Advertisement

ವಾಯವ್ಯ ಸಾರಿಗೆಯಲ್ಲಿ 4,600 ವಲಸಿಗರ ಪ್ರಯಾಣ

10:07 AM May 09, 2020 | Suhan S |

ಹುಬ್ಬಳ್ಳಿ: ಲಾಕ್‌ಡೌನ್‌ ಪರಿಣಾಮ ಅಲ್ಲಲ್ಲಿ ಸಿಲುಕೊಂಡಿದ್ದ ಸುಮಾರು 4,600 ವಲಸಿಗರನ್ನು ಜಿಲ್ಲಾಡಳಿತಗಳ ನೆರವಿನೊಂದಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಅವರ ತವರು ಜಿಲ್ಲೆಗಳಿಗೆ ತಲುಪಿಸಿದ್ದು, ಕೋವಿಡ್ 19 ಸೋಂಕಿನ ಭೀತಿಯ ನಡುವೆಯೂ ಚಾಲಕ, ನಿರ್ವಾಹಕ ಹಾಗೂ ಇನ್ನಿತರ ಸಿಬ್ಬಂದಿ ಕರ್ತವ್ಯಪ್ರಜ್ಞೆ ಮೆರೆದಿದ್ದಾರೆ.

Advertisement

ರಾಜ್ಯ ಸರಕಾರದ ಸೂಚನೆ ಮೇರೆಗೆ ನಾಲ್ಕು ದಿನಗಳ ಕಾಲ ಈ ಉಚಿತ ಬಸ್‌ ಸೇವೆ ಅಲ್ಲಲ್ಲಿ ಸಿಲುಕಿಕೊಂಡಿದ್ದವರಿಗೆ ವರದಾನವಾಯಿತು. ಸರಕಾರದ ಆದೇಶದಂತೆ ವಾಯವ್ಯ ಸಾರಿಗೆ ಸಂಸ್ಥೆ ತನ್ನ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಹಾವೇರಿ, ಗದಗ, ಉತ್ತರ ಕನ್ನಡ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಸಿಲುಕಿದ್ದ 4,600 ಪ್ರಯಾಣಿಕರನ್ನು 387 ಬಸ್‌ಗಳ ಮೂಲಕ ತವರು ಜಿಲ್ಲೆಗಳಿಗೆ ಸುರಕ್ಷಿತವಾಗಿ ತಲುಪಿಸುವ ಕಾರ್ಯ ಮಾಡಿದೆ. ಜಿಲ್ಲಾ ಕೇಂದ್ರಗಳಿಗೆ ಆಗಮಿಸಿದ ಪ್ರಯಾಣಿಕರನ್ನು ಆಯಾ ಗ್ರಾಮಗಳಿಗೆ ತಲುಪಿಸುವ ಕೆಲಸ ಆಯಾ ವಿಭಾಗಗಳ ವ್ಯಾಪ್ತಿಯಲ್ಲಿ ನಡೆದಿದೆ. ಸುಮಾರು 600 ಚಾಲನಾ, ತಾಂತ್ರಿಕ ಹಾಗೂ ಅಧಿಕಾರಿಗಳು ಮತ್ತು ಇತರೆ ಸಿಬ್ಬಂದಿ ನಾಲ್ಕು ದಿನಗಳ ಕಾರ್ಯನಿರ್ವಹಿಸಿದ್ದಾರೆ.

ಹೊರಗಡೆಯಿಂದ ಬಂದಿದ್ದೇ ಹೆಚ್ಚು: ಸಂಸ್ಥೆ ವ್ಯಾಪ್ತಿಯ ಆರು ಜಿಲ್ಲೆಗಳಿಂದ ಹೊರ ಜಿಲ್ಲೆಗಳಿಗೆ ಹೋದ ವಲಸಿಗರಿಗಿಂತ ಬಂದವರೇ ಹೆಚ್ಚು. ರಾಜ್ಯದ ವಿವಿಧ ಜಿಲ್ಲೆಗಳಿಂದ 6,481 ಜನರು ಆಗಮಿಸಿದ್ದಾರೆ.

ಬಸ್‌ ನಿಲ್ದಾಣಗಳಲ್ಲಿ ಸ್ಥಾಪಿಸಿದ್ದ ಆರೋಗ್ಯ ತಪಾಸಣಾ ಕೇಂದ್ರಗಳಲ್ಲಿ ವೈದ್ಯಕೀಯ ಸಿಬ್ಬಂದಿ ಪ್ರತಿಯೊಬ್ಬರ ಮಾಹಿತಿ ಸಂಗ್ರಹಿಸಿ ಥರ್ಮಲ್‌ ಸ್ಕ್ರಿನಿಂಗ್‌ಗೆ ಒಳಪಡಿಸಿದ್ದಾರೆ. ಬಂದವರನ್ನೆಲ್ಲಾ ಹೋಂ ಕ್ವಾರಂಟೈನ್‌ಗೆ ಒಳಪಡಿಸಿ ಆರೋಗ್ಯ ಸಲಹೆ ನೀಡುವ ಕೆಲಸ ಮಾಡಿದ್ದಾರೆ. ಆಗಮಿಸಿದ ಇಷ್ಟು ಜನರಲ್ಲಿ ಶೇ.70 ಜನ ಬೆಂಗಳೂರು ಹಾಗೂ ಮಂಗಳೂರು ಜಿಲ್ಲೆಗಳಿಗೆ ದುಡಿಯಲು ಹೋಗಿದ್ದ ಕಾರ್ಮಿಕರೇ ಹೆಚ್ಚು. ಬೆಂಗಳೂರಿನಲ್ಲಿ ನೆಲೆಸಿದ್ದ ವಲಸಿಗರಿಗೆ ಸಂಸ್ಥೆಯ ವಿವಿಧ ವಿಭಾಗಗಳಿಂದ ಬಸ್‌ಗಳನ್ನು ಕಳುಹಿಸಿ ಕರೆದುಕೊಂಡು ಬರುವ ವ್ಯವಸ್ಥೆ ಮಾಡಲಾಗಿತ್ತು.

ಹು-ಧಾ ಜನರೇ ಹೆಚ್ಚು: ಸಂಸ್ಥೆಯ ವ್ಯಾಪ್ತಿಯ ಆರು ಜಿಲ್ಲೆಗಳ ಪೈಕಿ ಬೇರೆ ಜಿಲ್ಲೆಗಳಿಗೆ ಪ್ರಯಾಣ ಮಾಡಿದವರಲ್ಲಿ ಹುಬ್ಬಳ್ಳಿ-ಧಾರವಾಡದವರೇ ಹೆಚ್ಚು. ಕಳೆದ ನಾಲ್ಕು ದಿನಗಳಿಂದ 136 ಬಸ್‌ ಗಳ ಮೂಲಕ ಬರೋಬ್ಬರಿ 2,950 ಜನ ವಿವಿಧ ಜಿಲ್ಲೆಗಳಿಗೆ ಪ್ರಯಾಣ ಮಾಡಿದ್ದು, ಬಹುತೇಕರು ಬೆಂಗಳೂರು, ಮಂಗಳೂರು ಹಾಗೂ ಕಲಬುರಗಿ ಜಿಲ್ಲೆಗಳಿಗೆ ತೆರಳಿದ್ದಾರೆ. ಇಲ್ಲಿಂದಲೇ ಗುಜರಾತನ ಅಹ್ಮದಾಬಾದ್‌ಗೂ ಕೂಡ ಬಸ್‌ ಮೂಲಕ ತೆರಳಿದ್ದಾರೆ. ಕೋವಿಡ್ 19 ಸೋಂಕು ಪ್ರಕರಣಗಳು ಹೆಚ್ಚಿರುವ ರಾಜ್ಯಗಳಿಗೆ ತೆರಳಿದ್ದ ಚಾಲನಾ ಸಿಬ್ಬಂದಿ ಸ್ವಯಂ ಕ್ವಾರಂಟೈನ್‌ ಆಗಿ ಸಂಸ್ಥೆಯ ಪ್ರತ್ಯೇಕ ಸ್ಥಳದಲ್ಲಿ ದಿನಗಳನ್ನು ಕಳೆದು ಪ್ರಯೋಗಾಲಯದ ವರದಿ ನೆಗೆಟಿವ್‌ ಬಂದ ನಂತರ ತಮ್ಮ ಮನೆಗಳಿಗೆ ತೆರಳಿದ್ದಾರೆ. ಬಂದವರಿಗೆ ಉಪಾಹಾರ, ಊಟ, ಬಿಸ್ಕೀಟ್‌, ನೀರು, ಮಾಸ್ಕ್ ನೀಡಿ ವಿವಿಧ ಸಂಘ-ಸಂಸ್ಥೆ ಮಾನವೀಯತೆ ತೋರಿದವು.

Advertisement

ಸರಕಾರದ ಆದೇಶದ ಮೇರೆಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ ಮಾರ್ಗದರ್ಶನದ ಮೇರೆಗೆ ವಲಸಿಗರನ್ನು ಅವರ ಜಿಲ್ಲೆಗಳಿಗೆ ಸುರಕ್ಷಿತವಾಗಿ ತಲುಪಿಸುವ ಕಾರ್ಯ ಮಾಡಲಾಗಿದೆ. ಸಂಸ್ಥೆಯ ಕಾರ್ಯ ತುರ್ತು ಸೇವೆಯಡಿ ಬರುವುದರಿಂದ ಸೋಂಕಿನ ಭೀತಿಯ ನಡುವೆ ಸಿಬ್ಬಂದಿ ಅಧಿಕಾರಿಗಳು ನಿಯೋಜಿಸಿದ ಕರ್ತವ್ಯ ಹಾಗೂ ಜಿಲ್ಲೆಗಳಿಗೆ ತೆರಳಿ ಪ್ರಯಾಣಿಕರನ್ನು ತಲುಪಿಸುವ ಕೆಲಸ ಮಾಡಿದ್ದಾರೆ.-ಸಂತೋಷಕುಮಾರ, ಮುಖ್ಯ ಸಂಚಾರ ವ್ಯವಸ್ಥಾಪಕ

 

-ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next