ಚಿಂಚೋಳಿ: ತಾಲೂಕಿನ ಎಲ್ಲ ತಾಂಡಾಗಳಲ್ಲಿ ಎಲ್ಲರೂ ಪ್ರೀತಿಯಿಂದ ಜೀವನ ಸಾಗಿಸಬೇಕು ಹಾಗೂ ಸಹೋದರತ್ವ ಭಾವನೆಗಳು ಮತ್ತು ಶರಣರ ಸಂತರ ವಿಚಾರಗಳನ್ನು ಮೈಗೂಡಿಸಿಕೊಂಡು ಒಳ್ಳೆ ಮಾರ್ಗದಲ್ಲಿ ನಡೆಯಬೇಕು ಎಂದು ಬಂಜಾರ ಸಮಾಜದ ಮಹಾರಾಷ್ಟ್ರ ಪೌರಾದೇವಿ ಶಕ್ತಿ ಪೀಠದ ಡಾ| ರಾಮರಾವ ಮಹಾರಾಜರು ಹೇಳಿದರು.
ಪಟ್ಟಣದ ಚಂದಾಪುರ ತಾಂಡಾದಲ್ಲಿ ಮಂಗಳವಾರ ಆಲ್ ಇಂಡಿಯಾ ಬಂಜಾರ ಸೇವಾ ಸಂಘ ತಾಲೂಕ ಘಟಕ ಏರ್ಪಡಿಸಿದ್ದ ಶ್ರೀ ಸಂತ ಸೇವಾಲಾಲ ಮಹಾರಾಜರ 278ನೇ ಜಯಂತ್ಯುತ್ಸವ ಸಮಾರಂಭ ಮತ್ತು ಧಾರ್ಮಿಕ ಸಭೆಯಲ್ಲಿ ಸ್ವಾಮೀಜಿ ಮಾತನಾಡಿದರು.
ಪ್ರತಿಯೊಬ್ಬರು ದುಶ್ವಟಗಳಿಂದ ದೂರವಿದ್ದು, ತಮ್ಮ ಸಂಸಾರದಲ್ಲಿ ಸುಖ ಶಾಂತಿಯಿಂದ ಜೀವನ ನಡೆಸಬೇಕು ಎಂದು ಹೇಳಿದರು. ಪೌರಾದೇವಿಯಲ್ಲಿ ಲಕ್ಷ ಸಹಸ್ರ ಮಹಾಚಂಡಿಯಾಗ ಯಜ್ಞ ನಡೆಯಲಿದೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸದೀಯ ಕಾರ್ಯದರ್ಶಿ ಡಾ| ಉಮೇಶ ಜಾಧವ ಮಾತನಾಡಿ, ಡಾ| ರಾಮರಾವ ಮಹಾರಾಜರು ಚಿಂಚೋಳಿ ತಾಲೂಕಿಗೆ ಅನೇಕ ಸಲ ಭೇಟಿ ನೀಡಿ ಪಾವನಗೊಳಿಸಿದ್ದಾರೆ. ನಾವೆಲ್ಲರೂ ಅವರ ತತ್ವ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಬಂಜಾರ ಸಮಾಜದ ಮುಖಂಡ ಸುಭಾಶ ರಾಠೊಡ ಮಾತನಾಡಿದರು. ಜಗನ್ನಾಥ ರಾಠೊಡ ಪ್ರಾಸ್ತಾವಿಕ ಮಾತನಾಡಿದರು. ಬಳೀರಾಮ ಮಹಾರಾಜರು ಗೊಬ್ಬರು ವಾಡಿ, ವಿಠಲ ಮಹಾರಾಜರು ಸಂಗಾರೆಡ್ಡಿ, ತಾಪಂ ಅಧ್ಯಕ್ಷೆ ರೇಣುಕಾ ಚವ್ಹಾಣ, ಜಿಪಂ ಸದಸ್ಯ ಗೌತಮ ಪಾಟೀಲ, ಮೋತಿರಾಮ ನಾಯಕ, ಭೀಮರಾವ ರಾಠೊಡ, ರಾಮಶೆಟ್ಟಿ ರಾಠೊಡ, ಸಂಜೀವಕುಮಾರ ಚವ್ಹಾಣ, ರಾಮಚಂದ್ರ ಜಾಧವ,
ಅರುಣ ಪವಾರ, ಪುರಸಭೆ ಅಧ್ಯಕ್ಷೆ ಇಂದುಮತಿ ದೇಗಲಮಡಿ, ತಾಪಂ ಸದಸ್ಯರಾದ ಪ್ರೇಮಸಿಂಗ ಜಾಧವ, ಬಸವರಾಜ ಮಲಿ ಸೇರಿದಂತೆ ಬಂಜಾರ ಸಮಾಜದ ಅನೇಕ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ತಾಲೂಕು ಬಂಜಾರ ಸಮಾಜದ ಅಧ್ಯಕ್ಷ ರಾಮಶೆಟ್ಟಿ ಪವಾರ ಸ್ವಾಗತಿಸಿದರು. ಬಾಬು ಚವ್ಹಾಣ ನಿರೂಪಿಸಿದರು. ಅಶೋಕ ಚವ್ಹಾಣ ವಂದಿಸಿದರು.