಲಾಸ್ಟಿಕ್ ಎನ್ನುವುದು ನಮ್ಮ ಪರಿಸರಕ್ಕೆ ಮತ್ತು ಜೀವಜಾಲಗಳಿಗೆ ಅದೆಷ್ಟು ಮಾರಕ ಎನ್ನುವುದು ನಮಗೆಲ್ಲಾ ತಿಳಿದಿದ್ದರೂ ನಮ್ಮ ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆ ಹಾಸು ಹೊಕ್ಕಾಗಿದೆ. ಇನ್ನು ನಾವು ಪ್ರವಾಸ ಹೋಗುವ ಸ್ಥಳಗಳನ್ನೂ ಪ್ಲಾಸ್ಟಿಕ್ ಮಯ ಮಾಡುವ ಕಲೆ ಮನುಷ್ಯರಿಗೆ ಮಾತ್ರವೇ ಗೊತ್ತು!

ಇಂತದ್ದೇ ಒಂದು ಗಂಭೀರ ಪ್ರಕರಣ ಕುರಿತಾಗಿ ಮೇರಿ ಮತ್ತು ಜ್ಯಾಕ್ ದಂಪತಿ ತಮ್ಮ ಇನ್ ಸ್ಟ್ರಾಗ್ರಾಂ ಖಾತೆಯಲ್ಲಿ ಇತ್ತೀಚೆಗೆ ಪೋಸ್ಟ್ ಒಂದನ್ನು ಹಾಕಿದ್ದರು. ಈ ವಿಷಯ ಇದೀಗ ಜಗತ್ತಿನಾದ್ಯಂತ ಸುದ್ದಿಯಾಗಿರುವುದು ಮಾತ್ರವಲ್ಲದೇ ಪರಿಸರ ಪ್ರೇಮಿಗಳ ವಲಯದಲ್ಲಿ ಚರ್ಚೆಯ ವಸ್ತುವೂ ಆಗಿದೆ.

Advertisement

ಪ್ರಸಿದ್ಧ ಪ್ರವಾಸಿ ತಾಣ ದೇಶಗಳಲ್ಲಿ ಒಂದಾಗಿರುವ ಇಂಡೋನೇಷ್ಯಾದಲ್ಲಿ ಹಲವಾರು ಸುಂದರ ಸಮುದ್ರ ಕಿನಾರೆಗಳಿವೆ. ಇವುಗಳಲ್ಲಿ ಇಲ್ಲಿನ ಕೊಮೋಡೋ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಬರುವ ಗುಲಾಬಿ ವರ್ಣದ ಮರಳು ಹಾಗೂ ನೀಲವರ್ಣದ ಕಡಲು ಸಮ್ಮಿಲನದ ಅಪೂರ್ವ ಬೀಚ್ ಒಂದಿದೆ. ಇದನ್ನು ‘ಪಿಂಕ್ ಬೀಚ್’ ಎಂದೇ ಕರೆಯುತ್ತಾರೆ.

ಈ ಪಿಂಕ್ ಬೀಚ್ ನ ಸೌಂದರ್ಯವನ್ನು ಸವಿಯಲೆಂದೇ ದೇಶ ವಿದೇಶಗಳಿಂದ ಪ್ರತೀ ವರ್ಷ ಲಕ್ಷಾಂತರ ಮಂದಿ ಪ್ರವಾಸಿಗರು ಬರುತ್ತಾರೆ. ಅದೇ ರೀತಿಯಲ್ಲಿ ಮೇರಿ ಮತ್ತು ಜ್ಯಾಕ್ ದಂಪತಿ ಸಹ 2017ರಲ್ಲಿ ಈ ಬೀಚ್ ಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ತೆಗೆದಿದ್ದ ಫೊಟೋ ಒಂದನ್ನು ತಮ್ಮ ಇನ್ಟ್ರಾ ಖಾತೆಯಲ್ಲಿ ಹಾಕಿಕೊಂಡಿದ್ದರು. ಆ ಫೊಟೋ ಇಲ್ಲಿದೆ ನೋಡಿ…


2018ರಲ್ಲಿ ಮತ್ತೊಮ್ಮೆ ಈ ದಂಪತಿ ಅದೇ ಬೀಚ್ ಗೆ ಭೇಟಿ ನೀಡಿದ್ದರು ಮತ್ತು ತಾವು ಹಿಂದಿನ ವರ್ಷ ವಿಹರಿಸಿದ್ದ ಅದೇ ಸ್ಥಳದಲ್ಲಿ ಈ ಬಾರಿಯೂ ವಿಹರಿಸಿದ್ದರು, ಮತ್ತು ಆ ಚಿತ್ರವನ್ನೂ ಸಹ ಇನ್ಟ್ರಾ ಖಾತೆಗೆ ಅಪ್ ಲೋಡ್ ಮಾಡಿದ್ದಾರೆ. ಆ ಫೊಟೋವೇ ಇದು…

ಈಗ ನಿಮಗೆ ಈ ಎರಡು ಚಿತ್ರಗಳಲ್ಲಿ ಇರುವ ವ್ಯತ್ಯಾಸ ಗೊತ್ತಾಗಿರಬೇಕಲ್ಲ? ಹೌದು ಮೇರಿ ಮತ್ತು ಜ್ಯಾಕ್ ದಂಪತಿ ವಿಹರಿಸುತ್ತಿರುವ ಸುಂದರ ಮರಳ ದಂಡೆ ಯಾವ ರೀತಿ ಬದಲಾಗಿದೆ ಎಂಬುದನ್ನು ಈ ಎರಡು ಫೊಟೋಗಳ ಮೂಲಕ ಜಗತ್ತಿಗೆ ತಿಳಿಸುವ ಪ್ರಯತ್ನವನ್ನು ಈ ದಂಪತಿ ಮಾಡಿದ್ದಾರೆ. ಮಾತ್ರವಲ್ಲದೇ ‘ಅರ್ಥ್ ಡೇ’ ದಿನವೇ ಈ ಫೊಟೋಗಳನ್ನು ಜಾಹೀರು ಮಾಡುವ ಮೂಲಕ ವರ್ಷದಿಂದ ವರ್ಷಕ್ಕೆ ನಾವು ಪರಿಸರವನ್ನು ಎಷ್ಟರಮಟ್ಟಿಗೆ ಹಾಳು ಮಾಡುತ್ತಿದ್ದೇವೆ ಎಂಬುದನ್ನೂ ಸಹ ಈ ಒಂದು ಉದಾಹರಣೆ ಮೂಲಕ ಮನವರಿಕೆ ಮಾಡಿಕೊಡುವ ಪ್ರಯತ್ನ ಇವರದ್ದಾಗಿದೆ.

2017ರಲ್ಲಿ ಪಿಂಕ್ ಬೀಚ್ ನ ಮರಳ ದಂಡೆಗಳು ಅದೆಷ್ಟು ಸ್ವಚ್ಛವಾಗಿದ್ದವು ಮತ್ತು ಕೇವಲ ಒಂದೇ ವರ್ಷದಲ್ಲಿ ಪಿಂಕ್ ಬೀಚ್ ನ ಮರಳ ದಂಡೆಗಳ ಮೇಲೆ ಅದೆಷ್ಟು ರಾಶಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗಿದೆ ಎಂಬುದೇ ಕಳವಳಕಾರಿ ವಿಚಾರ. ಇದು ಪಿಂಕ್ ಬೀಚ್ ಒಂದರ ಕಥೆ ಅಲ್ಲ. ಅಭಿವೃದ್ಧಿಶೀಲ ರಾಷ್ಟ್ರಗಳ ಬಹುತೇಕ ಪ್ರವಾಸಿ ತಾಣಗಳು ಪ್ಲಾಸ್ಟಿಕ್ ಮಯವಾಗುತ್ತಿವೆ. ತ್ಯಾಜ್ಯ ಕೊಂಪೆಗಳಾಗುತ್ತಿವೆ.

ನಮ್ಮ ದೇಶದಲ್ಲೂ ಗಂಗೆಯಂತಹ ಗಂಗೆಯೇ ಸಾಕಷ್ಟು ಮಲಿನಗೊಂಡದ್ದಾಳೆ. ಇನ್ನು ನಮ್ಮ ಪುಣ್ಯಕ್ಷೇತ್ರಗಳಲ್ಲಿ ಹರಿಯುವ ಪಾಪನಾಶಿನಿ ನದಿಗಳ ಒಡಲು ಲೆಕ್ಕವಿಲ್ಲದಷ್ಟು ತ್ಯಾಜ್ಯಗಳಿಂದ ತುಂಬಿ ಹೋಗಿದೆ. ಈ ಎಲ್ಲಾ ಸ್ಥಿತಿಗೆ ಕನ್ನಡಿ ಹಿಡಿದಂತಿದೆ ಜರ್ಮನಿ ಮತ್ತು ಆಸ್ಟ್ರೇಲಿಯಾ ಮೂಲದ ಮೇರಿ ಮತ್ತು ಜ್ಯಾಕ್ ದಂಪತಿ ಸೆರೆಹಿಡಿದು ಜಗತ್ತಿನ ಮುಂದೆ ಅನಾವರಣಗೊಳಿಸಿರುವ ಈ ಎರಡು ಫೊಟೋಗಳು!

ಈ ಒಂದು ಫೋಟೊ ಉಂಟು ಮಾಡಿರುವ ಪರಿಣಾಮ ಎಷ್ಟೆಂದರೆ ಇದೀಗ ಈ ದಂಪತಿಯ ಸೋಷಿಯಲ್ ಮೀಡಿಯಾ ಫಾಲೋವರ್ಸ್ ತಾವು ಭೇಟಿ ನೀಡುವ ಪ್ರವಾಸಿ ತಾಣಗಳಲ್ಲಿ ಇರುವ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ಸಂಗ್ರಹ ಸಮಸ್ಯೆಗಳನ್ನು ಫೊಟೋ ಮತ್ತು ವಿಡಿಯೋ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದಾರೆ. ಮತ್ತು ಇದೊಂದು ಅಭಿಯಾನವಾಗಿ ಮಾರ್ಪಡುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next