Advertisement

Trasi Beach: ಇನ್ನಷ್ಟು ಮನಮೋಹಕವಾಗಲಿದೆ ತ್ರಾಸಿ – ಮರವಂತೆ ಬೀಚ್‌

06:34 PM Oct 26, 2023 | Team Udayavani |

ಕುಂದಾಪುರ: ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ, ಅತ್ಯಪೂರ್ವವಾದ ತ್ರಾಸಿ-ಮರವಂತೆ ಕಡಲ ತೀರ ಇನ್ನಷ್ಟು ಸುಂದರವಾಗಿಸಿ, ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹೊಸ ಕಾಮಗಾರಿ ಶುರುವಾಗಿದೆ.

Advertisement

9.95 ಕೋ.ರೂ. ವೆಚ್ಚದಲ್ಲಿ ಸೀವಾಕ್‌, ವಿಶಾಲ ಪಾರ್ಕಿಂಗ್‌ ವ್ಯವಸ್ಥೆ, ಫುಡ್‌ ಕೋರ್ಟ್‌, ಸೈಕಲ್‌ ಟ್ರ್ಯಾಕ್‌, ಮಕ್ಕಳ ಪಾರ್ಕ್‌ ಸಹಿತ ವಿವಿಧ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಕುಂದಾಪುರ- ಗೋವಾ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66 ತ್ರಾಸಿ – ಮರವಂತೆ ಕಡಲ ತೀರದ ಸಮೀಪದಲ್ಲೇ ಕುಂದಾಪುರ – ಗೋವಾ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66 ಹಾದು ಹೋಗುತ್ತಿದ್ದು, ಅದಾಗಿಯೂ ಇಲ್ಲಿ ಪ್ರವಾಸಿಗರನ್ನು ಸೆಳೆಯುವಂತಹ ಯಾವುದೇ ಮಹತ್ವದ ಅಭಿವೃದ್ಧಿ ಕಾರ್ಯಗಳು ಕಳೆದ 10-15 ವರ್ಷಗಳಿಂದ ನಡೆದಿಲ್ಲ. ರಾಜ್ಯದ ಅತ್ಯಂತ ಸುಂದರ ಬೀಚ್‌ ಆಗಿರುವ ಈ ತ್ರಾಸಿ – ಮರವಂತೆ ಬೀಚ್‌ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ಈಗಾಗಲೇ ನೀಲ ನಕಾಶೆ ಸಿದ್ಧಪಡಿಸಿದ್ದು, ಕರ್ನಾಟಕ ಟೂರಿಸಂ ಡೆವಲಪ್‌ ಮೆಂಟ್‌ ಲಿಮಿಟೆಡ್‌(ಕೆಟಿಎಲ್‌) ಇದರ ಕಾಮಗಾರಿ ನಿರ್ವಹಿಸಲಿದೆ.

ಏನೆಲ್ಲ ಅಭಿವೃದ್ಧಿ ಕಾರ್ಯ
ತ್ರಾಸಿ – ಮರವಂತೆಗೆ ಬರುವಂತಹ ಪ್ರವಾಸಿಗರಿಗೆ ಸದ್ಯ ವಾಹನ ನಿಲುಗಡೆಗೆ ಸಮಸ್ಯೆಯಾಗುತ್ತಿದ್ದು, ಎರಡೂ ಕಡೆಗಳಲ್ಲಿ ತಲಾ 100 ವಾಹನಗಳು ನಿಲ್ಲಿಸುವಂತಹ ಸುವ್ಯವಸ್ಥಿತ ಪಾರ್ಕಿಂಗ್‌ ವ್ಯವಸ್ಥೆ, ಕಡಲ ತೀರದುದ್ದಕ್ಕೂ ಫುಟ್‌ಪಾತ್‌, 650 ಮೀ. ಸೈಕಲ್‌ ಟ್ರ್ಯಾಕ್‌, ಫುಡ್‌ ಕೋರ್ಟ್‌, ವಿಹಾರಿಗಳಿಗೆ ಕುಳಿತುಕೊಳ್ಳುವಂತಹ ವ್ಯವಸ್ಥೆ, ತ್ರಾಸಿ ಬೀಚ್‌ ಬಳಿ ಬಯಲು ರಂಗ ಮಂಟಪ, ಮಕ್ಕಳಿಗೆ ಆಟವಾಡಲು ಪಾರ್ಕ್‌, ಎರಡೂ ಕಡೆ ಪ್ರವೇಶ- ನಿರ್ಗಮನ ದ್ವಾರ, ಕಡಲಾಮೆ ಶಿಲ್ಪಾಕೃತಿ, ಶೌಚಾಲಯ ವ್ಯವಸ್ಥೆ ಸಹಿತ ಇನ್ನಿತರ ಹಲವು ಕಾಮಗಾರಿ ಈ ಅಭಿವೃದ್ಧಿ ಕಾಮಗಾರಿಯಲ್ಲಿ ಒಳಗೊಂಡಿದೆ.

ಶಾಸಕರ ಸಭೆ
ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ಅವರು ಸಹ ಇತ್ತೀಚೆಗೆ ತ್ರಾಸಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಸಭೆ
ಕರೆದು, ಕಾಮಗಾರಿ ತ್ವರಿತಗತಿಯಲ್ಲಿ ನಿರ್ವಹಿಸುವ ಹಾಗೂ ಸ್ಥಳೀಯ ಗ್ರಾ.ಪಂ.ಗಳನ್ನು ಪರಿಗಣನೆಗೆ ತೆಗೆದುಕೊಳ್ಳುವ ಬಗ್ಗೆ ಸೂಚನೆ ನೀಡಿದ್ದರು. ಆದಷ್ಟು ಬೇಗ ಸುಸಜ್ಜಿತ ಪಾರ್ಕಿಂಗ್‌ ವ್ಯವಸ್ಥೆಯನ್ನು ಮಾಡಿಕೊಡಲು ಸಹ ಸೂಚಿಸಿದ್ದರು.

ತ್ರಾಸಿ – ಮರವಂತೆ ಬೀಚ್‌ ಹಾಗೂ ಪ್ರವಾಸಿ ಮಂದಿರ ಬಳಿ ಎರಡೂ ಹಂತದ ಕಾಮಗಾರಿ ನಡೆಯುತ್ತಿದೆ. ಟಿ ಆಕಾರದ ತಡೆಗೋಡೆಯಲ್ಲಿ ಸೀವಾಕ್‌ ಮಾಡುವ ಯೋಜನೆಯಿದ್ದು, ಹೆದ್ದಾರಿ ಬದಿ ಸೈಕಲ್‌ ಟ್ರ್ಯಾ ಕ್‌ ಸಹ ಇರಲಿದ್ದು, ಇವರೆಡಕ್ಕೂ ಸಿಆರ್‌ಝಡ್‌ ಅನುಮತಿ ಸಿಗಬೇಕಿದೆ. ಉಳಿದಂತೆ ಎಲ್ಲ ಕಾಮಗಾರಿ ನಡೆಯಲಿದೆ ಎನ್ನುವುದಾಗಿ ಕಾಮಗಾರಿಯ
ನಿರ್ವಹಿಸುತ್ತಿರುವ ಕರ್ನಾಟಕ ಟೂರಿಸಂ ಡೆವಲಪ್‌ಮೆಂಟ್‌ ಲಿಮಿಟೆಡ್‌(ಕೆಟಿಎಲ್‌)ನ ಸಹಾಯಕ ಎಂಜಿನಿಯರ್‌ ಮುತ್ತುರಾಜ್‌ “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

Advertisement

ವರ್ಷದೊಳಗೆ ಪೂರ್ಣ
ಪ್ರವಾಸಿಗರನ್ನು ಆಕರ್ಷಿಸುವ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ತ್ರಾಸಿ- ಮರವಂತೆ ಬೀಚ್‌ನಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಈಗಷ್ಟೇ ಕಾಮಗಾರಿ ಆರಂಭಗೊಂಡಿದ್ದು, ತ್ವರಿತಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಒಂದು ವರ್ಷದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. 9.95 ಕೋ.ರೂ. ವೆಚ್ಚದಲ್ಲಿ ಈ ಕಾಮಗಾರಿ ನಡೆಯಲಿದೆ.
ಕುಮಾರ ಸಿ.ಯು., ಸಹಾಯಕ ನಿರ್ದೇಶಕರು,
ಪ್ರವಾಸೋದ್ಯಮ ಇಲಾಖೆ ಉಡುಪಿ

*ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next