Advertisement

ಮತದಾರರ ಗೌಪ್ಯತೆ: ಪಾರದರ್ಶಕವಾಗಿ ತನಿಖೆ ನಡೆಯಲಿ

10:08 PM Nov 17, 2022 | Team Udayavani |

ಬೆಂಗಳೂರಿನ 28 ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ದೊಡ್ಡ ಗದ್ದಲವೇ ಏರ್ಪಟ್ಟಿದ್ದು, ರಾಜ್ಯ ಸರಕಾರ ಭಾರೀ ಚುನಾವಣ ಅಕ್ರಮ ಮಾಡಿದೆ ಎಂದು ಕಾಂಗ್ರೆಸ್‌ ನಾಯಕರು ಆರೋಪಿಸುತ್ತಿದ್ದಾರೆ. ಗುರುವಾರ ಬೆಳಗ್ಗೆಯಿಂದಲೂ ರಾಜ್ಯದಲ್ಲಿ ಇದೇ ಸುದ್ದಿ ದೊಡ್ಡ ಸದ್ದು ಮಾಡಿದ್ದು, ಚುನಾವಣ ಅಕ್ರಮ ಮಾಡುವ ಸಲುವಾಗಿಯೇ ಮತದಾರರ ಗೌಪ್ಯತೆ ಹರಣ ಮಾಡಲಾಗಿದೆ ಎಂದು ಕಾಂಗ್ರೆಸ್‌ ನೇರವಾಗಿಯೇ ಆರೋಪಿಸುತ್ತಿದೆ.

Advertisement

ಬೆಂಗಳೂರು ನಗರ ಜಿಲ್ಲೆಯ ಉಸ್ತುವಾರಿ ಹೊತ್ತಿರುವ ಮುಖ್ಯಮಂತ್ರಿ­ಗಳ ಮೇಲೆಯೇ ಕಾಂಗ್ರೆಸ್‌ ನಾಯಕರು ಆರೋಪ ಮಾಡುತ್ತಿದ್ದು, ಪ್ರಕರಣ ಗಂಭೀರತೆ ಪಡೆದುಕೊಂಡಿದೆ. ಅಲ್ಲದೆ ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಸಿಎಂ ವಿರುದ್ಧವೇ ಪ್ರಕರಣ ದಾಖಲಿಸಿ, ಬಂಧಿಸಬೇಕು ಎಂಬುದು ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸಹಿತ ಇತರ ನಾಯಕರ ಆಗ್ರಹವೂ ಆಗಿದೆ. ಅಲ್ಲದೆ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದೂ ಆಗ್ರಹಿಸಲಾಗಿದೆ. ಹಾಗೆಯೇ ಬೆಂಗಳೂರಿನ ಸಚಿವರೊಬ್ಬರ ಆಪ್ತರೂ ಇದರಲ್ಲಿ ಭಾಗಿಯಾಗಿ­ದ್ದಾರೆ ಎಂಬುದು ಕಾಂಗ್ರೆಸ್‌ನ ಆರೋಪವಾಗಿದೆ.

ಸಿಎಂ ಬಸವರಾಜ ಬೊಮ್ಮಾಯಿ ಅವರೂ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇದು ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಹಿಂದಿನ ಸರಕಾರಗಳೂ ಖಾಸಗಿಯವರಿಂದ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿಸಿವೆ. ಈ ಬಾರಿ ಏನಾದರೂ ಖಾಸಗಿ ಸಂಸ್ಥೆಯ ಕಡೆಯಿಂದ ತಪ್ಪಾಗಿದ್ದರೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಹಾಗೆಯೇ ಕಾಂಗ್ರೆಸ್‌ನವರ ಆರೋಪದ ಬೆನ್ನಲ್ಲೇ ಬಿಬಿಎಂಪಿಯು ಖಾಸಗಿ ಸಂಸ್ಥೆ ಚಿಲುಮೆಗೆ ನೀಡಲಾಗಿದ್ದ ಪರವಾನಿಗೆಯನ್ನು ರದ್ದು ಮಾಡಿದೆ. ಷರತ್ತುಗಳನ್ನು ಉಲ್ಲಂ ಸಿರುವುದರಿಂದ ಈ ಕ್ರಮ ತೆಗೆದು­ಕೊಳ್ಳಲಾಗಿದೆ ಎಂದು ಬಿಬಿಎಂಪಿ ಸ್ಪಷ್ಟನೆ ನೀಡಿದೆ. ಆದರೂ ದಿಢೀರ್‌ ಆಗಿ ರದ್ದು ಮಾಡಿದ್ದು ಏಕೆ ಎಂಬ ಪ್ರಶ್ನೆ ವಿಪಕ್ಷದ ಕಡೆಯಿಂದಲೂ ಕೇಳಿಬಂದಿದೆ.  ಈ ಎಲ್ಲ ಸಂಗತಿಗಳನ್ನು ಗಮನಿಸಿದರೆ ಪ್ರಕರಣ ಹೆಚ್ಚು ಗಂಭೀರವಾಗಿದೆ ಎಂದೆನಿಸುತ್ತಿದೆ. ಅಲ್ಲದೇ ಯಾವುದೇ ಸರಕಾರವಿರಲಿ, ಮತದಾರರ ಗೌಪ್ಯತೆಗೆ ಭಂಗ ಬರಬಾರದು. ನಮ್ಮ ದೇಶದಲ್ಲಿ ಮತದಾನ ಎಂಬುದು ಅತ್ಯಂತ ಪವಿತ್ರವಾದ ಕರ್ತವ್ಯವಾಗಿದ್ದು, ಇಲ್ಲಿ ಗೌಪ್ಯತೆಗೆ ಹೆಚ್ಚಿನ ಮನ್ನಣೆ ನೀಡಲಾಗಿದೆ. ಆದರೆ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ಗೌಪ್ಯತೆಗೆ ಭಂಗ ಬಂದಿದೆ ಎಂಬ ಆರೋಪ ಬಂದಿದೆ ಎಂದಾದರೆ ಈ ಬಗ್ಗೆ ತನಿಖೆ ನಡೆಸಲೇಬೇಕಾಗುತ್ತದೆ.

ಸತ್ಯ ಹೊರಬರಬೇಕು ಎಂಬ ದೃಷ್ಟಿಯಿಂದ ಕೇಂದ್ರ ಚುನಾವಣ ಆಯೋಗವೂ ಈ ಬಗ್ಗೆ ತನಿಖೆ ನಡೆಸುವುದು ಸೂಕ್ತವಾಗುತ್ತದೆ. ರಾಜ್ಯ ಸರಕಾರದ ವಿರುದ್ಧವೇ ಆರೋಪ ಮಾಡಿರುವುದರಿಂದ ಇಲ್ಲಿನ ಪೊಲೀ­ಸರು ತನಿಖೆ ನಡೆಸಿ, ಯಾವುದೇ ಫ‌ಲಿತಾಂಶ ಬಂದರೂ ಆಗ ರಾಜಕೀಯ ಗದ್ದಲಕ್ಕೆ ಕಾರಣವಾಗುವುದು ಸಹಜ. ಹೀಗಾಗಿ ಸ್ವತಂತ್ರವಾಗಿಯೇ ತನಿಖೆ ಮಾಡಿಸಿ ಸತ್ಯವನ್ನು ಹೊರತರಬೇಕಾಗಿದೆ. ಈ ವಿಚಾರದಲ್ಲಿ ಯಾರೂ ಮೂಗು ತೂರಿಸದೆ ಚುನಾವಣ ಆಯೋಗಕ್ಕೆ ತನಿಖೆಯ ಹೊಣೆ ಹೊರಿಸಬೇಕು. ಅವರು ಯಾರಿಂದ ಬೇಕಾದರೂ ತನಿಖೆ ಮಾಡಿಸಿ ನಿಜ ಸಂಗತಿ ಬಯಲಿಗೆಳೆಯಲಿ. ಈ ಮೂಲಕ ಚುನಾವಣ ವ್ಯವಸ್ಥೆ ಮೇಲಿನ ಜನರ ನಂಬಿಕೆ ಮತ್ತಷ್ಟು ಗಟ್ಟಿಯಾಗುವಂತೆ ಮಾಡಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next