ಹುಬ್ಬಳ್ಳಿ: ಲಾಕ್‌ಡೌನ್‌ನಿಂದಾಗಿ ಸಾರಿಗೆ ಉದ್ಯಮ ಕುಸಿತ ಕಂಡಿದೆ. ಅದು ಚೇತರಿಸಿಕೊಳ್ಳಲು ಕನಿಷ್ಟ 1 ವರ್ಷವಾದರೂ ಬೇಕು ಎಂದು ಮಾಜಿ ಸಂಸದ ಹಾಗೂ ವಿಆರ್‌ಎಲ್ ಸಮೂಹ ಸಂಸ್ಥೆ ಚೇರ್ಮೇನ್ ಡಾ| ವಿಜಯ ಸಂಕೇಶ್ವರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾರಿಗೆ ಕ್ಷೇತ್ರ ಸಂಕಷ್ಟದಲ್ಲಿದೆ. ಕಳೆದ 5-6 ದಿನಗಳಿಂದ ಶೇ.20 ವ್ಯವಹಾರ ನಡೆಯುತ್ತಿದೆ. ಉದ್ಯಮ ಚೇತರಿಕೆಗೆ ಕನಿಷ್ಟ 1 ವರ್ಷ ಬೇಕೆನಿಸುತ್ತದೆ. ನಮ್ಮ ಸಂಸ್ಥೆಯಿಂದ ಸೇವೆ ಪಡೆಯುವ 22 ಲಕ್ಷ ಗ್ರಾಹಕರಿದ್ದಾರೆ. ಅವರು ಸದೃಢರಾದರೆ ನಾವು ಕೂಡ ಸದೃಢರಾಗಲು ಸಾಧ್ಯ. ಸಾರಿಗೆ ಉದ್ಯಮದ ಭವಿಷ್ಯದ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೋವಿಡ್-19 ನಿರ್ವಹಣೆಯಲ್ಲಿ ಭಾರತದಲ್ಲಿ ಕೈಗೊಂಡ ಕಾರ್ಯಗಳನ್ನು ಜಗತ್ತಿನ ಅನೇಕ ರಾಷ್ಟ್ರಗಳು ಶ್ಲಾಘನೆ ಮಾಡಿವೆ. 135 ಕೋಟಿ ಜನಸಂಖ್ಯೆಯ ಬಹುಭಾಷಾ, ಬಹುಧರ್ಮಗಳ ದೇಶದಲ್ಲಿ ಕೋವಿಡ್ ನಿಯಂತ್ರಿಸುವುದು ದೊಡ್ಡ ಸವಾಲು ಎಂದರು. ಜನರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡರೆ ಕೊರೊನಾ ಹರಡದಂತೆ ತಡೆಯುವುದು ಸಾಧ್ಯವಿದೆ. ಆರೋಗ್ಯ ವರ್ಧನೆ ದಿಸೆಯಲ್ಲಿ ನಮ್ಮ ಜೀವನ ಪದ್ಧತಿಯಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಿಕೊಳ್ಳುವುದು ಅವಶ್ಯ. ಯೋಗ ಹಾಗೂ ಪ್ರಾಣಾಯಾಮ ದಿನದ ಅಭ್ಯಾಸವಾಗಬೇಕು. ಹಣ್ಣುಗಳನ್ನು ಹಾಗೂ ಡ್ರೈಫ್ರುಟ್ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಬೇಕು. ವಿಟಮಿನ್ “ಸಿ’ ಹಣ್ಣುಗಳಾದ ನಿಂಬೆ, ಕಿತ್ತಳೆ ಹಣ್ಣುಗಳ ಸೇವನೆ ಹೆಚ್ಚಾಗಬೇಕು ಎಂದು ಅಭಿಪ್ರಾಯಪಟ್ಟರು.
ಹೆಫಾ ಫಿಲ್ಟರ್‌ಗೆ ಮನವಿ: ಹವಾನಿಯಂತ್ರಕಗಳಿಂದ ಶುದ್ಧ ವಾಯು ಸಿಗುತ್ತದೆ ಎಂಬುದು ಭ್ರಮೆ. ಹೊರಗಿನ ವಾತಾವರಣಕ್ಕಿಂತ 17 ಪಟ್ಟು ಕಲುಷಿತ ವಾಯು ಹವಾನಿಯಂತ್ರಕ ಕೊಠಡಿಯಲ್ಲಿರುತ್ತದೆ. ಹವಾನಿಯಂತ್ರಕಗಳಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ. ಶಸ್ತ್ರಚಿಕಿತ್ಸೆ ಕೊಠಡಿಗಳಲ್ಲಿ ಬಳಕೆ ಮಾಡುವ ಹೆಫಾ ಫಿಲ್ಟರ್ ಹೊಂದಿದ ಹವಾನಿಯಂತ್ರಕಗಳ ಬಳಕೆಯಿಂದ ಶೇ.99.97 ಆಮ್ಲಜನಕ ದೊರೆಯುತ್ತದೆ. ಎಲ್ಲ ಸರಕಾರಿ ಕಚೇರಿಗಳಲ್ಲಿ ಹವಾನಿಯಂತ್ರಕಗಳಿದ್ದರೆ ಕಡ್ಡಾಯವಾಗಿ ಹೆಫಾ ಫಿಲ್ಟರ್ ಅಳವಡಿಸುವಂತೆ ಮನವಿ ಮಾಡಿ ಪ್ರಧಾನಿಗೆ ಪತ್ರ ಬರೆಯಲಿದ್ದೇನೆ. ಕಾರ್ಪೆಟ್‌ಗಳಲ್ಲಿ ಫಂಗಸ್ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಗೊಳ್ಳುವುದರಿಂದ ಸರಕಾರಿ ಕಚೇರಿಗಳಲ್ಲಿನ ಕಾರ್ಪೆಟ್ ತೆಗೆಸಬೇಕೆಂದು ಕೂಡ ಪತ್ರದಲ್ಲಿ ಬರೆಯುತ್ತೇನೆ. ಸಣ್ಣ ಬದಲಾವಣೆಗಳು ನಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ಮಾಡುತ್ತವೆ ಎಂದರು.
ಜೀವನಪೂರ್ತಿ ಸರಕಾರದಿಂದ ವಿಧಾನ ಪರಿಷತ್ ಸದಸ್ಯ ಹಾಗೂ ಸಂಸದ ಪಿಂಚಣಿಯನ್ನು ಪಡೆಯದಿರಲು ನಿರ್ಧರಿಸಿದ್ದೇನೆ. ಎರಡೂ ಪಿಂಚಣಿಗಳನ್ನು ನೀಡದಿರುವಂತೆ ಸರಕಾರಕ್ಕೆ ಪತ್ರ ಬರೆಯುತ್ತೇನೆ. ದೇಶದ ಆರ್ಥಿಕ ಸ್ಥಿತಿ ಸುಧಾರಣೆಗಾಗಿ ಆಮದು ಪ್ರಮಾಣ ಕಡಿಮೆಯಾಗಬೇಕು. ಸ್ವದೇಶಿ ವಸ್ತುಗಳ ಖರೀದಿ ಹೆಚ್ಚಬೇಕು ಎಂದು ಹೇಳಿದರು.
“ರಾಜ್ಯಸಭಾ ಸ್ಥಾನಕ್ಕೆ ಲಾಬಿ ನಡೆಸಿಲ್ಲ’ : ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಯಾವುದೇ ಲಾಬಿ ಮಾಡುವುದಿಲ್ಲ. ನಾನು ಬಿಜೆಪಿ ನಿಷ್ಠಾವಂತ ಕಾರ್ಯಕರ್ತ. ಪಕ್ಷದ ಮುಖಂಡರ ಆದೇಶ ಪಾಲನೆ ಮಾಡುತ್ತೇನೆ. ರಾಜ್ಯಸಭಾ ಸದಸ್ಯ ಸ್ಥಾನಕ್ಕಾಗಿ ಯಾರೊಂದಿಗೂ ಚರ್ಚಿಸಿಲ್ಲ. ಯಾವುದೇ ಮುಖಂಡರು ಕೂಡ ನನ್ನ ಸಂಪರ್ಕ ಮಾಡಿಲ್ಲ ಎಂದು ಡಾ| ವಿಜಯ ಸಂಕೇಶ್ವರ ತಿಳಿಸಿದರು.
ಮಹಾನಗರ ಪಾಲಿಕೆ ಆಸ್ತಿಕರ ಹೆಚ್ಚಿಸಿರುವುದು ಸೂಕ್ತವಲ್ಲ. ಭ್ರಷ್ಟಾಚಾರ ಕಡಿಮೆಯಾಗದಿದ್ದರೆ ನಗರ ಉದ್ಧಾರ ಆಗುವುದಿಲ್ಲ. ಭ್ರಷ್ಟಾಚಾರ ಕಡಿಮೆಯಾದರೆ ಜನರ ಮೇಲೆ ತೆರಿಗೆ ಹೊರೆ ಹಾಕುವ ಅವಶ್ಯಕತೆ ಇರುವುದಿಲ್ಲ.
– ವಿಜಯ ಸಂಕೇಶ್ವರ, ಮಾಜಿ ಸಂಸದ