Advertisement

ಕುಟುಂಬ ಸಹಿತ ಸಾರಿಗೆ ನೌಕರರ ನಿರಶನ

10:37 AM Jan 28, 2020 | Suhan S |

ಬೆಂಗಳೂರು: ಸರ್ಕಾರಿ ನೌಕರರನ್ನಾಗಿ ಘೋಷಿಸುವಂತೆ ಒತ್ತಾಯಿಸಿ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ನೇತೃತ್ವದಲ್ಲಿ ಸೋಮವಾರ ಸಾರಿಗೆ ನೌಕರರು ಕುಟುಂಬ ಸಹಿತ ಸ್ವಾತಂತ್ರ್ಯ ಉದ್ಯಾನದಲ್ಲಿ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸಿದರು.

Advertisement

ಸರ್ಕಾರಿ ನೌಕರರಾಗುವುದು ಬೇಡಿಕೆ ಅಲ್ಲ; ನಮ್ಮ ಹಕ್ಕು. ಆದರೆ, ಇದುವರೆಗಿನ ಸರ್ಕಾರಗಳು ಈ ಹಕ್ಕಿನಿಂದ ನಮ್ಮನ್ನು ವಂಚಿಸಿವೆ. ಈಗಲಾದರೂ ಪ್ರಸ್ತುತ ಸರ್ಕಾರವು ಮನಸ್ಸು ಮಾಡಬೇಕು. ಬರುವ ಬಜೆಟ್‌ನಲ್ಲಿ ಸಾರಿಗೆ ನೌಕರರನ್ನು”ಸರ್ಕಾರಿ ನೌಕರರು’ ಎಂದು ಘೋಷಿಸುವಂತೆ ಒತ್ತಾಯಿಸಿ ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಸಮವಸ್ತ್ರ ಧರಿಸಿ ಸತ್ಯಾಗ್ರಹ ನಡೆಸಿದರು. ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ನೌಕರರು “ಆಂಧ್ರ ಮಾದರಿಯಲ್ಲಿ ನಮ್ಮನ್ನು ಸರ್ಕಾರಿ ನೌಕರರಾಗಿ ಪರಿಗಣಿಸಿ’, “ನಮ್ಮ ಹಕ್ಕಿಗಾಗಿ ನಮ್ಮ ಹೋರಾಟ’, “ನಮ್ಮ ಹಕ್ಕು ನಮಗೆ ಕೊಡಿ’ ಎಂಬ ಭಿತ್ತಿಫ‌ಲಕ ಪ್ರದರ್ಶಿಸಿದರು. ಮಕ್ಕಳು ಕೂಡ “ನಮ್ಮ ತಂದೆಯನ್ನು ಸರ್ಕಾರಿ ನೌಕರರಾಗಿ ಮಾಡಿ’ ಎಂಬ ಭಿತ್ತಿಫ‌ಲಕ ಪ್ರದರ್ಶಿಸುವ ಮೂಲಕ ಗಮನಸೆಳೆದರು.

ಆಮರಣಾಂತ ಉಪವಾಸ; ಎಚ್ಚರಿಕೆ: ಈ ವೇಳೆ ಮಾತನಾಡಿದ ರಸ್ತೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್‌, ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರನ್ನು ಸರ್ಕಾರಿ ನೌಕರರಾಗಿ ಘೋಷಿಸುವಂತೆ ದಶಕದಿಂದ ಹೋರಾಟ ನಡೆಸಲಾಗುತ್ತಿದೆ. ಇತ್ತೀಚೆಗೆ ಆಂಧ್ರಪ್ರದೇಶ ಸರ್ಕಾರವು ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಿದೆ. ರಾಜ್ಯದಲ್ಲಿಯೂ ಇದೇ ಮಾದರಿಯನ್ನು ಅನುಸರಿಸದಿದ್ದರೆ ಅಮರಣಾಂತ ಉಪವಾಸ ನಡೆಸುವುದಾಗಿ ಎಚ್ಚರಿಸಿದರು.

ಸರ್ಕಾರಿ ನೌಕರರಾಗಿ ಘೋಷಿಸುವ ಸಂಬಂಧದ ಅಧ್ಯಯನಕ್ಕೆ ರಚಿಸಿದ್ದ ಉನ್ನತ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಲು ವಿಳಂಬ ಮಾಡುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರವೇ ಈ ನಿಟ್ಟಿನಲ್ಲಿ ಮುಂದಾಗಬೇಕು ಎಂದೂ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next