Advertisement

ಪ್ರಪಂಚದ ಎಲ್ಲಾ ಪ್ರಮುಖ ಭಾಷೆಗಳಿಗೆ ಕುವೆಂಪು ಕೃತಿಗಳ ಅನುವಾದ: ಡಾ.ಸಿ.ಎನ್.ಅಶ್ವತ್ಥನಾರಾಯಣ

08:10 PM Dec 29, 2020 | Team Udayavani |

ಬೆಂಗಳೂರು: ಸರ್ವಕಾಲಕ್ಕೂ ಸಲ್ಲುವ ಕುವೆಂಪು ಅವರ ಸಾಹಿತ್ಯ ಕೃತಿಗಳನ್ನು ಪ್ರಪಂಚದ ಎಲ್ಲಾ ಪ್ರಮುಖ ಭಾಷೆಗಳಿಗೆ ಅನುವಾದ ಮಾಡಿಸಿ ಜಗತ್ತಿನೆಲ್ಲೆಡೆಯ ಓದುಗರಿಗೆ ಅವನ್ನು ಲಭ್ಯವಾಗಿಸುವ ದಿಸೆಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಮಲ್ಲೇಶ್ವರಂ ಕ್ಷೇತ್ರದ ಶಾಸಕರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

Advertisement

ಕುವೆಂಪು ಅವರ ಹುಟ್ಟಿದ ದಿನದ ಪ್ರಯುಕ್ತ ಮಲ್ಲೇಶ್ವರಂನಲ್ಲಿ  ವಿವಿಧ ಸಾಂಸ್ಕೃತಿಕ ತಂಡಗಳ ಪ್ರದರ್ಶನದೊಂದಿಗೆ ಹಬ್ಬದ ವಾತಾವರಣದಲ್ಲಿ ಮಂಗಳವಾರ ಸಂಜೆ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಸಾಗಿದ ಕನ್ನಡಿಗರ ಚೈತನ್ಯ ರಥದ ಮೆರವಣಿಗೆಗೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು. ಕುವೆಂಪು ಅವರ ಚಿತ್ರವನ್ನುಳ್ಳ ಭಿತ್ತಿಪತ್ರದೊಂದಿಗೆ 50ಕ್ಕೂ ಹೆಚ್ವು ಅಟೊಗಳು ಮಲ್ಲೇಶ್ವರಂನ ವಿವಿಧ ರಸ್ತೆಗಳ ಮೂಲಕ ಸಾಗಿ ಗಮನ ಸೆಳೆದವು.

ಕುವೆಂಪು ಅವರ ಸಾಹಿತ್ಯವು ಕಾಲದ ತೆಕ್ಕೆಯನ್ನು ಮೀರಿದ್ದು. ಇತ್ತೀಚೆಗೆ ಅವರ ಸಮಗ್ರ ಸಾಹಿತ್ಯದ 12,000 ಪುಟಗಳನ್ನು ಡಿಜಿಟಲೀಕರಣ ಮಾಡಿಸುವ ಮೂಲಕ ಪ್ರಪಂಚದ ಮೂಲೆಮೂಲೆಯಲ್ಲೂ ಲಭ್ಯವಾಗುವಂತೆ ಮಾಡಲಾಗಿದೆ. ಅದೇ ರೀತಿಯಲ್ಲಿ ಅವರ ಸಾಹಿತ್ಯದ ಅನುವಾದವೂ ಎಲ್ಲೆಡೆ ಸಿಗುವಂತೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಹಾಗೂ ಐಟಿ/ಬಿಟಿ ಸಚಿವರೂ ಆದ ಅವರು ಹೇಳಿದರು.

ಇದನ್ನೂ ಓದಿ: ಕಾನ್ಪುರ ಅಂಚೆ ಕಚೇರಿ ಬಿಡುಗಡೆಗೊಳಿಸಿದ ಅಂಚೆ ಚೀಟಿಯಲ್ಲಿ ಭೂಗತ ಪಾತಕಿಗಳ ಚಿತ್ರ!

Advertisement

ದೈನಂದಿನ ಜೀವನದಲ್ಲಿ ಭಾಷೆ ಬಳಕೆಗೆ ಇರುವ ಅಡ್ಡಿಗಳನ್ನು ನಿವಾರಿಸುವುದಕ್ಕಾಗಿ ಕನ್ನಡ ತಂತ್ರಜ್ಞಾನ ತಂಡವನ್ನು ರಚಿಸಲಾಗಿದೆ. ನಾಡು-ನುಡಿಯ ವಿಷಯದಲ್ಲಿ ಆಸಕ್ತರಾದವರನ್ನು ಒಳಗೊಳ್ಳಿಸಿಕೊಂಡು ಕನ್ನಡ  ನುಡಿಗಟ್ಟನ್ನು ಈಗಿನ ಬೆಳವಣಿಗೆಗಳಿಗೆ ಅನುಗುಣವಾಗಿ ಸಶಕ್ತಗೊಳಿಸುವ ಕಾರ್ಯವನ್ನು ಈ ತಂಡ ಮಾಡಲಿದೆ ಎಂದು ಅಶ್ವತ್ಥನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು.

ತಂತ್ರಜ್ಞಾನದ ಮೂಲಕ ಸಾರ್ವಜನಿಕ ಸೇವೆಗಳನ್ನು ಜನರಿಗೆ ತಲುಪಿಸುವುದರಲ್ಲಿ ಸಾಕಷ್ಟು ಸುಧಾರಣೆಗಳನ್ನು ತರಲು ಸಾಧ್ಯವಿದೆ. ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲಾ ವಲಯಗಳಲ್ಲಿ ಬದಲಾವಣೆಗಳನ್ನು ತರಲಾಗುವುದು ಎಂದು ತಿಳಿಸಿದರು.

ಸರ್ಕಾರಿ ಶಾಲೆ, ಕಾಲೇಜುಗಳನ್ನು ಸದೃಢವಾಗಿಸಲು ಒತ್ತು ಕೊಡಲಾಗುವುದು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಇದಕ್ಕೆ ಪರಿಹಾರ ಕಂಡುಕೊಳ್ಳಲಾಗುವುದು. ಗುಣಮಟ್ಟದ ಶಿಕ್ಷಣ ನೀಡಬೇಕೆಂಬುದು ಸರ್ಕಾರದ ದೃಢ ನಿರ್ಧಾರವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಸೋಮಶೇಖರ್, ಕನ್ನಡ ಹೋರಾಟಗಾರ ಸಾ.ರಾ.ಗೋವಿಂದ, ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ), ಬಿಬಿಎಂಪಿ ಮಾಜಿ ಸದಸ್ಯ ಮಂಜುನಾಥ ರಾಜು ಮತ್ತಿತರರು ಇದ್ದರು.

ಇದನ್ನೂ ಓದಿ:  ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಠಿಣವಾಗಿ ಜಾರಿಗೊಳಿಸಲು ಇಲಾಖೆ ಸಿದ್ದ: ಸಚಿವ ಪ್ರಭು ಚವ್ಹಾಣ್

Advertisement

Udayavani is now on Telegram. Click here to join our channel and stay updated with the latest news.

Next