Advertisement

ನವೆಂಬರ್‌, ಡಿಸೆಂಬರ್‌ನಲ್ಲಿ ಪರಿವರ್ತನಾ ಯಾತ್ರೆ

10:43 AM Aug 30, 2017 | |

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿರುವ “ನವಕರ್ನಾಟಕ ನಿರ್ಮಾಣ ಪರಿವರ್ತನಾ ರಥಯಾತ್ರೆ’ಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅಥವಾ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

Advertisement

ಬಿಜೆಪಿ ಸ್ಲಂ ಮೋರ್ಚಾ ರಾಜ್ಯ ಕಾರ್ಯಕಾರಿಣಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮತ್ತು ಪಕ್ಷ ಸಂಘಟನೆಯ ಜತೆಗೆ ಮುಂದಿನ ಕರ್ನಾಟಕ ಹೇಗಿರಬೇಕು ಎಂಬ ದೃಷ್ಟಿಕೋನದೊಂದಿಗೆ ಈ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ರಥಯಾತ್ರೆ ನಡೆಯಲಿದ್ದು, ಇದರ ಉದ್ಘಾಟನೆಗೆ ಅಮಿತ್‌ ಶಾ ಬರಲಿದ್ದಾರೆ. ಇದರ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಕರೆಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು. 

ಒಟ್ಟು 60 ದಿನ ನಡೆಯುವ ರಥಯಾತ್ರೆ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲೂ ಸಂಚರಿಸಲಿದ್ದು, ಪ್ರತಿನಿತ್ಯ ಮೂರು ಅಥವಾ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ನಡೆಸಿ ಎಲ್ಲಾ ಕಡೆ ಬಹಿರಂಗ ಸಭೆಗಳನ್ನು ಏರ್ಪಡಿಸಲಾಗುತ್ತದೆ. ಜತೆಗೆ ರಸ್ತೆಯುದ್ದಕ್ಕೂ ಹೆಚ್ಚು ಜನ ಸೇರುವ ಕಡೆ ಒಂದೆರಡು ನಿಮಿಷ ರಥ ನಿಂತು ನಂತರ ಮುಂದುವರಿಯಲಿದೆ. ಈ ರಥಯಾತ್ರೆ ಇದುವರೆಗೆ ನಡೆದಿರುವ ಯಾತ್ರೆಗಳಿಗಿಂತ ಭಿನ್ನವಾಗಿರಲಿದೆ ಎಂದು ಹೇಳಿದರು.

ಇಂದು ಬಿಜೆಪಿಗೆ ಲಹರಿ ವೇಲು
ಬೆಂಗಳೂರು: ಲಹರಿ ರೆಕಾರ್ಡಿಂಗ್‌ ಕಂಪನಿಯ ತುಳಸೀರಾಮ ನಾಯ್ಡು (ಲಹರಿ ವೇಲು) ಬುಧವಾರ ಬಿಜೆಪಿ ಸೇರುತ್ತಿದ್ದಾರೆ. ಇವರೊಂದಿಗೆ ಲಹರಿ ರೆಕಾರ್ಡಿಂಗ್ಸ್‌ನ ವ್ಯವಸ್ಥಾಪಕ ಪಾಲುದಾರ ಜಿ.ಮನೋಹರ್‌ ಕೂಡ ಬಿಜೆಪಿಗೆ ಸೇರಲಿದ್ದಾರೆ. ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸಂಜೆ 4 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಲಹರಿ ವೇಲು ಮತ್ತು ಜಿ.ಮನೋಹರ್‌ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. 

ಬಿಜೆಪಿ ಸ್ಲಂ ಮೋರ್ಚಾದಿಂದ “ಕೊಳಗೇರಿಗಳತ್ತ ಬಿಜೆಪಿ’
ಬೆಂಗಳೂರು: ರಾಜ್ಯದ ಕೊಳಗೇರಿಗಳಲ್ಲಿ ವಾಸವಾಗಿರುವ ಸಮುದಾಯದ ಒಲವು ಗಳಿಸುವ ಉದ್ದೇಶದಿಂದ ಬಿಜೆಪಿ ಸ್ಲಂ ಮೋರ್ಚಾ ವತಿಯಿಂದ “ಕೊಳಗೇರಿಗಳತ್ತ ಬಿಜೆಪಿ’ ಕಾರ್ಯಕ್ರಮ ರೂಪಿಸಲು ನಿರ್ಧರಿಸಲಾಗಿದೆ. ಮಂಗಳವಾರ ಮಾಜಿ ಸಚಿವ ಗೋವಿಂದ ಕಾರಜೋಳ ಹಾಗೂ ರಾಜ್ಯ ಬಿಜೆಪಿ ಸ್ಲಂ ಮೋರ್ಚಾ ಅಧ್ಯಕ್ಷ ಜಯಪ್ರಕಾಶ್‌ ಅಂಬಾರ್ಕರ್‌ ನೇತೃತ್ವದಲ್ಲಿ ನಡೆದ ಮೋರ್ಚಾ ಕಾರ್ಯ ಕಾರಿಣಿಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next