Advertisement

ಬೆಂಗಳೂರಿಗೆ ಬಂದ ಪರಿವರ್ತನಾ ಯಾತ್ರೆ

12:15 PM Dec 11, 2017 | Team Udayavani |

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿರುವ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ ಅಂಗವಾಗಿ ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಸಮಾವೇಶ ಹಮ್ಮಿಕೊಂಡಿದ್ದ ಹಿನ್ನೆಲೆಯಲ್ಲಿ ಪುಟ್ಟೇನಹಳ್ಳಿಯಿಂದ ಜೆ.ಪಿ.ನಗರದ ಆರ್‌ಬಿಐ ಲೇಔಟ್‌ನ ಸರ್ಕಾರಿ ಶಾಲಾ ಮೈದಾನದವರೆಗೆ ಬೃಹತ್‌ ರ್ಯಾಲಿ ನಡೆಯಿತು.

Advertisement

ಡೊಳ್ಳು ಕುಣಿತ, ಪಟ ಕುಣಿತ ಸೇರಿದಂತೆ ವಿವಿಧ ಕಲಾ ಪ್ರಕಾರಗಳೊಂದಿಗೆ ನಡೆದ ರ್ಯಾಲಿಯಲ್ಲಿ ನೂರಾರು ಮಹಿಳೆಯರು ತಲೆಯಲ್ಲಿ ಕಲಶಗಳನ್ನು ಹೊತ್ತು ತಂದಿದ್ದರು. ಸಹಸ್ರಾರು ಮಂದಿ ಬಿಜೆಪಿ ಪರ ಮತ್ತು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ನ.2ರಂದು ಬೆಂಗಳೂರು ಹೊರವಲಯದಲ್ಲಿ ನಡೆದ ಪರಿವರ್ತನಾ ರ್ಯಾಲಿಯಲ್ಲಿ ಹೆಚ್ಚು ಜನ ಸೇರದೆ ಬೆಂಗಳೂರಿನ ಬಿಜೆಪಿ ಮುಖಂಡರು ಮುಖಂಭಂಗ ಅನುಭವಿಸಿದ್ದರೆ, ಭಾನುವಾರದ ಸಮಾವೇಶ ಅದಕ್ಕೆ ಉತ್ತರವೆಂಬಂತೆ ಶಾಲಾ ಮೈದಾನ ತುಂಬಿ ತುಳುಕುತ್ತಿತ್ತು.

ಅರ್ಧದಷ್ಟು ಮಂದಿ ಶಾಲಾ ಮೈದಾನದ ಆವರಣಕ್ಕೆ ಬರಲೂ ಸಾಧ್ಯವಾಗದೆ ರಸ್ತೆ ಬದಿಯಲ್ಲೇ ನಿಂತಿದ್ದರು. ಅದರಲ್ಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದುದು ವಿಶೇಷವಾಗಿತ್ತು. ಸಮಾವೇಶಕ್ಕೆ ಬಂದವರಿಗೆ ಬೇಕಾದಷ್ಟು ನೀರಿನ ಪ್ಯಾಕೆಟ್‌ಗಳನ್ನು ಮೈದಾನದಲ್ಲಿ ಮತ್ತು ಸುತ್ತಮುತ್ತ ವಿತರಿಸಲಾಯಿತು.

ತಡವಾಗಿ ಆರಂಭವಾದ ಸಮಾವೇಶ: ಬೆಳಗ್ಗೆ 11.30ಕ್ಕೆ ಸಮಾವೇಶ ಆರಂಭವಾಗಬೇಕಿತ್ತು. ಅದರಂತೆ ಮೈದಾನದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ಮಧ್ಯೆ ಪುಟ್ಟನೇಹಳ್ಳಿಯಿಂದ ಬರುತ್ತಿದ್ದ ರ್ಯಾಲಿಯ ಜನ ಕೂಡ ಸೇರಲಾರಂಭಿಸಿದರು.

Advertisement

ಆದರೆ, ಶನಿವಾರ ಕಲಬುರಗಿ ಜಿಲ್ಲೆಯ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಯಡಿಯೂರಪ್ಪ ಮತ್ತಿತರರು ಬರುವ ರೈಲು ವಿಳಂಬವಾಗಿದ್ದರಿಂದ ಕಾರ್ಯಕ್ರಮ ಆರಂಭವಾಗಲಿಲ್ಲ. ಈ ಮಧ್ಯೆ ಸಿ.ಟಿ.ರವಿ., ಶೋಭಾ ಕರಂದ್ಲಾಜೆ, ಅರವಿಂದ ಲಿಂಬಾವಳಿ ಅವರು ತಮ್ಮ ಭಾಷಣ ಮುಗಿಸಿದರು. ಸುಮಾರು 12.45ರ ವೇಳೆಗೆ ಯಡಿಯೂರಪ್ಪ, ಅನಂತಕುಮಾರ್‌ ಮತ್ತಿತರರು ಬಂದು ಸಮಾವೇಶವನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು.

ಭಾನುವಾರವೂ ಸಂಚಾರ ದಟ್ಟಣೆ ಬಿಸಿ: ಸಮಾವೇಶದ ಅಂಗವಾಗಿ ಬಿಜೆಪಿ ವತಿಯಿಂದ ಪುಟ್ಟೇನಹಳ್ಳಿಯಿಂದ ಜೆ.ಪಿ.ನಗರದ ಆರ್‌ಬಿಐ ಲೇಔಟ್‌ನ ಸರ್ಕಾರಿ ಶಾಲಾ ಮೈದಾನದವರೆಗೆ ಬೃಹತ್‌ ರ್ಯಾಲಿ ಹಮ್ಮಿಕೊಂಡಿದ್ದ ಕಾರಣ ಭಾನುವಾರವೂ ಆ ಭಾಗದ ಜನ ಸಂಚಾರ ದಟ್ಟಣೆ ಬಿಸಿ ಎದುರಿಸಬೇಕಾಯಿತು. ಆದರೂ ರ್ಯಾಲಿ ನಡೆಯುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರೇ ಮುಂದೆ ನಿಂತು ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಟ್ಟ ಕಾರಣ ಜನ ಹೆಚ್ಚು ಪರದಾಡುವ ಪರಿಸ್ಥಿತಿ ಉದ್ಭವವಾಗಲಿಲ್ಲ.

ಬಿಎಸ್‌ವೈಗೆ ಗದೆ ಉಡುಗೊರೆ: ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಗೆ ಸೀಮಿತವಾಗಿ ಈ ಸಮಾವೇಶ ನಡೆದಿದ್ದು, ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಬೆಳ್ಳಿಯ ಗದೆ ನೀಡಿ ಬೃಹತ್‌ ಗಾತ್ರದ ಹಾರ ಹಾಕಿ ಅಭಿನಂದಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next