Advertisement

ಸಂಕಷ್ಟದಲ್ಲಿ ಮಂಗಳಮುಖೀಯರು

10:51 AM Apr 26, 2020 | Suhan S |

ಬೆಂಗಳೂರು: ದೀರ್ಘ‌ಕಾಲದ ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಮಂಗಳಮುಖೀಯರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ದಿನದ ಊಟದ ಚಿಂತೆಯ ಜತೆಗೆ ಮನೆ ಬಾಡಿಗೆ ನೀಡಲಾಗದಂತಹ ಪರಿಸ್ಥಿತಿ ಉಂಟಾಗಿದೆ.

Advertisement

ಬೆಂಗಳೂರಿನಲ್ಲಿ ಸುಮಾರು ಆರು ಸಾವಿರ ಮಂಗಳ ಮುಖೀಯರಿದ್ದಾರೆ. ಅವರೆಲ್ಲರೂ ಸಿಗ್ನಲ್‌ ಗಳಲ್ಲಿ ಬಿಕ್ಷಾಟನೆಸೇರಿದಂತೆ ಇನ್ನಿತರ ಕಾಯಕದಲ್ಲಿ ತೊಡಗಿದ್ದವರು. ಈ ವೃತ್ತಿಯಿಂದ ದಿನಕ್ಕೆ 300-  400 ರೂ. ಸಂಪಾದಿಸುತ್ತಿದ್ದರು. ಲಾಕ್‌ ಡೌನ್‌ ನಿಂದಾಗಿ ಆದಾಯವಿಲ್ಲವಾಗಿದ್ದು, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಅವಲತ್ತುಕೊಂಡಿದ್ದಾರೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ಬಾಡಿಗೆ ಕಟ್ಟಲು ಆಗುತ್ತಿಲ್ಲ. ಸರ್ಕಾರ ನೀಡಿದ ಆಹಾರದ ಕಿಟ್‌ನಲ್ಲಿ ತಿಂಗಳಿಗೆ ಸಾಕಾಗುವಷ್ಟು ವಸ್ತುಗಳೇ ಇರಲಿಲ್ಲ. ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಲಾಯಿತು. ನಂತರ ಆಹಾರ ಕಿಟ್‌ ನಲ್ಲಿ 5 ಕೆ.ಜಿ.ಅಕ್ಕಿ ನೀಡಲಾಯಿತು ಎಂದು ಮಂಗಳ ಮುಖೀ ಸೌಮ್ಯಾ ಹೇಳಿದ್ದಾರೆ. ಲೌಕ್‌ಡೌನ್‌ ಮುಗಿದರೂ ನಮ್ಮ ಬದುಕು ಸುಧಾರಿಸಲು ನಾಲ್ಕೈದು ತಿಂಗಳು ಬೇಕು. ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಂಗಳ ಮುಖೀಯರತ್ತ ಗಮನ ಹರಿಸುವ ಅಗತ್ಯವಿದೆ.

ಬೆಂಗಳೂರಿನ ಹಲವೆಡೆ ಮಂಗಳಮುಖೀಯರು ನೆಲೆಸಿದ್ದು, ಕೆಲವರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅವರ ಬಗ್ಗೆಯೂ ಸಂಬಂಧಪಟ್ಟ ಅಧಿಕಾರಿಗಳ ಗಮನ ಹರಿಸಬೇಕಾಗಿದೆ ಎಂದು ಮಂಗಳ ಮುಖೀ ಅಂಜಲಿ ಹೇಳಿದ್ದಾರೆ.

ಎರಡು ತಿಂಗಳಿಗೆ 1200 ರೂ.: ಮೈತ್ರಿಯೋಜನೆಯಡಿ ಸರ್ಕಾರ ಮಂಗಳಮುಖೀಯರಿಗೆ ಪ್ರತಿ ತಿಂಗಳ 6 ನೂರು ನೀಡುತ್ತಿದೆ. ಈಗ ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಎರಡು ತಿಂಗಳ ಹಣ ನೀಡಿದರೆ, ಎಲ್ಲಿ ಸಾಲುತ್ತದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತೆ ಅಕಾಯ್‌ ಪದ್ಮಶಾಲಿ. ಅಲ್ಲದೆ ಮೈತ್ರಿ ಯೋಜನೆಯಡಿ ಹಣ ಇನ್ನೂ ಕೆಲವು ಮಂಗಳ ಮುಖೀಯರಿಗೆ ತಲುಪಿಲ್ಲ.

Advertisement

ನಗರದಲಿ ಮಂಗಳಮುಖೀಯರ ನೆಲೆ :  ಬೆಂಗಳೂರಿನ ದಾಸರಹಳ್ಳಿ, ಯಲಹಂಕ, ಅಮೃತ ಹಳ್ಳಿ, ಹೆಬ್ಟಾಳ, ಬಾಪೂಜಿ ನಗರ, ಆರ್‌ ಪಿಸಿ ಲೇಔಟ್‌, ಕಾಮಾಕ್ಷಿ ಪಾಳ್ಯ, ಬೊಮ್ಮನಹಳ್ಳಿ, ಕೂಡ್ಲಿ ಗೇಟ್‌, ಬೈಯಪ್ಪನಹಳ್ಳಿ, ಕಾಕ್ಸ್‌ಟೌನ್‌ ಸೇರಿದಂತೆ ಇನ್ನೂ ಹಲವು ಪ್ರದೇಶಗಳಲ್ಲಿ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ. ಇವರಿಗೆಲ್ಲರಿಗೂ ಬಾಡಿಗೆದಾರರು ಬಾಡಿಗೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಸರ್ಕಾರ ನೆರವಿಗೆ ಬರಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಸರ್ಕಾರ ಈಗಾಗಲೇ ಹಲವು ಕ್ಷೇತ್ರಕ್ಕೆ ನೆರವು ನೀಡಿದೆ. ಅದೇ ರೀತಿ ಮಂಗಳ ಮುಖೀಯರತ್ತಲೂ ಸರ್ಕಾರ ಗಮನಹರಿಸಬೇಕು. ದೀರ್ಘ‌ಕಾಲದ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಂಗಳ ಮುಖೀಯರು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ಸಂಕಷ್ಟಗಳಿಗೂ ಅಧಿಕಾರಿ ವರ್ಗ ಮಿಡಿಯಬೇಕು. ಮಂಜಮ್ಮ ಜೋಗತಿ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ

 

 

-ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next