ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಪದಗ್ರಹಣ ಕಾರ್ಯಕ್ರಮ ಸಂಜೆ 4.30 ಕ್ಕೆ ವಿಧಾನಸೌಧ ಪೂರ್ವದ್ವಾರದಲ್ಲಿ ನಡೆಯಲಿದ್ದು, ಗಣ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಬುಧವಾರ ವಿಧಾನಸೌಧ ಸುತ್ತಮುತ್ತ ಸಂಚಾರ ಮಾರ್ಗ ಬದಲಿಸಲಾಗಿದೆ. ಜತೆಗೆ ದ್ವಿಚಕ್ರ ಮತ್ತು ಕಾರುಗಳ ನಿಲುಗಡೆಗೆ ಪ್ರತ್ಯೇಕ ಸ್ಥಳ ನಿಗದಿ ಮಾಡಲಾಗಿದೆ.
ಸಮಾರಂಭಕ್ಕೆ ಬರುವ ಗಣ್ಯರ ವಾಹನ ನಿಲುಗಡೆಗೆ ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ, ಕಂಠೀರವ ಕ್ರೀಡಾಂಗಣ, ಯುಬಿಸಿಟಿ ಪಾವತಿ ಮತ್ತು ನಿಲುಗಡೆ ಸ್ಥಳ, ಸೆಂಟ್ರಲ್ ಕಾಲೇಜು ಮೈದಾನ, ಫ್ರೀಡಂ ಪಾರ್ಕ್ ಆವರಣ, ಸರ್ಕಾರಿ ಕಲಾ ಕಾಲೇಜು ಹಳೇ ಅಂಚೆ ಕಚೇರಿ ರಸ್ತೆ, ಟಿ.ಚೌಡಯ್ಯ ರಸ್ತೆಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.
ಹಾಲಿ ಮತ್ತು ಮಾಜಿ ಶಾಸಕರು, ಸಂಸದರು ಹಾಗೂ ಪ್ರಮುಖ ಅಧಿಕಾರಿಗಳ ವಾಹನಗಳನ್ನು ದೇವರಾಜ್ ಅರಸ್ ರಸ್ತೆಯ ಮಾಹಿತಿ ಸೌಧ ಮುಂಭಾಗದ ಗೇಟ್ ನಂ. 2 ರ ಮೂಲಕ ಪ್ರವೇಶಿಸಿ ವಿಕಾಸಸೌಧ ವಾಹನ ನಿಲುಗಡೆ ಸ್ಥಳದಲ್ಲಿ ನಿಲುಗಡೆ ಮಾಡಬೇಕಿದೆ. ಮಾಧ್ಯಮ ಮತ್ತು ಓಬಿ ವಾಹನಗಳು ದೇವರಾಜ್ ಅರಸ್ ರಸ್ತೆಯ ಮಾಹಿತಿ ಸೌಧ ಮುಂಭಾಗದ ಗೇಟ್ ನಂ. 2 ರ ಮೂಲಕ ಪ್ರವೇಶಿಸಿ ವಿಧಾನಸೌಧದ ದಕ್ಷಿಣದ್ವಾರ ಹಾಗೂ ವಿಕಾಸಸೌಧ ಪೂರ್ವ ದ್ವಾರದ ಬಳಿ ನಿಲುಗಡೆ ಮಾಡಬಹುದು.
ವಾಹನ ನಿಲುಗಡೆ ನಿಷೇಧ: ಡಾ ಬಿ.ಆರ್.ಅಂಬೇಡ್ಕರ್ ರಸ್ತೆ, ಬಾಳೇಕುಂದ್ರಿ ವೃತ್ತದಿಂದ ಕೆ.ಆರ್.ವೃತ್ತ ರಸ್ತೆಯ ಎರಡೂ ಬದಿಗಳಲ್ಲಿ, ರಾಜಭವನ ರಸ್ತೆ, ಸಿಟಿಒ ವೃತ್ತದಿಂದ ರಾಜಭವನ ಜಂಕ್ಷನ್, ಎಲ್‌ಹೆಚ್‌ರಸ್ತೆ, ರಾಜಭವನ ಜಂಕ್ಷನ್‌ನಿಂದ ಚಾಲುಕ್ಯ ವೃತ್ತ ರಸ್ತೆ, ಕ್ವೀನ್ಸ್ ರಸ್ತೆ, ತಿಮ್ಮಯ್ಯ ಜಂಕ್ಷನ್‌ನಿಂದ ಕ್ವೀನ್ಸ್ ವೃತ್ತ ರಸ್ತೆ, ಶೇಷಾದ್ರಿ ರಸ್ತೆ, ಕೆ.ಆರ್.ವೃತ್ತದಿಂದ-ಆನಂದರಾವ್ ವೃತ್ತ, ಪ್ಯಾಲೇಸ್ ರಸ್ತೆ.
ಮೈಸೂರು ಬ್ಯಾಂಕ್ ವೃತ್ತದಿಂದ ವಸಂತನಗರ ಕೆಳಸೇತುವೆ, ದೇವರಾಜ ಅರಸ್ ರಸ್ತೆ, ಚಾಲುಕ್ಯ ವೃತ್ತದಿಂದ -ಎಂ.ಎಸ್.ಬಿಲ್ಡಿಂಗ್ (ಒಳಭಾಗದ ರಸ್ತೆ ಸೇರಿ), ರೇಸ್ ಕೋರ್ಸ್ ರಸ್ತೆ, ಟ್ರಿಲೈಟ್ ಜಂಕ್ಷನ್‌ನಿಂದ ಚಾಲುಕ್ಯ ವೃತ್ತ, ಪಾರ್ಕ್‌ಹೌಸ್ ರಸ್ತೆ, ಎಜಿಎಸ್ ಜಂಕ್ಷನ್‌ನಿಂದ ಸಿಐಡಿ ವೃತ್ತ, ಕಬ್ಬನ್ ಉದ್ಯಾನವನದ ಒಳಭಾಗದ ರಸ್ತೆಗಳು, ಮಿಲ್ಲರ್ ರಸ್ತೆ, ಎಲ್‌ಆರ್‌ಡಿಇ ಜಂಕ್ಷನ್‌ನಿಂದ ಬಸವೇಶ್ವರ ವೃತ್ತ, ಇನ್‌ಫೆಂಟ್ರಿ ರಸ್ತೆ, ಅಲಿ ಆಸ್ಕರ್ ರಸ್ತೆ ಜಂಕ್ಷನ್‌ನಿಂದ ಟ್ರಾಫಿಕ್ ಹೆಡ್ ಕ್ವಾರ್ಟರ್ ಜಂಕ್ಷನ್, ರಾಜಭವನ ಜಂಕ್ಷನ್‌ನಿಂದ ಅಲಿ ಅಸ್ಕರ್ ಕ್ರಾಸ್‌ವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಬದಲಿ ಮಾರ್ಗ ವ್ಯವಸ್ಥೆ: ಡಾ. ಅಂಬೇಡ್ಕರ್ ರಸ್ತೆಯಲ್ಲಿ, ಪೊಲೀಸ್ ತಿಮ್ಮಯ್ಯ ವೃತ್ತದಿಂದ ಗೋಪಾಲಗೌಡ ವೃತ್ತದ ವರೆಗಿನ ಎರಡೂ ಬದಿಗಳಲ್ಲಿ ಎಲ್ಲಾ ಮಾದರಿಯ ವಾಹನಗಳ ಸಂಚಾರ, ನಿಲುಗಡೆಯನ್ನು ನಿಷೇಧಿಸಿದ್ದು, ಕ್ವೀನ್ಸ್ ರಸ್ತೆ ಮತ್ತು ಶಿವಾಜಿನಗರ ಕಡೆಯಿಂದ ಬಂದು ಡಾ ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿ ಸಂಚರಿಸುವ ಬಸ್ ಹಾಗೂ ಇತರೆ ವಾಹನ ಸಂಚಾರವನ್ನು ಬಾಳೇಕುಂದ್ರಿ ವೃತ್ತದಲ್ಲಿ ನಿರ್ಬಂಧಿಸಲಾಗಿದೆ.
ಸಮಾರಂಭಕ್ಕೆ ಬರುವ ಬಸ್, ಟೆಂಪೋ ಟ್ರಾವೆಲ್ಲರ್‌ಗಳಿಗೆ ಅರಮನೆ ಮೈದಾನದ ಕೃಷ್ಣ ವಿಹಾರ್ ಆವರಣ, ಸರ್ಕಸ್ ಮೈದಾನ ಹಾಗೂ ಮಾವಿನಕಾಯಿ ಮಂಡಿ ಮೈದಾನಗಳಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಿದ್ದು, ರಾಜ್ಯದ ವಿವಿಧ ಭಾಗಗಳಿಂದ ಬರುವ ವಾಹನಗಳು ಹೊರವಲಯದಲ್ಲೇ ಜನರನ್ನು ಇಳಿಸಿ ನಿಗದಿತ ಸ್ಥಳದಲ್ಲಿ ನಿಲುಗಡೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.