ನವದೆಹಲಿ: “ವಾಹನ ಸಾಲದಡಿ ಖರೀದಿಸಲಾಗಿರುವ ಅಥವಾ ಬಾಡಿಗೆ ಭೋಗ್ಯಕ್ಕೆ ಪಡೆಯಲಾಗಿರುವ ಅಥವಾ ಮತ್ಯಾವುದೇ ರೀತಿಯ ಕಾನೂನಾತ್ಮಕ ಒಪ್ಪಂದದ ಮೇರೆಗೆ ಪಡೆಯಲಾಗಿರುವ ವಾಹನವನ್ನು ಸಾಲದ ಕಂತು ಕಟ್ಟದ ಕಾರಣಕ್ಕೆ ಜಪ್ತಿ ಮಾಡಿದರೆ, ಜಪ್ತಿ ಮಾಡಿರುವ ಹಣಕಾಸು ಸಂಸ್ಥೆಯೇ ಆ ವಾಹನಕ್ಕೆ ಸಂಬಂಧಿಸಿದ ತೆರಿಗೆಗಳನ್ನು ಪಾವತಿ ಮಾಡಬೇಕು’ ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದೆ.
ಜೊತೆಗೆ, ಇದೇ ತೀರ್ಪು ನೀಡಿದ್ದ ಅಲಹಾಬಾದ್ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ಮಹಿಂದ್ರಾ ಆ್ಯಂಡ್ ಮಹಿಂದ್ರಾ ಫೈನಾನ್ಶಿಯಲ್ ಸರ್ವೀಸಸ್ ಸಂಸ್ಥೆಯು ವ್ಯಕ್ತಿಗೆ ವಾಹನ ಕೊಳ್ಳಲು ಸಾಲ ನೀಡಿತ್ತು. ಆ ವ್ಯಕ್ತಿಯು ಸಾಲದ ಕಂತನ್ನು ಪಾವತಿಸದ ಹಿನ್ನೆಲೆಯಲ್ಲಿ, ಸಂಸ್ಥೆಯು ವಾಹನವನ್ನು ಜಪ್ತಿ ಮಾಡಿತ್ತು. ಆದರೆ, ಜಪ್ತಿಯಾದ ವಾಹನದ ತೆರಿಗೆಯನ್ನು ಯಾರು ಕಟ್ಟಬೇಕು, ವಾಹನ ಖರೀದಿಸಿದ ವ್ಯಕ್ತಿ ಕಟ್ಟಬೇಕೇ ಅಥವಾ ಜಪ್ತಿ ಮಾಡಿದ ಮಹಿಂದ್ರಾ ಸಂಸ್ಥೆ ಕಟ್ಟಬೇಕೇ ಎಂಬ ಪ್ರಶ್ನೆ ಉದ್ಭವವಾಗಿದ್ದರಿಂದ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು.
ಇದನ್ನೂ ಓದಿ:ಪಾಲಿಕೆ ಮೇಯರ್ ಚುನಾವಣೆ: ನಾಳೆ ಹೈಕೋರ್ಟ್ ನಲ್ಲಿ ಎಂಎಲ್ಸಿ ಅರ್ಜಿ ವಿಚಾರಣೆ
ಅರ್ಜಿಯ ವಿಚಾರಣೆ ನಡೆಸಿದ್ದ ಅಲಹಾಬಾದ್ ಹೈಕೋರ್ಟ್, ಮಹಿಂದ್ರಾ ಆ್ಯಂಡ್ ಮಹಿಂದ್ರಾ ಫೈನಾನ್ಶಿಯಲ್ ಸರ್ವೀಸಸ್ ಸಂಸ್ಥೆಯೇ ವಾಹನದ ತೆರಿಗೆ ಪಾವತಿಸಬೇಕು ಎಂದು ಸೂಚಿಸಿತ್ತು. ಇದರ ವಿರುದ್ಧ ಮಹಿಂದ್ರಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.