ಕುಂದಾಪುರ: ಗ್ರಾಮೀಣ ರೈತರಿಗೆ ಅನುಕೂಲವಾಗಲೆಂದು ಸರಕಾರ ಹಮ್ಮಿಕೊಳ್ಳುವ ಕೃಷಿ ಅಧ್ಯಯನ ಪ್ರವಾಸವನ್ನು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸಿಬಂದಿಯ ಸಂಬಂಧಿ ಕರೇ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ನಾಗರಿಕರು ತಡೆಹಿಡಿದ ಘಟನೆ ಗುರುವಾರ ರಾತ್ರಿ ಹಟ್ಟಿಯಂಗಡಿ ಗ್ರಾಮ ಪಂಚಾಯತ್ ಎದುರು ನಡೆದಿದೆ.
ಪ್ರವಾಸಕ್ಕೆ ಸಿದ್ಧವಾಗಿದ್ದ ಬಸ್ಸನ್ನು ತಡೆದ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಪ್ರವಾಸ ರದ್ದಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲಾ ಪಂಚಾಯತ್ ಉಡುಪಿ, ಕೃಷಿ ಇಲಾಖೆ ಕುಂದಾಪುರ, ಜಲಾನಯನ ಸಮಿತಿ ಹಟ್ಟಿಯಂಗಡಿ ಇವರ ಸಹಯೋಗದೊಂದಿಗೆ ರೈತರಿಗೆ ಮತ್ತು ಸ್ವಸಹಾಯ ಸಂಘದ ಸದಸ್ಯರಿಗೆ ಪ್ರಧಾನಮಂತ್ರಿ ಕೃಷಿ ಸಿಂಚಯ್ ಯೋಜನೆಯಡಿಯಲ್ಲಿ ಮೈಸೂರು ಹಾಗೂ ಬೆಂಗಳೂರಿಗೆ ಅಧ್ಯಯನ ಪ್ರವಾಸ ಹಮ್ಮಿಕೊಳ್ಳಲಾಗಿತ್ತು. ಇದು ಸಂಪೂರ್ಣವಾಗಿ ಸರಕಾರದ ವೆಚ್ಚದಲ್ಲಿ ನಡೆಯುವ ಕಾರ್ಯಕ್ರಮವಾಗಿದ್ದು ರೈತರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹಟ್ಟಿಯಂಗಡಿ ಪಂಚಾಯತ್ ಎದುರು ಬಸ್ ನಿಂತಿದ್ದು, ಅನುಮಾನಗೊಂಡ ಗ್ರಾಮಸ್ಥರು ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ.
ರಾತೋರಾತ್ರಿ ರೈತರ ಪ್ರವಾಸಕ್ಕೆ ಮೀಸಲಿಡಲಾದ ಯೋಜನೆಯನ್ನು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸಿಬಂದಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಬಸ್ಸನ್ನು ತಡೆದು ಪ್ರತಿಭಟನೆ ನಡೆಸಿದರು. ಈ ಸಂದರ್ಭ ಬಸ್ಸಿನಲ್ಲಿ ಕುಳಿತಿದ್ದ ಸದಸ್ಯರು ಬಸ್ಸಿಳಿದು ಮುಂದಕ್ಕೆ ನಡೆದು ಹೋದರು. ಇದನ್ನು ಗಮನಿಸಿದ ಪ್ರತಿಭಟನಕಾರರು ಬಸ್ಸನ್ನು ಮುಂದಕ್ಕೆ ಚಲಿಸಲು ಬಿಡಲಿಲ್ಲ. ಈ ಸಂದರ್ಭ ಮಾತನಾಡಿದ ಕೃಷಿಕ ಸಂತೋಷ್ ಶೆಟ್ಟಿ, ಗ್ರಾಮದ ಯಾವೊಬ್ಬ ಕೃಷಿಕನಿಗೂ ಮಾಹಿತಿ ನೀಡದೆ ಪಂಚಾಯತ್ ಸದಸ್ಯರು ತಮಗೆ ಬೇಕಾದವರ ಜತೆ ಪ್ರವಾಸ ಹೋಗುತ್ತಿರುವುದು ಸರಕಾರದ ಹಣ ದುರ್ಬಳಕೆ ಮಾಡಿದಂತೆ ಎಂದು ಆರೋಪಿಸಿದರು. ಪ್ರವಾಸ ಹೋಗುವುದಿದ್ದರೆ ಗ್ರಾಮದ ಕೃಷಿಕರನ್ನು ಕರೆದೊಯ್ಯಲಿ. ಕಳೆದ ನಾಲ್ಕು ವರ್ಷಗಳಿಂದ ಇದೇ ರೀತಿ ನಡೆಯುತ್ತಿದೆ ಎಂದು ಆರೋಪಿಸಿದರು.
ಘಟನೆ ಸಂದರ್ಭ ದೂರವಾಣಿಯಲ್ಲಿ ಪ್ರತಿಕ್ರಿಯಿಸಿದ ಜಲಾನಯನ ಅಧಿ ಕಾರಿ ರಘುರಾಮ ಶೆಟ್ಟಿ, ಪಂಚಾಯತ್ ಸಿದ್ಧಪಡಿಸಿದ ಪಟ್ಟಿಯಂತೆ ಪ್ರವಾಸಕ್ಕೆ ಸಿದ್ಧತೆ ಮಾಡಲಾಗಿದೆ. ಹಕ್ಲಾಡಿ ಹಾಗೂ ಕರ್ಕುಂಜೆ ಗ್ರಾಮ ಪಂಚಾಯತ್‌ಗಳಿಂದಲೂ ಇದೇ ರೀತಿಯ ಪ್ರವಾಸ ಜತೆಯಾಗಿ ಕೈಗೊಳ್ಳಲಾಗಿದೆ. ಬಸ್ ತಡೆದರೆ ಅವರಿಗೂ ಸಮಸ್ಯೆಯಾಗುತ್ತದೆ ಎಂದರು.
ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೀವ ಶೆಟ್ಟಿ ಪ್ರತಿಕ್ರಿಯಿಸಿ, ಪ್ರವಾಸಕ್ಕೂ ಗ್ರಾಮ ಪಂಚಾಯತ್‌ಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಇದರಿಂದ ಆಕ್ರೋಶಿತರಾದ ಪ್ರತಿಭಟನಕಾರರು ಸಂಬಂಧಪಟ್ಟವರು ಸ್ಥಳಕ್ಕೆ ಆಗಮಿಸದೇ ಬಸ್ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಮಾಹಿತಿ ತಿಳಿದ ಕಂಡೂÉರು ಪೊಲೀಸರು ಸ್ಥಳಕ್ಕಾಗಮಿಸಿ ಪ್ರತಿಭಟನಕಾರರನ್ನು ಸಮಾಧಾನಿಸಲೆತ್ನಿಸಿದರೂ ಪ್ರಯೋಜನವಾಗಲಿಲ್ಲ. ಬಳಿಕ ಜಲಾನಯನ ಅಧಿ ಕಾರಿ ರಘುರಾಮ ಶೆಟ್ಟಿ ಆಗಮಿಸಿದರು. ಆದರೂ ಸಮಾಧಾನಗೊಳ್ಳದ ಪ್ರತಿಭಟನಕಾರರು ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಬರುವಂತೆ ಆಗ್ರಹಿಸಿದರು. ಕುಂದಾಪುರ ಎಸ್‌ಐ ಸ್ಥಳಕ್ಕಾಗಮಿಸಿ ಬಸ್ ಚಾಲಕನಿಗೆ ಮರಳಿ ಹೋಗುವಂತೆ ಸೂಚಿಸಿ, ಹಟ್ಟಿಯಂಗಡಿ ಪ್ರವಾಸ ರದ್ದುಗೊಳಿಸುವಂತೆ ಕೃಷಿ ಅಧಿ ಕಾರಿಗಳಿಗೆ ಸೂಚಿಸಿದರು. ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂದೆಗೆದುಕೊಂಡರು. ಪ್ರತಿಭಟನೆ ಸಂದರ್ಭ ಮುತ್ತ ಪೂಜಾರಿ, ಮಂಜುನಾಥ ಜಿ. ಗುಡ್ಡಿಯಂಗಡಿ ಸೇರಿದಂತೆ ಸುಮಾರು ಐವತ್ತಕ್ಕೂ ಹೆಚ್ಚು ಗ್ರಾಮಸ್ಥರು ಭಾಗವಹಿಸಿದ್ದರು.