ಕೋಲಾರ: ಸೊಸೈಟಿಗಳ ಗಣಕೀಕರಣ ಹಾಗೂ ಆನ್‌ಲೈನ್ ವಹಿವಾಟಿನಿಂದಾಗಿ ಸಹಕಾರ ಸಂಸ್ಥೆ ಮೇಲೆ ಗ್ರಾಹಕರಲ್ಲಿನ ಅಪನಂಬಿಕೆ ದೂರವಾಗಿ ವಿಶ್ವಾಸ ವೃದ್ಧಿಸಲಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ನಗರದ ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣಕ್ಕೆ ಸಂಬಂಧಿಸಿದಂತೆ ಪ್ಯಾಕ್ಸ್‌ಗಳ ಸಿಇಒಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ಆರ್ಥಿಕ ವರ್ಷದ ಆರಂಭವಾದ ಏ.1ರಿಂದ 65 ಸೊಸೈಟಿಗಳು ಆನ್‌ಲೈನ್ ವ್ಯಾಪ್ತಿಗೆ ಒಳಪಡಲಿದ್ದು, ಅಂತಿಮವಾಗಿ ಸೆಪ್ಟೆಂಬರ್ ಅಂತ್ಯಕ್ಕೆ ಎರಡೂ ಜಿಲ್ಲೆಯ ಎಲ್ಲಾ ಸೊಸೈಟಿಗಳನ್ನು ಕಂಪ್ಯೂಟರೀಕರಣ ಮಾಡಲಾಗುವುದು ಎಂದು ಹೇಳಿದರು.
ಮೋಸಗಾರರಲ್ಲ: ಹಳ್ಳಿಯಲ್ಲಿ ಜನರ ಜೊತೆಗೆ ಸಂಪರ್ಕ ಇರಿಸಿಕೊಂಡರೆ ಸಾಲ ವಸೂಲಾತಿ ಕಷ್ಟವಲ್ಲ. ರೈತರು, ಮಹಿಳಾ ಸಂಘದವರು ಮತ್ತು ಬಡವರು ಮೋಸಗಾರರಲ್ಲ, ಆಕಸ್ಮಿಕವಾಗಿ ಅವರ ಬಾಳು ಬೀದಿಗೆ ಬಂದಾಗ ಸ್ಪಂದಿಸಿ ಧೈರ್ಯ ತುಂಬುವ ಕೆಲಸವನ್ನು ಸೊಸೈಟಿ ಸಿಬ್ಬಂದಿ ಮಾಡಬೇಕಿದೆ ಎಂದು ಹೇಳಿದರು. ಸೊಸೈಟಿ ವ್ಯಾಪ್ತಿಯ ಎಲ್ಲಾ ಹಾಲಿನ ಡೇರಿಗಳ ಉಳಿತಾಯ ಖಾತೆಯನ್ನು ಸಹಕಾರ ಸಂಸ್ಥೆಗಳಲ್ಲಿ ತೆರೆಸುವ ಜೊತೆಗೆ ಠೇವಣಿಯನ್ನೂ ಪಡೆದುಕೊಳ್ಳಬೇಕು. ಮಾರ್ಚ್ 1ರಂದು ನಡೆಯುವ ಸಭೆಯಲ್ಲಿ ಈ ಸಂಬಂಧ ಗುರಿ ಸಾಧನೆ ವರದಿಯನ್ನು ಮಂಡಿಸಬೇಕು ಎಂದು ಸ್ಪಷ್ಟಪಡಿಸಿದರು.
ಮೈಕ್ರೋ ಎಟಿಎಂಗೆ ಏ.1ರಿಂದಲೇ ಚಾಲನೆ: ಏಪ್ರಿಲ್ 1ರಿಂದ ಸೊಸೈಟಿಗಳಲ್ಲಿ ಮೈಕ್ರೋ ಎಟಿಎಂ ವ್ಯವಸ್ಥೆ ಚಾಲನೆಗೆ ಬರುತ್ತಿದ್ದು, ಎಸ್‌ಎಂಎಸ್ ಅಲರ್ಟ್ ಸೇವೆ ಸಹಾ ಲಭ್ಯವಾಗಲಿದೆ. ಸೊಸೈಟಿ ಆನ್‌ಲೈನ್ ವ್ಯವಸ್ಥೆಯನ್ನು ರಾಜ್ಯ ಮಟ್ಟದಲ್ಲಿ ಮಾದರಿಯಾಗಿ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಗಣಕೀಕರಣ ವ್ಯವಸ್ಥೆ ನಂಬಿಕೆಯ ಪ್ರತೀಕ: ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಎಂ.ರವಿ ಮಾತನಾಡಿ, ಸೊಸೈಟಿ ಆನ್‌ಲೈನ್ ವ್ಯವಸ್ಥೆಯಿಂದಾಗಿ ಡಿಸಿಸಿ ಬ್ಯಾಂಕ್ ಸೇವೆ ಹಳ್ಳಿ ಮಟ್ಟದಲ್ಲಿ ಲಭ್ಯವಾಗಲಿದ್ದು ಇದರಿಂದಾಗಿ ಗ್ರಾಹಕರಲ್ಲಿ ನಂಬಿಕೆ, ವಿಶ್ವಾಸ ವೃದ್ಧಿಯಾಗಲಿದೆ ಎಂದರು.
ಸಭೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾರಾಯಣರೆಡ್ಡಿ, ಎಂ.ಎಲ್.ಅನಿಲ್‌ಕುಮಾರ್, ಎಜಿಎಂ ಶಿವಕುಮಾರ್, ಕ್ಯಾಲನೂರು ಸೊಸೈಟಿ ಅಧ್ಯಕ್ಷ ರಾಮಾಂಜಿನಪ್ಪ, ಸುಗಟೂರು ಸೊಸೈಟಿ ಅಧ್ಯಕ್ಷ ಟಿ.ವಿ.ತಿಮ್ಮರಾಯಪ್ಪ, ಮದ್ದೇರಿ ಶ್ರೀನಿವಾಸಗೌಡ, ಉತ್ತನೂರು ಮಂಜುನಾಥ, ದೊಡ್ಡಶಿವಾರದ ಗೋವರ್ಧನರೆಡ್ಡಿ, ವಿ.ಸಾಫ್ಟ್ ರಾಜ್ಯ ವ್ಯವಸ್ಥಾಪಕ(ಮಾರುಕಟ್ಟೆ) ಸಿರೀಶ್ ಹಂಪಿಹೊಳಿ, ತಂತ್ರಜ್ಞರಾದ ಗಜಾನನ ಜೋಷಿ, ಪ್ರಸಾದ್ ಇದ್ದರು.