Advertisement

ಮೋದಿಯಿಂದ ಪಾರದರ್ಶಕ ಆಡಳಿತ: ಎಸ್‌.ಎಂ.ಕೃಷ್ಣ

09:23 AM Apr 09, 2019 | Team Udayavani |

ದೇವನಹಳ್ಳಿ: 5 ವರ್ಷಗಳ ಅವಧಿಯಲ್ಲಿ ಮೋದಿ ಸರ್ಕಾರ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಿದ್ದು ಈ ಬಾರಿ ಬಿಜೆಪಿಗೆ ಮತ ನೀಡಿ ಬೆಂಬಲಿಸಬೇಕೆಂದು ಕೇಂದ್ರ ವಿದೇಶಾಂಗ ಮಾಜಿ ಸಚಿವ ಎಸ್‌.ಎಂ.ಕೃಷ್ಣ ತಿಳಿಸಿದರು.

Advertisement

ತಾಲೂಕಿನ ಚಪ್ಪರದಕಲ್ಲು ಬಳಿ ಇರುವ ಗೋವಿಂದಪ್ಪ ಕನ್ವೆನ್ಶನ್‌  ಹಾಲ್‌ ಹಾಗೂ ಕಸಬಾ ಹೋಬಳಿ ಆವತಿ ಗ್ರಾಮದಲ್ಲಿ ಬಿಜೆಪಿ ಶಕ್ತಿ ಕೇಂದ್ರ ವತಿಯಿಂದ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಹತ್ತಾರು ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ದೇಶದ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದೆ. ಬಲಿಷ್ಠ ಭಾರತ ನಿರ್ಮಾಣ ಕಾರ್ಯಕ್ಕೆ ಬದ್ಧರಾಗಿರುವ ನರೇಂದ್ರ ಮೋದಿ ಅವರನ್ನು ಮತ್ತೂಮ್ಮೆ ಭಾರತದ ಪ್ರಧಾನಿಯನ್ನಾಗಿ ಆಯ್ಕೆ ಮಾಡುತ್ತದೆ.

ಹೀಗಾಗಿ ಮೋದಿ ಅವರು ಇನ್ನೊಂದು ಅವಧಿಗೆ ಪ್ರಧಾನಿಯಾಗಿ ಮುಂದುವರಿಯುತ್ತಾರೆಂದು ಹೇಳಿದರು. ದೇವನಹಳ್ಳಿಗೆ ತನ್ನದೇ ಆದ ಇತಿಹಾಸಗಳು ಇವೆ. ದೇವನಹಳ್ಳಿಗೆ ತಾನು ಮುಖ್ಯಮಂತ್ರಿಯಾಗಿದ್ದಾಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕೊಡುಗೆಯನ್ನಾಗಿ ನೀಡಿದ್ದೇನೆ.

ಆದರೆ, ವೀರಪ್ಪಮೊಯ್ಲಿ ಅವರು ತನ್ನ ಕಾಲದಲ್ಲಿ ಆಯಿತು ಎಂದು ಹೇಳುತ್ತಾರೆ. ವಿಮಾನ ನಿಲ್ದಾಣದಲ್ಲಿ ಹಾಕಿರುವ ಕಲ್ಲುಗಳು ಮತ್ತು ದಾಖಲೆಗಳನ್ನು ಮೊದಲು ನೋಡಿದರೆ ಯಾರ ಕಾಲದಲ್ಲಿ ಆಗಿದೆ ಎಂಬುದು ಜನತೆಗೆ ಅರ್ಥವಾಗುತ್ತದೆ. ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಬಾರದು ಎಂದು ಹೇಳಿದರು.

Advertisement

ಎತ್ತಿನಹೊಳೆ ಯೋಜನೆಯನ್ನು ಸ್ಥಳೀಯರು ನಿರ್ಧಾರ ಮಾಡಬೇಕು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಥಳೀಯವಾಗಿ ಉದ್ಯೋಗಾವಕಾಶಗಳು ವ್ಯಾಪಾರ ವಹಿವಾಟು ಹೆಚ್ಚಳ, ಕ್ಷೇತ್ರ ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದರು.

ಮಂಡ್ಯದಲ್ಲಿ ಜಾತಿ ರಾಜಕಾರಣವನ್ನು ಪದೇ ಪದೇ ಹೇಳುತ್ತಿರುವುದು ಸರಿಯಲ್ಲ, ಇರುವುದು ಒಂದೇ ಜಾತಿ ಅದು ಭಾರತೀಯ ಜಾತಿಯಾಗಿದೆ. ಪಕ್ಷದ ವರಿಷ್ಠರು ಏನಾದರೂ ನೀವು ಮಂಡ್ಯದಲ್ಲಿ ಪ್ರಚಾರಕ್ಕೆ ಹೋಗಿ ಎಂದರೆ ತಾನು ಹೋಗಲು ಸಿದ್ಧನಿದ್ದೇನೆ. ತನಗೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಹೋಗಿ ಪ್ರಚಾರ ಮಾಡಿ ಎಂದು ಆದೇಶ ಇರುವುದರಿಂದ ಇಲ್ಲಿಗೆ ಬಂದಿದ್ದೇನೆಂದರು.

ಕರಾವಳಿ ಭಾಗದಿಂದ ಬಂದಂತಹ ವ್ಯಕ್ತಿಯನ್ನು ಆಯ್ಕೆ ಮಾಡಿ ಕಳುಹಿಸಿದ್ದೀರಾ, ಈ ಭಾಗದಲ್ಲಿ ಯೋಗ್ಯ ಅಭ್ಯರ್ಥಿ ಇರಲಿಲ್ಲವೇ, ಈ ಲೋಕಸಭಾ ಚುನಾವಣೆಯಲ್ಲಿ ಬಿ.ಎನ್‌.ಬಚ್ಚೇಗೌಡ ಸ್ಥಳೀಯ ಅಭ್ಯರ್ಥಿಯಾಗಿದ್ದು, ನಿಮ್ಮ ಕೈಗೆ ಸಿಗುವ ವ್ಯಕ್ತಿಯಾಗಿದ್ದಾರೆ. ಬೇರೆಯವರನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ ಬರಬಾರದು ಎಂದರು.

ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಶರತ್‌ ಬಚ್ಚೇಗೌಡ, ಚಿಕ್ಕಬಳ್ಳಾಪುರದಲ್ಲಿ ಮೊಯ್ಲಿ ಅವರಿಗೆ 2 ಬಾರಿ ಆಯ್ಕೆ ಮಾಡಿ ಕಳುಹಿಸಿದರೂ 1 ತೊಟ್ಟು ನೀರು ಬಂದಿಲ್ಲ. ಎತ್ತಿನಹೊಳೆ ನೀರನ್ನು ತರುತ್ತೇವೆ ಎಂದು ಕೇವಲ ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ. ಈ ಬಾರಿ ಬಚ್ಚೇಗೌಡರಿಗೆ ಮತ ನೀಡಿ ಗೆಲ್ಲಿಸಿದರೆ ಜನತೆ ಸಂಕಷ್ಟ ದೂರವಾಗಲಿದೆ ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಚ್‌.ಎಂ.ರವಿಕುಮಾರ್‌, ಬಿ.ಎನ್‌.ಬಚ್ಚೇಗೌಡ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ವಿಶ್ವನಾಥಪುರ ಮತ್ತು ಕೊಯಿರಾ ಗ್ರಾಮಗಳಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕಟ್ಟಡ ನಿರ್ಮಾಣವಾಗುವಂತೆ ಮಾಡಿದರು. ಮಿನಿವಿಧಾನಸೌಧ ಉದ್ಘಾಟನೆ ಆಗುವಂತೆ ಮಾಡಿದರು.

ದೇಶಕ್ಕೆ ಮೋದಿ ಕ್ಷೇತ್ರಕ್ಕೆ ಬಿ.ಎನ್‌.ಬಚ್ಚೇಗೌಡರನ್ನು ಬೆಂಬಲಿಸಬೇಕೆಂದರು. ಜಿಲ್ಲಾಧ್ಯಕ್ಷ ರಾಜಣ್ಣ, ವೀರಪ್ಪಮೊಯಲ್ಲಿ ಯಾವುದೇ ರೀತಿಯಲ್ಲಿ ಜನಪರ ಕೆಲಸ ಮಾಡಿಲ್ಲ. ನಮ್ಮ ಸ್ವಾಭಿಮಾನ ಉಳಿಸಿಕೊಳ್ಳಬೇಕಾದರೆ ಬಿ.ಎನ್‌.ಬಚ್ಚೇಗೌಡರನ್ನು ಈ ಭಾಗದ ಸಂಸದರನ್ನಾಗಿಸಬೇಕೆಂದರು.

ಇದೇ ವೇಳೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಪ್ರಭಾರಿ ಸಚ್ಚಿದಾನಂದಮೂರ್ತಿ, ಕೃಷಿಕ ಸಮಾಜದ ನಿರ್ದೇಶಕ ಎಚ್‌.ಎಂ.ರವಿಕುಮಾರ್‌, ಜಿಲ್ಲಾ ಕಾರ್ಯದರ್ಶಿ ಕೊಯಿರಾ ರಮೇಶ್‌ಬಾಬು, ತಾಲೂಕು ಬಿಜೆಪಿ ಅಧ್ಯಕ್ಷ ಸಿ.ನಾಗರಾಜ್‌ ಗೌಡ, ಉಪಾಧ್ಯಕ್ಷ ಕೆ.ಸಿ.ಮುನಿರಾಜು,

ಪ್ರಧಾನ ಕಾರ್ಯದರ್ಶಿ ಸುನೀಲ್‌, ಆವತಿ ಶಕ್ತಿ ಕೇಂದ್ರದ ಅಧ್ಯಕ್ಷ ರಮೇಶ್‌, ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ ಗೌಡ, ಮುಖಂಡ ಗೋಪಾಲ್‌ ಗೌಡ, ಹೈಕೋರ್ಟ್‌ ವಕೀಲ ದ್ಯಾವರಹಳ್ಳಿ ಡಿ.ಸಿ.ನಾರಾಯಣಸ್ವಾಮಿ, ವೆಂಕಟೇಗೌಡ, ಹರ್ಷವರ್ಧನ್‌, ರವಿಚಂದ್ರ, ಹಾಗೂ ಹೊಬಳಿಯ ಬಿಜೆಪಿ ವಿವಿಧ ಘಟಕದ ಪದಾಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next