ಬೆಂಗಳೂರು: 12ನೇ ಶತಮಾನದ ಶರಣರ ವಚನಗಳನ್ನು ದೇಶಾದ್ಯಂತ ಪರಿಚಯಿಸುವ ನಿಟ್ಟಿನಲ್ಲಿ ಬಸವ ಸಮಿತಿಯು ದೇಶದ 23 ಭಾಷೆಗಳಲ್ಲಿ 2,500 ವಚನಗಳನ್ನು ಅನುವಾದಿಸಿದ್ದು, ಬಸವ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿ ಈ “ವಚನ’ಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. 173 ಶರಣರ ಆಯ್ದ 2,500 ವಚನಗಳನ್ನು 23 ಭಾಷೆಗಳಲ್ಲಿ ಅನುವಾದ ಮಾಡಿ, “ವಚನ’ ಎಂಬ ಶೀರ್ಷಿಕೆಯಲ್ಲಿ ಹೊತ್ತಿಗೆ ಹೊರತರಲಾಗಿದೆ. ಈ ಹೊತ್ತಿಗೆಯನ್ನು ಏ.29ರಂದು ದೆಹಲಿಯ ವಿಜ್ಞಾನ ಭವನದಲ್ಲಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪ್ರಧಾನಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು
ಬೇಲಿಮಠ ಮಹಾಸಂಸ್ಥಾನದ ಶಿವರುದ್ರ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಉರ್ದು, ಸಂಸ್ಕೃತ, ಮರಾಠಿ, ಬೆಂಗಾಲಿ, ಪಂಜಾಬಿ, ಸಿಂಧಿ, ಗುಜರಾತಿ, ಕೊಂಕಣಿ ಮೈಥಿಲಿ, ಕಾಶ್ಮೀರಿ, ಓರಿಯಾ, ಸಂತಾಲಿ, ರಾಜಸ್ತಾನಿ, ಮಲಯಾಳಿ, ತುಳು, ಜೋಜ್‌ಪುರಿ, ಕೊಡವ, ಅಸ್ಸಾಮಿ ಸೇರಿ ಒಟ್ಟಾರೆ 23 ಭಾಷೆಗಳಲ್ಲಿ “ವಚನ’ ಮೂಡಿಬರುತ್ತಿದೆ. ಇದಕ್ಕಾಗಿ ದೇಶದ 200 ತಜ್ಞ ಅನುವಾದಕರು ಮತ್ತು ಸಂಪಾದಕರು
ಕಾರ್ಯನಿರ್ವಹಿಸಿದ್ದಾರೆ ಎಂದು ಮಾಹಿತಿ ನೀಡಿದರು.
ದಶಕದ ಯೋಜನೆ ಸಾಕಾರ: ಒಟ್ಟಾರೆ 15 ಸಾವಿರ ವಚನಗಳಿದ್ದವು. ಈ ಪೈಕಿ 2,500 ವಚನಗಳನ್ನು ಆಯ್ಕೆ ಮಾಡಿ ಅನುವಾದಿಸಲಾಗಿದೆ. ಹತ್ತು ವರ್ಷಗಳ ಹಿಂದೆ ದಿವಂಗತ ಡಾ.ಎಂ.ಎಂ. ಕಲಬುರ್ಗಿ ಅವರ ನೇತೃತ್ವದಲ್ಲಿ “ಬಹುಭಾಷಾ
ವಚನ ಅನುವಾದ ಯೋಜನೆ’ಗೆ ಚಾಲನೆ ನೀಡಲಾಗಿದೆ. ಎರಡೂವರೆ ಕೋಟಿ ರೂ. ಮೊತ್ತದ ಈ ಯೋಜನೆಗೆ ರಾಜ್ಯ ಸರ್ಕಾರ ಒಂದು ಕೋಟಿ ರೂ. ಅನುದಾನ ನೀಡಿದೆ ಎಂದು ತಿಳಿಸಿದರು.
ಕನ್ನಡ ಮತ್ತು ಮರಾಠಿಯಲ್ಲಿನ ಅನುವಾದಿತ ಹೊತ್ತಿಗೆಯು ತಲಾ 5 ಸಾವಿರ ಪ್ರತಿಗಳು ಹಾಗೂ ಉಳಿದ ಭಾಷೆಗಳಲ್ಲಿ ಸಾವಿರ ಪ್ರತಿಗಳನ್ನು ಮೊದಲ ಹಂತದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಹೀಗೆ ಬಿಡುಗಡೆಗೊಂಡ “ವಚನ’ಗಳ ಪ್ರತಿಗಳನ್ನು ಆಯಾ ರಾಜ್ಯಗಳು ಖರೀದಿಸಲು ಸೂಚಿಸುವಂತೆ ಪ್ರಧಾನಿಗೆ ಮನವಿ ಮಾಡಲಾಗುವುದು ಎಂದು ಸಮಿತಿ ಜಂಟಿ ಕಾರ್ಯದರ್ಶಿ ಶಿವಮಹದೇವ ತಿಳಿಸಿದರು.
ಬಸವ ಸಮಿತಿ ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿದ್ದು, ಇದೇ ವೇಳೆ 23 ಭಾಷೆಗಳಲ್ಲಿ “ವಚನ’ ಹೊರಬರುತ್ತಿರುವುದು ಸಾರ್ಥಕಭಾವ ಮೂಡಿಸುತ್ತಿದೆ. ಅಂದು ದೆಹಲಿಯಲ್ಲಿ ನಡೆಯುವ ಬಸವ ಜಯಂತಿಯಲ್ಲಿ ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ. ಸದಾನಂದಗೌಡ, ರಮೇಶ ಜಿಗಜಿಣಗಿ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮಾಜಿ ಸಂಸದ ಐ.ಜಿ. ಸನದಿ ಮತ್ತಿತರರು ಭಾಗವಹಿಸಲಿದ್ದಾರೆ
ಎಂದರು.