Advertisement
ಕೇಪು ಗ್ರಾ.ಪಂ.ವಾಪ್ತಿಗೆ ಬರುವ ಅಡ್ಯನಡ್ಕ ಪೇಟೆಯಿಂದ ಅನತಿ ದೂರದಲ್ಲಿರುವ ಮರಕ್ಕಿಣಿ ಎಂಬಲ್ಲಿ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆಯ ಸ್ಥಿತಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ನಿದ್ದೆಗೆಡಿಸಿದೆ. ಕಳೆದ ವರ್ಷ ಮಳೆಗಾಲದಲ್ಲಿ ಈ ಭಾಗದಲ್ಲಿ ಬೀಸಿದ ಭಾರೀ ಗಾಳಿ ಮಳೆಗೆ ಖಾಸಗಿಯವರಿಗೆ ಸೇರಿದ ತೋಟದಲ್ಲಿದ್ದ ಬೃಹತ್ ಗಾತ್ರದ ಮರ ನೆಲಕ್ಕೆ ಅಪ್ಪಳಿಸಿತ್ತು. ಆಗ ಸಮೀಪದ ಮತ್ತೂಂದು ಮರ ಸೇತುವೆ ಮೇಲೆ ಬಿದ್ದು, ಸೇತುವೆ ಅರ್ಧ ಮುರಿದಿದೆ.
ಈ ಭಾಗದಲ್ಲಿ 500ಕ್ಕೂ ಹೆಚ್ಚು ಮನೆಗಳಿದ್ದು, ಅಡ್ಯನಡ್ಕಕ್ಕೆ ಹೋಗ ಬೇಕಾದರೆ ಜನರು ಇದೇ ಮಾರ್ಗವನ್ನೇ ಅವಲಂಬಿಸಿದ್ದಾರೆ. ಅಡ್ಯನಡ್ಕ ಪೇಟೆಯನ್ನು ಸಂಪರ್ಕಿಸಲು ರಸ್ತೆ ಇದ್ದು, ಆದರೆ ಸುತ್ತು ಬಳಸಿ ತೆರಳಬೇಕಾಗಿದೆ. ಅಡ್ಯನಡ್ಕದಲ್ಲಿ ಶಾಲೆ-ಕಾಲೇಜುಗಳಿದ್ದು, ಈ ಭಾಗದ ಹೆಚ್ಚಿನ ವಿದ್ಯಾರ್ಥಿಗಳು ಇದೇ ಮಾರ್ಗದಲ್ಲಿ ಸಂಚರಿಸುವವರಿದ್ದಾರೆ. ಇನ್ನುಳಿದಂತೆ ಅಳಿಕೆ, ವಿಟ್ಲ, ಪುತ್ತೂರು, ನೆರೆಯ ರಾಜ್ಯ ಕೇರಳ ಭಾಗದ ಶಾಲೆಗೆ ಮುಂಜಾನೆ ತೆರಳುವ ವಿದ್ಯಾರ್ಥಿಗಳು ಇದೇ ಮುರಿದ ಸೇತುವೆಯಲ್ಲೇ ದಾಟಿ ತೆರಳಬೇಕಿದೆ.
Related Articles
ಅಮೈ, ಕಾಯರ್ತಡ್ಕ, ಪಂಜಿಕಲ್ಲು, ಕೊಡಂದೂರು, ಪದವು, ನೆಕ್ಕರೆ, ತೋರಣಕಟ್ಟೆ ಹಾಗೂ ಕೋಪ್ರ ಭಾಗ ದವರು ಅಡ್ಯನಡ್ಕ, ವಿಟ್ಲ ಹಾಗೂ ಕೇರಳಕ್ಕೆ ಪ್ರಯಾಣಿಸಬೇಕಾದರೆ ಇದೇ ಕಾಲು ದಾರಿ ಬಳಸುತ್ತಾರೆ. ರಸ್ತೆ ಮಾರ್ಗ ವಿದ್ದರೂ ಅದು ಬಹಳ ದೂರದ ದಾರಿ. ಮಳೆಗಾಲದಲ್ಲಿ ಸುರಿಯುವ ಭಾರೀ ಮಳೆಗೆ ಈಗಿರುವ ಸೇತುವೆ ನೀರಿಗೆ ಕೊಚ್ಚಿ ಹೋದರೆ ಪಾದಚಾರಿಗಳು ಮತ್ತೆ ಒಂದು ಸುತ್ತು ಬಳಸಿ ಅಡ್ಯ ನಡ್ಕಕ್ಕೆ ಪ್ರಯಾಣಿಸಬೇಕಾಗುತ್ತದೆ. ಕ್ಲಪ್ತ ಸಮಯಕ್ಕೆ ದೂರದ ಶಾಲೆ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಲ್ಲಿ ಮಳೆಗಾಲ ಆರಂಭಕ್ಕೂ ಮುಂಚೆ ಭಯ ಕಾಡಲಾರಂಭಿಸಿದೆ.
Advertisement
ಕುಸಿದು ಬಿದ್ದ ಕಾಲುದಾರಿಸೇತುವೆಯಿಂದ ನಾಲ್ಕು ಮಾರು ದೂರದಲ್ಲಿನ ತೋಡಿನ ಬದಿ 4 ವರ್ಷಗಳ ಹಿಂದೆ ಸಂಪೂರ್ಣ ಕುಸಿದು ಬಿದ್ದಿದೆ. ಮಳೆಗಾಲವಾದುದರಿಂದ ಸಂಚಾರಕ್ಕಾಗಿ ತಾತ್ಕಾಲಿಕವಾಗಿ ಅಡಿಕೆ ಮರದ ಸಹಾಯದಿಂದ ಕಾಲು ಸಂಕವನ್ನು ನಿರ್ಮಿಸಲಾಗಿತ್ತು. ಮಳೆಗಾಲ ಕಳೆದ ಕೂಡಲೇ ಸರಿಪಡಿಸಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಈ ಸಮಸ್ಯೆಯ ಕುರಿತು ಪಂಚಾಯತ್‌ಗೆ ಸಾಕಷ್ಟು ಮನವಿಗಳು ಸಲ್ಲಿಕೆಯಾಗಿದ್ದರೂ ಪ್ರಗತಿಯನ್ನು ಕಂಡಿಲ್ಲ. ಸಮಸ್ಯೆಯ ಕುರಿತು ಪ್ರತಿ ಗ್ರಾಮಸಭೆ, ವಾರ್ಡ್ ಸಭೆಗಳಲ್ಲಿ ಆಡಳಿತದ ಗಮನ ಸೆಳೆಯಲಾಗಿದೆ. ಸೇತುವೆ ನಿರ್ಮಾಣಕ್ಕೆ ದೊಡ್ಡಮೊತ್ತದ ಅನುದಾನ ಬೇಕಿದ್ದು, ಗ್ರಾಮ ಪಂಚಾಯತ್‌ಗಳಲ್ಲಿ ಅದನ್ನು ಭರಿಸುವಷ್ಟು ಶಕ್ತಿ ಇಲ್ಲ ಎನ್ನುತ್ತಾರೆ ಪಂಚಾಯತ್ ಆಡಳಿತ ಸಿಬಂದಿ. ಭಯದಲ್ಲೇ ಪಯಣ
ಮಳೆಗಾಲದಲ್ಲಿ ಸೇತುವೆಗೆ ಹತ್ತಿರ ಹತ್ತಿರ ನೀರು ಬರುತ್ತದೆ. ಬಾಗಿದ ಸೇತುವೆ ಯಾವಾಗ ತುಂಡಾಗಿ ಬೀಳುತ್ತದೆ ಎಂಬ ಹೆದರಿಕೆ. ಇನ್ನೊಂದೆಡೆ ತೋಡಿನ ಬದಿ ಕುಸಿದು ಬಿದ್ದಿರುವುದರಿಂದ ನಡೆದುಕೊಂಡು ಹೋಗಲು ಸ್ವಲ್ಪ ಜಾಗವಿದೆ. ಮಳೆಗಾಲದಲ್ಲಿ ಕುಸಿದು ಬಿದ್ದರೆ ನಮಗೆ ಬೇರೆ ದಾರಿ ಇಲ್ಲ. ಪ್ರಸ್ತುತ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣೆ ಬಳಿಕವಾದರೂ ಸರಿಪಡಿಸುವ ವಿಶ್ವಾಸವಿದೆ.
– ಅಭಿಷೇಕ್ ಎ.ಕೆ.
ಕಾಲೇಜು ವಿದ್ಯಾರ್ಥಿ ಗ್ರಾಮಸಭೆಯಲ್ಲಿ ಪ್ರಸ್ತಾವ
ಸೇತುವೆ ನಿರ್ಮಿಸುವಷ್ಟು ಅನುದಾನ ಗ್ರಾ.ಪಂ.ನಲ್ಲಿ ಇರುವುದಿಲ್ಲ. ಇಲ್ಲಿಯೂ ಇದೇ ಸಮಸ್ಯೆ ಆಗಿದೆ. ಪ್ರತಿ ವಾರ್ಡ್ ಸಭೆಗಳು, ಗ್ರಾಮಸಭೆಯಲ್ಲಿ ಇದರ ಬಗ್ಗೆ ಪ್ರಸ್ತಾವ ಆಗುತ್ತಿದೆ. ಮುಂಬರುವ ದಿನಗಳಲ್ಲಿ ಸ್ಥಳ ಪರಿಶೀಲಿಸಿ, ಮೆಲಧಿಕಾರಿಗಳ ಗಮನಕ್ಕೆ ತರಲಾಗುವುದು.
– ನಳಿನಿ ಬಿ.
ಕೇಪು ಗ್ರಾಮ ಪಂಚಾಯತ್ ಪಿಡಿಒ – ಕಾರ್ತಿಕ್ ಅಮೈ