Advertisement

ಸುಳ್ಯದಲ್ಲಿ ಪರಿವರ್ತನಾ ಯಾತ್ರೆ

11:02 AM Nov 11, 2017 | Team Udayavani |

ಸುಳ್ಯ: ರಾಜ್ಯ ಸರಕಾರ ಆಲಿಬಾಬಾ ಮತ್ತು 40 ಕಳ್ಳರ ಕಥೆಯಂತೆ ದುರಾಡಳಿತ ನಡೆಸುತ್ತಿದೆ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡ ಟೀಕಿಸಿದ್ದಾರೆ. ಶ್ರೀ ಚೆನ್ನಕೇಶವ ದೇಗುಲದ ಎದುರು ನಡೆದ ಪರಿವರ್ತನಾ ಸಮಾವೇಶದಲ್ಲಿ ಮಾತನಾಡಿದ ಅವರು, ತುಷ್ಟೀಕರಣ ರಾಜ ನೀತಿ, ಕುಟುಂಬ ರಾಜಕಾರಣವನ್ನು ಬದಲಾಯಿಸುವುದು ನಮ್ಮ ಗುರಿ ಎಂದರು.

Advertisement

ಇದ್ಯಾವ ರಾಜನೀತಿ?
ಕೇಂದ್ರ ನೀತಿ ಆಯೋಗದ ಸದಸ್ಯರಾದ ಮುಖ್ಯಮಂತ್ರಿಯವರು ಸಭೆಗೆ ಪಾಲ್ಗೊಳ್ಳುತ್ತಿಲ್ಲ. ಜಿಎಸ್‌ಟಿ ಕೌನ್ಸಿಲ್‌ನ ಒಂದೂ ಸಭೆಗೂ ಹಾಜರಾಗದೆ ಅವಮಾನ ಮಾಡಿದ್ದಾರೆ. ಇದು ಯಾವ ರಾಜನೀತಿ ಎಂದು ಪ್ರಶ್ನಿಸಿದರು.

ಈ ಹಿಂದೆ ಕೇಂದ್ರ ಸರಕಾರ 13ನೇ ಹಣಕಾಸು ಯೋಜನೆಯಡಿ ಶೇ.32 ಅನುದಾನ ನೀಡಿದರೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಪ್ರಸ್ತುತ ಶೇ.42 ಅನುದಾನ ನೀಡುತ್ತಿದೆ ಎಂದ ಅವರು, ಬರ ಪರಿಹಾರದಲ್ಲಿ 20,986 ಕೋಟಿ ರೂ. ನೀಡಲಾಗಿದೆ. ಸ್ವಚ್ಛ ಭಾರತಕ್ಕೆ 1,182 ಕೋಟಿ ರೂ. ನೀಡಿದ್ದರೂ ಕೇವಲ 200 ಕೋಟಿ ರೂ. ಮಾತ್ರ ಖರ್ಚು ಮಾಡಿ ಮುಖ್ಯಮಂತ್ರಿಗಳು ಅನುದಾನ ನೀಡಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ದೂರಿದರು.

ಸಂಸದೆ ಶೋಭಾ ಕರಂದ್ಲಾಜೆ ಅವರು ಮಾತನಾಡಿ, ಟಿಪ್ಪು ಆಚರಣೆಯನ್ನು ಕಾಂಗ್ರೆಸಿಗರು ಮನೆಯಲ್ಲಿ, ಪಕ್ಷದ ಕಚೇರಿಗಳಲ್ಲಿ ಆಚರಿಸಿ ಕೊಳ್ಳಲಿ. ಕೇಂದ್ರ ಸರಕಾರ ನೀಡುವ ಹಣದಲ್ಲಿ ಹಿಂದು- ಕ್ರೈಸ್ತರು ವಿರೋಧಿಸುವ ಮತ್ತು ವ್ಯಕ್ತಿ ಪೂಜೆ ಸಮ್ಮತವಲ್ಲದ ಇಸ್ಲಾಂ ಆಚರಣೆ ವಿರುದ್ಧವಾದ ಟಿಪ್ಪು ಜಯಂತಿ ಆಚರಣೆ ಬೇಡ ಎಂದರು. ಜಿಲ್ಲೆಯ ಅಡಿಕೆ, ರಬ್ಬರ್‌ ಬೆಳೆಗಾರರ ಹಿತಾಸಕ್ತಿ ಕಾಪಾಡಿ ಹಾಗೂ ಶಾಶ್ವತ ಪರಿಹಾರ ನೀಡಬೇಕು. ಖಾಸಗಿ ವೈದ್ಯರ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಜನರ ನಿರೀಕ್ಷೆ ಸುಳ್ಳಾಗಿದೆ
ಸಂಸದ ನಳಿನ್‌ ಕುಮಾರ್‌ ಕಟೀಲ್‌ ಮಾತನಾಡಿ, ಯಡಿಯೂರಪ್ಪ ಪಕ್ಷದ ಚುಕ್ಕಾಣಿಹಿಡಿದು ಜನಸಾಗರ ಯಾತ್ರೆಗೆ ಹೊರಟಿದ್ದಾರೆ. ಸುಳ್ಯದಲ್ಲಿ ಅಭೂತಪೂರ್ವ ಸ್ವಾಗತ ದೊರೆತಿದೆ. ಜನರ ಸಂಕಲ್ಪದಂತೆ ಯಡಿಯೂರಪ್ಪನವರೇ ಮುಂದಿನ ಮುಖ್ಯಮಂತ್ರಿ ಎಂದರು.

Advertisement

ಸಮಾಜವಾದಿ ಮತ್ತು ಕಾಂಗ್ರೆಸ್‌ ಚಿಂತನೆ ಯುಳ್ಳ ಸಿದ್ದರಾಮಯ್ಯ ಅಧಿಕಾರಕ್ಕೇರುವ ಸಂದರ್ಭ ಜನರಿಟ್ಟಿದ್ದ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ ಎಂದು ಟೀಕಿಸಿದ ಅವರು, ಟಿಪ್ಪುಜಯಂತಿ ಮೂಲಕ ಇಸ್ಲಾಂಗೆ ಅಪಚಾರವೆಸಗಲಾಗಿದೆ. ಹಿಂದೂ ವಿರೋಧಿ ನೀತಿ, ಜಾತಿಗಳ ವಿಘಟನೆ ನೀತಿ ಹೆಚ್ಚಿದೆ. ಹಿಂದು ಯುವಕರ ಕೊಲೆಗಳಿಗೆ ನ್ಯಾಯದೊರೆತಿಲ್ಲ ಎಂದು ಆರೋಪಿಸಿದರು.

ಬಳ್ಳಾರಿ ಸಂಸದ ಶ್ರೀರಾಮುಲು ಮಾತನಾಡಿ, ಹಿಂದೂ ಕಾರ್ಯಕರ್ತರನ್ನು ಕೊಲ್ಲುವ ಕೆಲಸ ಮಾಡುತ್ತಿರುವ ಕಾಂಗ್ರೆಸ್‌ ಸರಕಾರವನ್ನು ಕೊನೆಗಾಣಿಸಬೇಕು ಎಂದು ಕರೆ ನೀಡಿದರು.

ವಿಶೇಷ ಪ್ರಾರ್ಥನೆ
ಗಾಯಾಳು ಪ್ರಕಾಶ್‌ ಹೆಗ್ಡೆ ಅವರ ಆರೋಗ್ಯ ಸುಧಾರಣೆಗೆ ಅನುಗ್ರಹಿಸಿ ಆರೆಸ್ಸೆಸ್‌ ಮಂಗಳೂರು ವಿಭಾಗ ಕಾರ್ಯವಾಹ
ನ. ಸೀತಾರಾಮ ಅವರು ಕಾರ್ಯಕರ್ತರಿಂದ ಮೃತ್ಯುಂಜಯ ಜಪಸ್ಮರಣೆ ನೆರವೇರಿಸಿದರು.

ಮುನ್ನಡೆಯೋಣ
ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಎಸ್‌. ಅಂಗಾರ, ಪಕ್ಷ ಕಟ್ಟಿದ ಹಿರಿಯರ ಉದ್ದೇಶಗಳಿಗನುಸಾರ ನವಭಾರತ ಮತ್ತು ನವಕರ್ನಾಟಕ ನಿರ್ಮಾಣದ ಗುರಿಯಿಂದ ಪರಿವರ್ತನಾ ಯಾತ್ರೆ ಆಗಮಿಸಿದೆ. ಪ್ರಧಾನಿ ಮೋದಿಯವರಿಂದ ವಿಶ್ವದೆದುರು ದೇಶ ಮತ್ತು ಪ್ರಜೆಗಳಿಗೆ ಗೌರವ ಬಂದಿದೆ. ದೇಶ ಪರಿವರ್ತನೆಯ ಹಾದಿಯಲ್ಲಿದೆ. ಅದಕ್ಕೆ ಹೊಂದಿಕೊಂಡು ಮುನ್ನಡೆಯೋಣ ಎಂದರು.

ಅರವತ್ತು ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್‌ ಈಗ ‘ಸಂಪಾಜೆಗೆ ಪೋಯಿ’ ಮೂಲಕ ಘಟ್ಟ ಪ್ರದೇಶ ಹತ್ತುವ ಸ್ಥಿತಿಯೊದಗಿದೆ. ಕ್ಷೇತ್ರದ ಜನತೆಯ ಪ್ರೀತಿ, ವಿಶ್ವಾಸ ಉಳಿಸಿಕೊಂಡಿದ್ದು ಮುಂದುವರಿಸುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಉಳಿಗಾಲವಿಲ್ಲ. ಅಧಿಕಾರಿಗಳು ಹೆದರ ಬೇಕಿಲ್ಲ ಎಂದ ಅವರು, ಅಡಿಕೆ ಹಳದಿರೋಗ, ತಮಿಳು ಕಾರ್ಮಿಕರ ಸಮಸ್ಯೆ, ತಾಲೂಕಿನ ಪರಿಸರ ಸೂಕ್ಷ್ಮವಲಯದ ಆತಂಕ, ಕಾನ-ಬಾಣೆ-ಕುಮ್ಕಿ ಸಮಸ್ಯೆಗಳ ಬಗ್ಗೆ ಗಮನವಹಿಸುವಂತೆ ಕೋರಿದರು.

ವೇದಿಕೆಯಲ್ಲಿ ಬಿಜೆಪಿ ರಾಜ್ಯಪ್ರಧಾನ ಕಾರ್ಯದರ್ಶಿ ರವಿಕುಮಾರ್‌, ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ವಿಧಾನಪರಿಷತ್‌ ವಿಪಕ್ಷ ಸಚೇತಕ ಕ್ಯಾ.ಗಣೇಶ್‌ ಕಾರ್ಣಿಕ್‌, ವಿಧಾನಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಾಜಿ ಸಂಸದರಾದ ಆಯನೂರು ಮಂಜುನಾಥ್‌, ತೇಜಸ್ವಿನಿ ರಮೇಶ್‌, ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್‌, ಜಿ.ಪಂ. ಮಾಜಿ ಅಧ್ಯಕ್ಷೆ ಆಶಾತಿಮ್ಮಪ್ಪ, ರಾಜ್ಯ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತೀ ಶೆಟ್ಟಿ, ದ.ಕ. ಜಿಲ್ಲಾ ಪ್ರಭಾರಿ ಉದಯಕುಮಾರ್‌ ಶೆಟ್ಟಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕ್ಯಾ| ಬ್ರಿಜೇಶ್‌ ಚೌಟ, ಉಮಾನಾಥ ಕೋಟ್ಯಾನ್‌, ಸುದರ್ಶನ್‌ ಮೂಡುಬಿದಿರೆ, ರಥಯಾತ್ರೆಯ ಉಸ್ತುವಾರಿ ಸತ್ಯಜಿತ್‌ ಸುರತ್ಕಲ್‌ ಹಾಗೂ ಜಿ.ಪಂ. ಹಾಗೂ ತಾ.ಪಂ.ನ ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಸುಳ್ಯಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್‌ ವಳಲಂಬೆ ಸ್ವಾಗತಿಸಿದರು. ಕಾರ್ಯದರ್ಶಿ ಕಿಶೋರ್‌ ಶಿರಾಡಿ ವಂದಿಸಿದರು. ಸಮಾವೇಶ ಸಂಘಟನೆಯ ಅಚ್ಚುಕಟ್ಟಿನ ಬಗ್ಗೆ ಹಿರಿಯ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದರು.

ತಡವಾದ ಯಾತ್ರೆ 
ಬೆಳಗ್ಗೆ ಸುಬ್ರಹ್ಮಣ್ಯದಿಂದ 8.30ಕ್ಕೆ ಹೊರಡಬೇಕಿದ್ದರೂ ಯಡಿಯೂರಪ್ಪ ಸಹಿತ ಪ್ರಮುಖರ ಆಗಮನ ವಿಳಂಬವಾದದ್ದರಿಂದ 10 ಕ್ಕೆ ಹೊರಟಿತು. ಅರಂತೋಡಿನಿಂದ ಜಿ.ಪಂ.ಸದಸ್ಯ ಹರೀಶ್‌ ಕಂಜಿಪಿಲಿ ನೇತೃತ್ವದಲ್ಲಿ ಅಡಿಕೆ ಹಳದಿ ರೋಗಕ್ಕೆ ವಿಶೇಷ ಪ್ಯಾಕೇಜ್‌ ಕಲ್ಪಿಸುವಂತೆ ಮತ್ತು ರೈತ ಸಾಲಮನ್ನಾಕ್ಕಾಗಿ ಪಾದಯಾತ್ರೆ ಹಮ್ಮಿಕೊಳ್ಳಲಾಯಿತು. ಜ್ಯೋತಿವೃತ್ತ, ಕಾಯ ರ್ತೋಡಿ, ಅಜ್ಜಾವರ ಮೂರು ದಿಕ್ಕಿನಿಂದ ಹರಿದುಬಂದ 10 ಸಾವಿರಕ್ಕೂ ಅಧಿಕ ಮಂದಿ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಜಿಲ್ಲಾ ಕಾಂಗ್ರೆ ಸ್‌ನಲ್ಲಿ ಎಲವೂ ಸರಿಯಿಲ್ಲ 
ಜಿಲ್ಲಾ ಕಾಂಗ್ರೆಸ್‌ನೊಳಗೆ ಎಲ್ಲವೂ ಸರಿಯಿಲ್ಲ. ಸಚಿವ ಖಾದರ್‌- ರಮಾನಾಥ ರೈ, ಶಾಸಕಿ ಶಕುಂತಳಾ ಶೆಟ್ಟಿ- ಕಾವು ಹೇಮನಾಥ ಶೆಟ್ಟಿ, ಐವನ್‌ ಡಿ’ಸೋಜಾ- ಅಭಯಚಂದ್ರ ಜೈನ್‌, ಎಂ. ವೆಂಕಪ್ಪ ಗೌಡ- ಜಯಪ್ರಕಾಶ್‌ ರೈ-ಹೀಗೆ ಪಕ್ಷ ಒಡೆಯುತ್ತಿದೆ ಎಂದರು ಸಂಸದ ನಳಿನ್‌ಕುಮಾರ್‌ ಕಟೀಲ್‌.

ಪಕ್ಷ  ಸೇರ್ಪಡೆ
ಮಾಜಿ ಸೈನಿಕರ ಸಹಿತ ಜಾಲ್ಸೂರು, ಕಡಬ, ಅರಂತೋಡು, ಗುತ್ತಿಗಾರು, ಬೆಳಂದೂರು ಭಾಗದ ವಿವಿಧ ಪಕ್ಷಗಳ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು. ಸಮಾವೇಶದಲ್ಲಿಅಡಿಕೆ ಬೆಳೆ, ಪರಿಸರ ಸೂಕ್ಷ್ಮವಲಯ, ಅಜ್ಜಾವರ ರಸ್ತೆ ಅಭಿವೃದ್ಧಿ ಬಗ್ಗೆ ಮನವಿ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next