ಮುಳಬಾಗಿಲು: ಇತ್ತೀಚಿಗೆ ಸುರಿದ ಮಳೆಯಿಂದಾಗಿ ತಾಲೂಕಿನ ನಂಗಲಿಯಿಂದ ಮರವೇಮನೆ ಗ್ರಾಮಕ್ಕೆ ಹೋಗುವ ಚೆಕ್ ಡ್ಯಾಂ, ರಸ್ತೆ ಕಡಿತಗೊಂಡಿದೆ. ಇದರಿಂದ 2 ತಿಂಗಳಿಂದ 9 ಗ್ರಾಮಗಳಿಗೆ ಸಂಪರ್ಕ ಬಂದ್ ಆಗಿದೆ. ನಂಗಲಿಯಿಂದ ಮರವೇಮನೆ, ಎನ್. ಕೊತ್ತೂರು ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯದ ನಂಗಲಿ ಏಟಿಗೆ (ಕೆರೆ ಕೋಡಿ ನೀರು ಹೋಗುವ ದೊಡ್ಡ ಕಾಲುವೆ) ಅಡ್ಡಲಾಗಿ ನಿರ್ಮಿಸಿರುವ ಚೆಕ್ ಡ್ಯಾಂ ಮತ್ತು ರಸ್ತೆ ಸಂಪೂರ್ಣ ಮಳೆಗೆ ಕೊಚ್ಚಿಕೊಂಡು ಹೋಗಿದೆ.
ಇದರಿಂದ ನಂಗಲಿ ಮರವೇಮನೆ ಮಾರ್ಗದ ಮೂಲಕ 9 ಗ್ರಾಮಗಳ ಜನ ಹೋಗಿ ಬರಲು ಪರದಾಡುವಂತಾಗಿದೆ. 17 ವರ್ಷಗಳ ನಂತರ ನಂಗಲಿ ಕೆರೆ ತುಂಬಿ ಕೋಡಿ ಹೋಗುತ್ತಿದ್ದು, ಇತ್ತೀಚಿಗೆ ಹತ್ತು ದಿನಗಳ ಹಿಂದೆ ಬಿದ್ದ ಭಾರೀ ಮಳೆ ಮತ್ತು ಐದು ಅಡಿಗಳಷ್ಟು ನಂಗಲಿ ಕೆರೆ ಕೋಡಿ ಹರಿದ ಕಾರಣದಿಂದ ಚೌಡೇಶ್ವರಮ್ಮ ದೇವಸ್ಥಾನದ ಬಳಿ ನಂಗಲಿ ಏಟಿಗೆ ಈಚೆಗೆ ಆರು ತಿಂಗಳ ಹಿಂದೆ ಚೆಕ್ ಡ್ಯಾಂ ನಿರ್ಮಿಸಲಾಗಿತ್ತು.
ಆದರೆ, ಭಾರೀ ಪ್ರಮಾಣದಲ್ಲಿ ಬಿದ್ದ ಮಳೆಗೆ ಒಂದು ಕಡೆ ಚೆಕ್ ಡ್ಯಾಂ ಒಡೆದು ಹೋಗಿ ಸಂಪರ್ಕ ಕಡಿತಗೊಂಡರೆ, ಮತ್ತೆ ಸ್ವಲ್ಪ ದೂರದಲ್ಲಿ ಇಡೀ ರಸ್ತೆ 50 ಮೀಟರ್ ಕೊಚ್ಚಿಕೊಂಡು ಹೋಗಿದೆ. ಇದರಿಂದ ಒಂಬತ್ತು ಗ್ರಾಮಗಳ ಜನ ಉಷ್ಟೂರು, ಕೆರಸಿಮಂಗಲ ಹಾಗೂ ಮುದಿಗೆರೆ ಮಾರ್ಗಗಳ ಮೂಲಕ ನಂಗಲಿ ಕಡೆಗೆ ಸುತ್ತಿಕೊಂಡು ಹೋಗಬೇಕಾಗಿದೆ.
ಹಾಳಾಗಿರುವ ರಸ್ತೆಯ ಮೂಲಕ ನೂರಾರು ವರ್ಷಗಳಿಂದ ನಂಗಲಿ ಮಾರ್ಗವಾಗಿ ಮರವೇಮನೆ, ಕೊತ್ತೂರು, ಚಿನ್ನಹಳ್ಳಿ, ಪೆದ್ದೂರು, ಘಟ್ಟು ವೆಂಕಟರಮಣ, ಪುಣ್ಯಹಳ್ಳಿ, ಬೈಯಪ್ಪಲ್ಲಿ, ಕಾಡೇನಹಳ್ಳಿ ಹಾಗೂ ಪೆರಮಾಕನಹಳ್ಳಿಗಳ ಜನ ಮತ್ತು ಜಾನುವಾರುಗಳು ಹೋಗಿ ಬರುತ್ತಿದ್ದವು. ಆದರೆ, ಅನಿರೀಕ್ಷಿತವಾಗಿ ಸುಮಾರು ವರ್ಷಗಳ ನಂತರ ಬಿದ್ದ ಭಾರೀ ಮಳೆಗೆ ಚೆಕ್ ಡ್ಯಾಂ, ರಸ್ತೆ ಕಡಿತಗೊಂಡಿದೆ.
ಇದನ್ನೂ ಓದಿ: ಮೊಟ್ಟೆ ಕೈಬಿಡಿ, ಇಲ್ಲವಾದಲ್ಲಿ ಸಸ್ಯಹಾರಿಗಳಿಗೆ ಪ್ರತ್ಯೇಕ ಶಾಲೆ ಮಾಡಿ: ಆಗ್ರಹ
ಇದರಿಂದ 2 ತಿಂಗಳಿಂದ ನಂಗಲಿಗೆ ಹೋಗಿ ಬರಲು 6 ಕಿ.ಮೀ. ಸುತ್ತಿಕೊಂಡು ಹೋಗಿ ಬರಬೇಕಾಗಿದೆ ಎಂದು ಏಟಿ ಪಕ್ಕದ ವಾಸಿ ಮೈಸೂರು ಸುರೇಶ್ ರಾಜು ಹೇಳಿದರು. ಈಚೆಗೆ ಬಿದ್ದ ಮಳೆಗೆ ಗ್ರಾಮೀಣ ಭಾಗದಲ್ಲಿ ಬಹುತೇಕ ರಸ್ತೆಗಳು ನಾಶಗೊಂಡಿವೆ. ಆದರೆ, 9 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿ ಎರಡು ತಿಂಗಳುಗಳು ಕಳೆಯುತ್ತಿದೆ. ಆದರೂ, ಏಟಿಯಲ್ಲಿ ನೀರೂ ಕಡಿಮೆ ಆಗಿಲ್ಲ. ಆದ್ದರಿಂದ ಕೂಡಲೇ ಶಾಸಕರು ಮತ್ತು ಸಂಬಂಧಿಸಿದ ಅಧಿಕಾರಿಗಳು ಚೆಕ್ ಡ್ಯಾಮ್ ಮತ್ತು ರಸ್ತೆಯನ್ನು ಸರಿಪಡಿಸಿ ಜನರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ ಎಂದು ಮರವೇಮನೆ ವೆಂಕಟಪ್ಪ ಮನವಿ ಮಾಡಿದರು.