ಹುಬ್ಬಳ್ಳಿ: ವರ್ಷದ ಮೊದಲ ಹಬ್ಬ ಮಕರ ಸಂಕ್ರಮಣ ಹಬ್ಬವನ್ನು ಸಾರ್ವಜನಿಕರು ಅದ್ಧೂರಿಯಾಗಿ ಬರಮಾಡಿಕೊಂಡರೆ ಇನ್ನೂ ಕೆಲವು ಕಡೆ ನಿರಾಸೆ ಮೂಡಿಸಿತ್ತು. ಪ್ರತಿ ವರ್ಷ ನಗರದ ಉಣಕಲ್ಲ ಕೆರೆ ಉದ್ಯಾನವನ, ಸಂಜೀವಿನಿ ಗಾರ್ಡನ್, ನೃಪತುಂಗ ಬೆಟ್ಟ, ಇಂದಿರಾ ಗಾಜಿನ ಮನೆ ಉದ್ಯಾನವನ ಸಂಪೂರ್ಣ ಜನರಿಂದ ತುಂಬಿ ತುಳುಕುತ್ತಿತ್ತು. ಆದರೆ ಜಿಲ್ಲಾಡಳಿತ ಆದೇಶ ಹಿನ್ನೆಲೆಯಲ್ಲಿ ನಗರದ ಎಲ್ಲ ಉದ್ಯಾನವನಗಳಿಗೂ ನಿಷೇಧ ಹೇರಲಾಗಿತ್ತು. ಆದರೆ ನೃಪತುಂಗ ಬೆಟ್ಟದ ಉದ್ಯಾನವನದಲ್ಲಿ ಒಂದಿಷ್ಟು ಜನರು ಕಾಣುತ್ತಿದ್ದರು.
ಎಲ್ಲ ಉದ್ಯಾನವನಗಳು ಬಂದ್ ಇದ್ದು ನೃಪತುಂಗ ಬೆಟ್ಟದ ಉದ್ಯಾನವನ ಒಂದೇ ಶುರು ಇರುವುದರಿಂದ ಎಲ್ಲಿ ನೋಡಿದರಲ್ಲಿ ಜನ ಕಾಣುತ್ತಿದ್ದರು. ಸಮೀಪದ ಬೂದನಗುಡ್ಡ ಬಸವೇಶ್ವರ ದೇವಸ್ಥಾನ, ಸಿದ್ಧಾರೂಢಮಠ ಸೇರಿದಂತೆ ಇನ್ನಿತರೆಡೆ ಜನರಿರುವುದು ಕಂಡು ಬಂತು.
ಇದನ್ನೂ ಓದಿ:ಉತ್ತರ ಕರ್ನಾಟಕದ ಅಭಿವೃದ್ಧಿ ಪರ್ವ ಆರಂಭ: ಸಚಿವ ಶೆಟ್ಟರ್
ಭೋಜನದ ಸವಿ: ಮಕರ ಸಂಕ್ರಮಣ ನಿಮಿತ್ತ ನಗರದ ನೃಪತುಂಗ ಬೆಟ್ಟದ ಉದ್ಯಾನವನದಲ್ಲಿ ಆಗಮಿಸಿದ ಜನರು ತರೇಹವಾರಿ ಅಡುಗೆ ಸಿದ್ಧಪಡಿಸಿ ಅದರ ಸವಿ ಸವಿಯುವ ಮೂಲಕ ಹಬ್ಬದ ಸಂಭ್ರಮ ಅನುಭವಿಸಿದರು. ಜೋಳದ ರೊಟ್ಟಿ, ಸಜ್ಜಿ ರೊಟ್ಟಿ, ಚಪಾತಿ, ಎಣಗಾಯಿ ಪಲ್ಲೆ, ವಿವಿಧ ತರಹದ ಕಾಳು ಪಲ್ಲೆ, ಮಾದಲಿ, ಚಟ್ನಿ-ಮೊಸರು, ಪಲಾವ, ಅನ್ನ ಸಾಂಬಾರ, ಮೊಸರನ್ನ ಸೇರಿದಂತೆ ಬಗೆಬಗೆಯ ಊಟ ಸವಿಯುತ್ತಿರುವುದು ಕಂಡು ಬಂತು. ನಂತರ ಪರಸ್ಪರ ಕುಸುರೆಳ್ಳು ವಿನಿಮಯ ಮಾಡಿಕೊಳ್ಳುವ ಮೂಲಕ ಸಂಕ್ರಮಣದ ಸಂಭ್ರಮ ಆಚರಿಸಿದರು.