ಬೆಂಗಳೂರು: ಕಾರ್ಮಿಕ ಮುಖಂಡ ಅನಂತ್ ಸುಬ್ಬರಾವ್ ನೇತೃತ್ವದಲ್ಲಿ ಮಾ.21ರಂದು ಕರೆ ನೀಡಲಾಗಿದ್ದ ಸಾರಿಗೆ ನೌಕರರ ಮುಷ್ಕರ ಹಿಂಪಡೆಯಲಾಗಿದೆ. ಆದರೆ, ರಾಜ್ಯ ಕೆಎಸ್‌ಆರ್‌ಟಿಸಿ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ಬಣ ಮಾ.24ರಂದು ಅನಿರ್ದಿಷ್ಟಾವಧಿ ಸಾರಿಗೆ ಮುಷ್ಕರ ನಡೆಸುವುದಾಗಿ ತಿಳಿಸಿದೆ.
ಶನಿವಾರ ಸಂಜೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನುºಕುಮಾರ್ ಜೊತೆಗೆ ಸಾರಿಗೆ ಸಂಘಟನೆಯ ಮುಖಂಡರು ಸಭೆ ನಡೆಸಿದ್ದರು. ಈ ಹಿಂದೆ ಮುಷ್ಕರದ ವೇಳೆ ವಜಾಗೊಂಡ ನೌಕರರ ಮರು ಸೇರ್ಪಡೆ, ವಾರ್ಷಿಕ ವೇತನ ಬಡ್ತಿ ಹೆಚ್ಚಳದ ಜೊತೆಗೆ ಬೇಡಿಕೆ ಈಡೇರಿಸುವ ಭರವಸೆ ನೀಡಲಾಗಿದೆ ಎಂದು ಹೇಳಲಾಗಿದೆ. ಹೀಗಾಗಿ ಸಾರಿಗೆ ಮುಷ್ಕರ ವಾಪಸ್ ಪಡೆಯಲಾಗಿದೆ.
4 ಸಾರಿಗೆ ನಿಗಮಗಳ ನೌಕರರ ವೇತನವನ್ನು ಶೇ.15ರಷ್ಟು ಏರಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಇದನ್ನು ತಿರಸ್ಕರಿಸಿದ್ದ ಸಾರಿಗೆ ನೌಕರರ ಸಂಘಟನೆಗಳು ಅನಂತ್ ಸುಬ್ಬರಾವ್ ನೇತೃತ್ವದಲ್ಲಿ ಮುಷ್ಕರಕ್ಕೆ ಮುಂದಾಗಿದ್ದರು. ಈಗ ಸಭೆಯ ಬಳಿಕ 8 ಟ್ರೇಡ್ ಯೂನಿಯನ್‌ಗಳು ಕರೆ ನೀಡಿದ್ದ ಮುಷ್ಕರ ಹಿಂಪಡೆಯಲಾಗಿದೆ.
ಮಾ.24ರಂದು ಸಾರಿಗೆ ನೌಕರರ
ಮತ್ತೊಂದು ಬಣದಿಂದ ಮುಷ್ಕರ?
ಬೆಂಗಳೂರು: ರಾಜ್ಯ ಕೆಎಸ್‌ಆರ್‌ಟಿಸಿ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ಬಣ ಮಾ.24ರಂದು ಅನಿರ್ದಿಷ್ಟಾವಧಿ ಸಾರಿಗೆ ಮುಷ್ಕರ ನಡೆಸುವುದಾಗಿ ತಿಳಿಸಿದೆ.
ಮತ್ತೊಂದೆಡೆ ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆಯು ಮಾ.24ರಂದು ಮುಷ್ಕರ ನಡೆಸುವುದಾಗಿ ತಿಳಿಸಿದೆ. ಮುಷ್ಕರದ ಸಮಯದಲ್ಲಿ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ ನೌಕರರಿಗೆ ಆಗಿರುವ ಎಲ್ಲ ಸಮಸ್ಯೆ ನಿವಾರಿಸಿ 2021ರ ಏ.6 ರ ಯಥಾಸ್ಥಿತಿ ಕಾಪಾಡುವುದು. ಸರ್ಕಾರ ನೀಡಿರುವ ಲಿಖೀತ ಭರವಸೆಯಂತೆ ಸಾರಿಗೆ ನೌಕರರಿಗೂ ವೇತನ ಆಯೋಗದ ಮಾದರಿಯಲ್ಲಿ, ಸರ್ಕಾರಿ ನೌಕರರ ಸರಿ ಸಮಾನ ವೇತನವನ್ನು 2020 ಜ.1 ರಿಂದ ಅನ್ವಯವಾಗುವಂತೆ ನೀಡುವುದು.
ಇಲಾಖೆಯಲ್ಲಿನ ಎಲ್ಲ ಸಮಸ್ಯೆಗಳಿಗೆ ಕಾರ್ಮಿಕ ಸಂಘಟನೆಗಳಿಗೆ ಚುನಾವಣೆ ಮಾಡದಿರುವುದೇ ಮೂಲ ಕಾರಣವಾಗಿರುವುದರಿಂದ ತುರ್ತಾಗಿ ನಿಗದಿತ ಅವಧಿಯೋಳಗೆ ಸಂಘಟನೆಗಳಿಗೆ ಚುನಾವಣೆ ನಡೆಸುವುದು. ಸಾರಿಗೆ ಸಂಸ್ಥೆಯಲ್ಲಿ ನಡೆಯುತ್ತಿರುವ ಖಾಸಗೀಕರಣಕ್ಕೆ ಪೂರಕವಾದ ಎಲ್ಲ ಯೋಜನೆಯನ್ನು ಕೂಡಲೇ ಕೈಬಿಡಬೇಕು ಎಂದು ಬೇಡಿಕೆಯಿಟ್ಟಿದೆ.