Advertisement

ಭಾಷಾಂತರ ಅವಾಂಂತರ

07:25 PM Sep 14, 2019 | mahesh |

ತಿರುಗಾಟ ಜಗತ್ತಿನಾದ್ಯಂತ ಹೆಚ್ಚುತ್ತಿದೆ. ಸಹಜವಾಗಿ ನಮಗಾಗುವ ವೈವಿಧ್ಯಮಯ ಅನುಭವಗಳೂ ವಿಸ್ತೃತವಾಗುತ್ತವೆ. ಬಹುಶಃ “ದೇಶ ಸುತ್ತು ಕೋಶ ಓದು’ ಎಂಬ ಗಾದೆ ನಮಗೆ ಅರ್ಥ ಮಾಡಿಸುವ ಸತ್ಯ ಇದೇ ಎನಿಸುತ್ತದೆ. ತಿರುಗಾಟ ನಮಗೆ ನೀಡುವ ಹಲವು ಅನುಭವಗಳಲ್ಲಿ ಭಾಷೆಗೆ ಸಂಬಂಧಿಸಿರುವುದು ಬಹುಪಾಲು.

Advertisement

ಮನೋವೈದ್ಯಕೀಯ ತರಬೇತಿಯ ಅಂಗವಾಗಿ ತಮಿಳುನಾಡಿನ ಮಧುರೈನಲ್ಲಿದ್ದೆ. ತಮಿಳರ ಭಾಷಾಭಿಮಾನ ಎಷ್ಟೆಂದರೆ ತಮಿಳು ಭಾಷೆ ಮಾತನಾಡುವುದಷ್ಟೇ ಅಲ್ಲ, ಬರೆಯಲೂ ಕಲಿಯದೆ ನಾನು ವೈದ್ಯಕೀಯ ತರಬೇತಿಯ ಭಾಗವನ್ನು ಮುಗಿಸಲೇ ಸಾಧ್ಯವಿರಲಿಲ್ಲ ! ರೋಗಿಗಳಿಗೆ ಔಷಧಿಯನ್ನು ಬರೆಯಬೇಕಾದರೆ ಇಂಗ್ಲಿಷ್‌ನಲ್ಲಿ ಮಾತ್ರೆಗಳನ್ನು ನಾವು ಬರೆಯುವಂತಿರಲಿಲ್ಲ! ಬದಲು ಪ್ಯಾರಾಸಿಟಮಲ್‌ ಎಂದು ಕನ್ನಡದಲ್ಲಿ ಬರೆದಂತೆ ತಮಿಳಿನಲ್ಲಿ ಬರೆಯಬೇಕಾಗಿತ್ತು. ತಮಿಳು ಭಾಷೆ ಬರುವ “ಪರಿಣತ’ರು ಕೆಲಸ ಬೇಗ ಬರಲೆಂದೋ, ಅಥವಾ ನಮ್ಮಂಥ “ಅನಕ್ಷರಸ್ಥ’ರಿಗೆ ಸಹಾಯವಾಗಲೆಂದೋ ಪ್ರತಿ ವಿಭಾಗದಲ್ಲಿ ಸಾಮಾನ್ಯವಾಗಿ ಬರೆಯುವ ಔಷಧಿಗಳ ಒಂದು “ಸೀಲ್‌’ ಮಾಡಿಟ್ಟಿರುತ್ತಿದ್ದರು. ಅದನ್ನು ನೋಡಿ ನೋಡಿಯೇ ನಮಗೆ ತಮಿಳು ಅಕ್ಷರಗಳು ಪರಿಚಯವಾಗಿಬಿಡುತ್ತಿದ್ದವು. ಅಂತೂ ಇದ್ದ ಎರಡು ತಿಂಗಳುಗಳಲ್ಲಿ ಹೇಗೋ ತಮಿಳು ಮಾತನಾಡಲು-ಬರೆಯಲು ಕಲಿತಿದ್ದೆ.

ತಮಿಳಿನಲ್ಲಿ ನಾಕ್ಕು ನೀಟ್ಟು ಎಂದರೆ “ನಾಲಿಗೆ ಚಾಚು’ ಎಂದರ್ಥ. ರೋಗಿಗೆ ರಕ್ತಹೀನತೆ ಇದೆಯೇ ಎಂದು ಪರೀಕ್ಷಿಸಲು ನಾಲಿಗೆ ಚಾಚುವಂತೆ ಕೇಳುತ್ತಿದ್ದೆವು. ಹೊಸ ಭಾಷೆಯನ್ನು, ನಾನು ಈಗಾಗಲೇ ಕಲಿತಿರುವ ಭಾಷೆಯೊಂದಿಗೆ ಹೋಲಿಸಿಯೇ ಕಲಿಯುವ ನನಗೆ ಇಂಥ ಸಂದರ್ಭಗಳಲ್ಲಿ ಪೇಚಾಟ. ನನ್ನ ಬಾಯಿ ಅಭ್ಯಾಸ ಬಲದಿಂದ ನಾಕ್ಕು ನೀಟ್ಟು ಎನ್ನುತ್ತಿತ್ತು. ಆದರೆ, ನಾಕ್ಕು ಮಾತ್ರ ಬುದ್ಧಿಗೆ ನೆನಪಿಸುತ್ತಿದ್ದದ್ದು ಹಿಂದಿಯ ನಾಕ್‌ (ಮೂಗು)ನ್ನೇ. ರೋಗಿಗಳನ್ನು ನೋಡಿ ನೋಡಿ ಸುಸ್ತಾಗಿರುವಾಗಲಂತೂ, ನಾಕ್ಕುನೀಟ್ಟು ಎಂದರೆ ನಾಲಗೆ ಚಾಚುತ್ತಾರಲ್ಲ, ಎನಿಸಿ ನನ್ನ ಕಣ್ಣು ಅವರ ಮೂಗನ್ನು ನೋಡುತ್ತಿತ್ತು! ಇನ್ನೊಮ್ಮೆ ನನ್ನ ತಮಿಳು ಪರಿಣತಿಯನ್ನು ಪ್ರಯೋಗಿಸಲು ಹೋಗಿ ವಂದಿಟ್ಟುಂಗ್ಲಾ (ಬಂದಿದ್ದಾರ) ಬದಲು ಎರಂದಿಟ್ಟಾಂಗ್ಲಾ (ಸತ್ತು ಹೋಗಿದ್ದಾರ) ಎಂದು ಕೇಳಿಬಿಟ್ಟಿದ್ದೆ!

ನಮ್ಮ “ಕನ್ನಡ’ವನ್ನು ಎಲ್ಲೆಡೆಯೂ “ನಡೆಸಬಹುದು’ ಮತ್ತು ವಿಶ್ವಭಾಷೆಯಾದ ಕೈಸನ್ನೆ-ಬಾಯಿ ಸನ್ನೆಗಳೇ ನಾವು ಬದುಕಲು ಸಾಧ್ಯವಾಗಬಹುದು ಎಂಬ ಅನುಭವವಾದದ್ದು ಬೀಜಿಂಗ್‌ಗೆ ಹೋದಾಗ. ಬಹು ಹೆಮ್ಮೆಯಿಂದ ನಾವು ಕಲಿಯುವ, ಮಾತನಾಡುವ “ಇಂಗ್ಲೀಷ್‌’ನ ನಿರುಪಯುಕ್ತತೆ ಮೊದಲು ಅರಿವಾದದ್ದೂ ಇಲ್ಲಿಯೇ. “ಪರ್ಲ್ ಮಾರ್ಕೆಟ್‌’ ಎಂಬ ಮುತ್ತಿನ ಮಾರುಕಟ್ಟೆಯನ್ನು ನಾವು ಹೊಟೇಲಿನ ಸಿಬ್ಬಂದಿ ವರ್ಗದವರೆಲ್ಲಾ ಬಂದು ಕೇಳಿದರೂ ನಮ್ಮ “ಪರ್ಲ್’ ಅವರಿಗೆ ಅರ್ಥವೇ ಆಗಲಿಲ್ಲ! ಇಂಗ್ಲಿಷ್‌ನಲ್ಲಿ ಬರೆದು ತೋರಿಸಿದರೂ ಗೊತ್ತಾಗದೆ, ಅನಂತರ ಇಂಗ್ಲಿಷ್‌ ಬರುತ್ತಿದ್ದ ಚೀನೀ ಸ್ನೇಹಿತೆಗೆ ಕರೆ ಮಾಡಬೇಕಾಯಿತು. ಬೀಜಿಂಗ್‌ನಲ್ಲಿ ನಾವು ಮಾಡುತ್ತಿದ್ದ ಉಪಾಯ ಚೀನೀ ಅಕ್ಷರಗಳಲ್ಲಿ ವಿಳಾಸ ಬರೆಸಿಕೊಂಡು ಟ್ಯಾಕ್ಸಿಯವನಿಗೆ ಅದನ್ನು ತೋರಿಸುವುದು. ಆತನಿಗೆ ಆ ಸ್ಥಳ ಗೊತ್ತು, ಬರುತ್ತೇನೆ ಎಂದು ತಲೆಯಾಡಿಸಿದರೆ, ಒಳಗೆ ಹತ್ತುವುದು. ಆತನ ಮೇಲೆ ಸಂಪೂರ್ಣ ಭರವಸೆಯಿಟ್ಟು, ನಾವು ಕೇಳಿದ ಜಾಗಕ್ಕೇ ಕರೆದೊಯ್ಯುತ್ತಾನೆ ಎಂದು ನಂಬಿಬಿಡುವುದು. ಪುಣ್ಯಕ್ಕೆ ಅಂಕೆಸಂಖ್ಯೆಗಳನ್ನು ಚೀನಿಯರೂ ನಮಗೆ ಗೊತ್ತಿರುವ ರೀತಿಯಲ್ಲೇ ಬರೆಯುತ್ತಾರೆ. ಏನನ್ನಾದರೂ ಕೊಳ್ಳಲು ಹೋಗುವಾಗ ನಾನು ಬೀಜಿಂಗ್‌ನಲ್ಲಿ ಕನ್ನಡದಲ್ಲೇ ಚೌಕಾಸಿ ಮಾಡುತ್ತಿದ್ದೆ. ಏಕೆಂದರೆ ನಮ್ಮ ಹಾವಭಾವಗಳು ಕನ್ನಡದಲ್ಲಿ ಮಾತನಾಡುವಾಗ ಒದಗಿ ಬರುವಷ್ಟು ಇಂಗ್ಲಿಷ್‌ಗೆ ಬರಲಾರವಷ್ಟೆ. ಹೇಗಿದ್ದರೂ ಅವರಿಗಂತೂ ಕನ್ನಡ- ಇಂಗ್ಲಿಷ್‌ ಎಲ್ಲವೂ ಒಂದೇ!

ವೈದ್ಯಕೀಯ ಸಮ್ಮೇಳನವೊಂದಕ್ಕೆ ಇಂಡೋನೇಷ್ಯಾಕ್ಕೆ ಹೋಗಿದ್ದೆವು. ನಮ್ಮ ದೇಶದಲ್ಲಿ ನಡೆಯುವ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ನಾವು ಹೆಚ್ಚು ಮುತುವರ್ಜಿಯಿಂದ ಎಲ್ಲವನ್ನೂ “ಇಂಗ್ಲಿಷ್‌’ ಭಾಷೆಯಲ್ಲಿಯೇ ಆಯೋಜಿಸುತ್ತೇವಷ್ಟೆ.

Advertisement

ಅದೇ ನಿರೀಕ್ಷೆಯಿಂದ ಹೋದೆವು. ಒಂದು ಗೋಷ್ಠಿ ಬಿಟ್ಟರೆ ಮಿಕ್ಕವೆಲ್ಲವೂ ಇದ್ದದ್ದು ಇಂಡೋನೇಷ್ಯಾದ ಭಾಷೆಯಲ್ಲಿ. ಬೋರ್ಡನ್ನು ಓದಲು ಹೋದರೆ ಅಲ್ಲಿದ್ದದ್ದು ನಮಗೆ ಓದಲು ಬರುವ ಇಂಗ್ಲಿಷ್‌ ಅಕ್ಷರಗಳು! ಇಂಗ್ಲಿಷ್‌ ಲಿಪಿಯಲ್ಲಿ ಬರೆದಿದ್ದು ಮಾತ್ರ ಇಂಡೋನೇಷಿಯಾದ ಭಾಷೆ !

ಜಪಾನ್‌ಗೆ ಹೋದಾಗ ಆದರ ಅನುಭವ ಮತ್ತೂಂದು ರೀತಿಯದು. ಇಲ್ಲಿಯೂ ಅಕ್ಷರಗಳು ಚೀನಾದಂತಹವೇ. ಚೀನೀ ಭಾಷೆಗೂ ಜಪಾನೀ ಭಾಷೆಗೂ ಲಿಪಿ ಒಂದೇ. ಒಂದು ಉದ್ದ ವಾಕ್ಯಕ್ಕೆ ಚಿತ್ರದಂತಹ ಒಂದೇ ಅಕ್ಷರ. ಅಲ್ಲಿದ್ದ ಭಾರತೀಯ ಸ್ನೇಹಿತರು ಜಪಾನೀ ಭಾಷೆ ಕಲಿತಿದ್ದರು. ಅವರ ಪ್ರಕಾರ ಒಂದೊಂದು ವಾಕ್ಯವನ್ನೂ ಮನಸ್ಸಿನಲ್ಲಿ ಚಿತ್ರದ ರೀತಿಯಲ್ಲಿ ಊಹಿಸಿಕೊಂಡು ಬರೆಯಲಾರಂಭಿಸಿದರೆ ಜಪಾನೀ ಭಾಷೆಯಲ್ಲಿ ಬರೆಯುವುದು ಸುಲಭವಂತೆ. ಇಂಗ್ಲಿಷ್‌ನಲ್ಲಿ ಪ್ರಕಟವಾಗುವ ವೈದ್ಯಕೀಯ ಜರ್ನಲ್‌ಗ‌ಳನ್ನು ಜಪಾನೀ ಭಾಷೆಗೆ ತರ್ಜುಮೆ ಮಾಡಲೆಂದು ಇಲ್ಲಿ ಪ್ರತ್ಯೇಕ ವಿಭಾಗಗಳೇ ಕಾಲೇಜುಗಳಲ್ಲಿರುತ್ತವೆ. ಬೇಗ ಬೇಗ ಇಂಗ್ಲಿಷ್‌ನಲ್ಲಿ ಮಾತನಾಡಿದರೆ ಅರ್ಥವಾಗದೆ ಕಣ್ಣು ಬಿಟ್ಟು ಬಿಡುವವರೇ ಹೆಚ್ಚು. ಈಜಿಪ್ಟ್ನಲ್ಲಂತೂ ಒಮ್ಮೆ ಸ್ನೇಹಿತರೊಬ್ಬರಿಗೆ ಶೌಚಾಲಯಕ್ಕೆ ಆತುರವಾಯಿತು. “ಟಾಯ್ಲೆಟ್‌’ “ರೆಸ್ಟ್‌ರೂಮ್‌’ ಎಂಬ ಪದಗಳ್ಯಾವುದೂ ಹೋದೆಡೆ ಯಾರಿಗೂ ಗೊತ್ತಾಗಲಿಲ್ಲ. ಕಿರಿಬೆರಳನ್ನು ಎತ್ತಿ ಮಕ್ಕಳಂತೆ “ಒಂದಕ್ಕೆ’ ಎಂದು ತೋರಿಸಿದ್ದೂ ಆಯಿತು. ಏನೂ ಪ್ರಯೋಜನವಾಗಲಿಲ್ಲ. ಕೊನೆಗೆ ಅವರು ಪ್ಯಾಂಟ್‌ ಜಿಪ್ಪಿನ ಹತ್ತಿರ ಕೈತೋರಿಸಿ ಮೂತ್ರ ಮಾಡಿದಂತೆ ಅಭಿನಯ ಮಾಡಿದ ಮೇಲೆ ಆ ವೇಟರ್‌ “ಓ’ ಎಂದು ಹಿಂದಿದ್ದ ಶೌಚಾಲಯಕ್ಕೆ ಕರೆದೊಯ್ದ.

ಹೀಗೆ ಇತರೆಡೆಗಳಲ್ಲಿ ಅಭಿನಯ ಮಾಡಿ ಅಭ್ಯಾಸವಾಗಿದ್ದ ನಮಗೆ ಬ್ರೆಜಿಲ್‌ನಲ್ಲಿಯೂ ಅವರಿಗೆ ಇಂಗ್ಲಿಷ್‌ ಬರುವುದಿಲ್ಲ ಎಂದುಕೊಂಡುಬಿಟ್ಟೆವು. “ಸಕ್ಕರೆ ಕೊಡಿ’ ಎನ್ನುವುದಕ್ಕೆ ನಾವು ಅಭಿನಯ ಮಾಡಿ ತೋರಿಸದ ರೀತಿಯಿಲ್ಲ. ಅಲ್ಲಿನ ವೇಟರ್‌ ಒಂದು ಟ್ರೇಯಲ್ಲಿ ಅಡಿಗೆ ಮನೆಯ ವಸ್ತುಗಳನ್ನೆಲ್ಲ ಇಟ್ಟುಕೊಂಡು, ಜೊತೆಗೊಂದು ಪೆನ್ನು-ಪೇಪರ್‌ ನಮ್ಮ ಮುಂದೆ ಹಿಡಿದೇ ಬಿಟ್ಟಳು. ಅದರಲ್ಲಿದ್ದ ಸಕ್ಕರೆ ತೋರಿಸಿದ್ದೇ “ಓ ಷುಗರ್‌!’ ಎಂದು ಉದ್ಗರಿಸಬೇಕೆ?

ಪರವೂರಿನಲ್ಲಿ ಬೇರೆ ಭಾಷಿಗರ ನಡುವೆ ವ್ಯವಹರಿಸಬೇಕಾದಾಗ ತಮ್ಮ ಭಾಷೆಯ ಮೇಲಿನ ಅಭಿಮಾನವನ್ನು ಕಾಪಿಟ್ಟುಕೊಂಡೇ, ಇತರ ಭಾಷೆಗಳಲ್ಲಿ ಎಗ್ಗಿಲ್ಲದೆ, ತಪ್ಪು ಮಾಡಿದರೆ ನಗಬಹುದೆಂಬ ಚಿಂತೆಯಿಲ್ಲದೆ, ಪ್ರಯತ್ನಿಸುವವರು ಮಾತ್ರ “ಮಲೆಯಾಳಿ’ ವೀರರೇ! ನರ್ಸರಿಯಲ್ಲಿ “ಎಬಿಸಿ’ ಬದಲು “ಓಬಿಸಿ’ ಕಲಿಯುವರೇನೋ ಎಂಬಷ್ಟು ಮಟ್ಟಿಗೆ, “ಲ’ ಉಚ್ಚಾರ ನಾಲಿಗೆಯಲ್ಲಿ ಬರದೇನೋ ಎಂದೆನಿಸುವಂತೆ ಉಚ್ಚಾರವಾದರೂ, ಮತ್ತೂಬ್ಬರ ಭಾಷೆ ಕಲಿಯುವ, ಅದರಲ್ಲೇ ಮಾತನಾಡುವ ಅವರ ಉತ್ಸಾಹ ಮೆಚ್ಚತಕ್ಕದ್ದೇ. ಆದರೆ, ಇನ್ನೊಬ್ಬ ಮಲೆಯಾಳಿ ಸಿಕ್ಕರೆ ಮಾತ್ರ ಅವರು ಮಾತನಾಡುವುದು ಮಲಯಾಳದ‌ಲ್ಲೇ. ನಮ್ಮಂತೆ ಕನ್ನಡಿಗರು ಸಿಕ್ಕರೂ ಕನ್ನಡದಲ್ಲಿ ಮಾತನಾಡಲು ಹಿಂದೆ-ಮುಂದೆ ನೋಡುವವರಲ್ಲ.

ಕೊಲ್ಕತಾದ ಬಂಗಾಳಿಗಳ ಮಧ್ಯೆ ಬೇರೆಯದೇ ಅನುಭವ. ಬಂಗಾಲಿಗಳು ಮಾತನಾಡುವ ಹಿಂದಿಯನ್ನೂ ನಮಗೆ ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ಬೇಕೇ ಬೇಕು. “ಶ’ ಕ್ಕೆ “ಸ’, “ಬಡಾಪಾನಿ’ ಎಂಬ ಶಬ್ದವನ್ನು “ಬೊರಾಪಾನೀ’ (“ಬ’ವನ್ನು “ಬೊ’ ಮಾಡಿ “ಡಾ’ವನ್ನು “ರಾ’ ಮಾಡಿದ್ದಾರೆಂದು ಊಹಿಸಲು ಸಮಯ ಬೇಕಷ್ಟೆ!). “ವೀಣಾಪಾಣಿ’ ಯನ್ನು “ಬಿನಾಪಾನಿ’ ಎಂದು, ಬಾಯಿಯಲ್ಲಿ “ರಸಗುಲ್ಲಾ’ ತುಂಬಿಕೊಂಡೇ ಹಿಂದಿ ಮಾತನಾಡಿದರೆ ಮಾತ್ರ “ಬಂಗಾಲಿ’ಗಳು ಮಾತನಾಡುವ ರೀತಿಯನ್ನು ಅನುಸರಿಸಬಹುದೇನೋ ಎಂಬ ಅನುಮಾನ ಮೂಡಿತ್ತು.

ಇವೆಲ್ಲವನ್ನೂ ಮೀರಿಸುವ ವಿಶಿಷ್ಟ ಅನುಭವ “ಫ್ರೆಂಚ್‌’ ನಾಡಿನಲ್ಲಿ ಆದದ್ದು. ಪ್ಯಾರಿಸ್‌ಗೆ ಹೋದಾಗ ನನಗೆ ಬರುತ್ತಿದ್ದದ್ದು ಮರ್ಸಿ – ಥ್ಯಾಂಕ್ಯೂ, ಬಾನ್‌ ವಾಯೇಜ್‌, ಬಾನ್‌ ಎಪ್ಪಿಟೈಟ್‌ ಎಂಬ ಕೆಲವು ಸುಪ್ರಸಿದ್ಧ ಪದಗಳು. ಇಂಗ್ಲಿಷ್‌ ಲಿಪಿಯಲ್ಲೇ ಬರೆಯಲ್ಪಡುವ ಫ್ರೆಂಚ್‌ ಭಾಷೆಯನ್ನು ಓದಿ, ಹಾಗೇ ಹೇಳಲು ಹೋದರೆ, ನನಗೆ ಸಿಕ್ಕಿದ್ದು ಗೊಂದಲಮಯ ದೃಷ್ಟಿ. ಫ್ರೆಂಚ್‌ ಭಾಷೆಯಲ್ಲಿ ಬರೆಯುವುದಕ್ಕೂ, ಮಾತನಾಡುವುದಕ್ಕೂ ಸಂಬಂಧವೇ ಇಲ್ಲವೇನೋ ಎನ್ನಿಸುವ ಮಟ್ಟಿಗೆ ಫ‌ಜೀತಿಯಾಗಿತ್ತು. ರೈಲಿನ ಸ್ಟೇಷನ್‌ಗಳ ಹೆಸರು “ಚ್ಯಾಟಲೆಟ್‌’ ಎಂದು ನಾವು ಓದಿದರೆ ಅದನ್ನು ಇಂಗ್ಲಿಷ್‌ನಲ್ಲಿ ಹಾಗೆ ಬರೆದು, ಅವರು ಉಚ್ಚರಿಸುವುದು “ಶಟಲೆ’ ಎಂದು. “ಬಾನ್‌ಜೋರ್‌’ ಎಂದು ನಾವು ಶುಭಾಶಯ ಹೇಳಿದರೆ ಅದು ನಿಜವಾಗಿ ಉಚ್ಚರಿಸಲ್ಪಡುವುದು “ಬಾನ್ಯೂ’ ಎಂದೇ !

ಇಷ್ಟೆಲ್ಲಾ ಅನುಭವಗಳಿಂದ ನಾನು ಕಲಿತಿರುವುದೇನು? ಮತ್ತೂಂದು ಭಾಷೆಯನ್ನು ಕಲಿಯುವುದು ಸುಲಭವಲ್ಲ. “ಗೂಗ್ಲಕ್ಕ’ ಇಂದು ನಮ್ಮ ಸಹಾಯಕ್ಕಿದ್ದರೂ, ತತ್‌ಕ್ಷಣ ಭಾಷಾಂತರಿಸಿದರೂ, ಉಚ್ಚಾರವನ್ನೂ ಕೇಳಿಸಿದರೂ, ಆಯಾ ಭಾಷೆಗಿರುವ ಸಂಸ್ಕೃತಿಯನ್ನು ಕಲಿಯುವುದು ಕಷ್ಟವೇ. ಆದರೂ ಅವರವರ ಭಾಷೆಯಲ್ಲಿ ಕೆಲವು ವಾಕ್ಯಗಳನ್ನಾದರೂ ಮಾತನಾಡುವ ಪ್ರಯತ್ನ ವ್ಯವಹಾರ-ವ್ಯಾಪಾರ-ಸಾಮಾಜಿಕ ಸನ್ನಿವೇಶಗಳಲ್ಲಿ ಸಂವಹನವನ್ನು ಭಾವನಾತ್ಮಕವಾಗಿಸುತ್ತದೆ. ಭಾಷಾಂತರಗಳೂ, ಹಾಗೆ ಮಾಡುವಾಗ ನಡೆಯುವ ಅವಾಂತರಗಳೂ ಬದುಕನ್ನು ಸ್ವಾರಸ್ಯಕರ ಎನಿಸುವಂತೆ ಮಾಡಬಲ್ಲವು. ಮಾನವರ ನಡವಳಿಕೆಗಳ ಬಗ್ಗೆ ಕುತೂಹಲಕಾರಿ ಸಂಗತಿಗಳನ್ನ ಕಲಿಸಬಲ್ಲವು. ವೈದ್ಯಕೀಯ ವೃತ್ತಿಯಲ್ಲಂತೂ ರೋಗಿಯ ಮಾತೃಭಾಷೆಯಲ್ಲಿ ನೀವು ವ್ಯವಹರಿಸಬಲ್ಲವರಾದರೆ ನಿಮ್ಮ ಕೆಲಸ ಸುಲಭ. “ಅಯ್ಯೋ ! ಆ ಡಾಕ್ಟ್ರಿಗೆ ನಮ್ಮ ಭಾಷೆಯೇ ಬರಲ್ಲ, ನಮ್ಮ ನೋವನ್ನು ಅವರಿಗೆ ಹೇಗೆ ಹೇಳಿಕೊಳ್ಳೋದು?’ ಎಂದು ರೋಗಿಗಳು ಮೆಡಿಕಲ್‌ ಕಾಲೇಜುಗಳಲ್ಲಿ ದೂರುವುದು ಸಾಮಾನ್ಯ. ಹಾಗಾಗಿ, ಪ್ರವಾಸ-ವ್ಯವಹಾರ-ಸಾಮಾಜಿಕ ಸನ್ನಿವೇಶ ಎಲ್ಲೇ ಆಗಲಿ, ಭಾಷಾ ಅವಾಂತರಗಳಾದರೂ ಪರವಾಗಿಲ್ಲ, “ಭಾಷಾಂತರ’ ಮಾಡುವ ನಮ್ಮ ಪ್ರಯತ್ನ ನಡೆಯಲೇಬೇಕು, ಅಲ್ಲವೆ?

ಡಾ. ಕೆ.ಎಸ್‌. ಪವಿತ್ರಾ

Advertisement

Udayavani is now on Telegram. Click here to join our channel and stay updated with the latest news.

Next