ಬೆಂಗಳೂರು :ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಟ್ರಾನ್ಸ್ ಫಾರ್ಮರ್ ಸಂಬಂಧಿತ ಅವಘಡ ತಪ್ಪಿಸುವುದಕ್ಕಾಗಿ ರಾಜ್ಯಾದ್ಯಂತ ಮೇ 5 ರಿಂದ 20 ರ ವರೆಗೆ ಟ್ರಾನ್ಸಫಾರ್ಮರ್ ನಿರ್ವಹಣಾ ಅಭಿಯಾನ ನಡೆಸಲು ಇಂಧನ ಇಲಾಖೆ ನಿರ್ಧರಿಸಿದೆ.
ಕಳೆದ ಒಂದು ತಿಂಗಳಲ್ಲಿ ನಡೆದ ಟ್ರಾನ್ಸ್ ಫಾರ್ಮರ್ ದುರಂತಗಳ ಹಿನ್ನೆಲೆಯಲ್ಲಿ ಈ ಅಭಿಯಾನ ನಡೆಸಲು ತೀರ್ಮಾನಿಸಲಾಗಿದ್ದು, ಎಲ್ಲ ಹಂತದ ಅಧಿಕಾರಿಗಳಿಗೂ ಈ ಅಭಿಯಾನದಲ್ಲಿ ಭಾಗವಹಿಸುವಂತೆ ಇಂಧನ ಸಚಿವ ವಿ.ಸುನಿಲ್ ಕುಮಾರ್ ನಿರ್ದೇಶನ ನೀಡಿದ್ದಾರೆ.
ರಾಜ್ಯದಲ್ಲಿ ಹದಿನೈದು ವರ್ಷಕ್ಕಿಂತ ಹಳೆಯ ಪರಿವರ್ತಕಗಳು ಸಾಕಷ್ಟು ಪ್ರಮಾಣದಲ್ಲಿ ಇವೆ. ಮಳೆಗಾಲದಲ್ಲಿ ಅವುಗಳು ನಿರ್ವಹಣಾ ಸಮಸ್ಯೆ ಉಂಟಾಗುತ್ತಿವೆ. ಮಳೆಗಾಲದಲ್ಲಿ ಸಿಡಿಲು ಇತ್ಯಾದಿ ಕಾರಣಗಳಿಂದ ಪರಿವರ್ತಕಗಳ ಹಾನಿ ಸಾಧ್ಯತೆ ಇದೆ. ಜತೆಗೆ ಅಧಿಕ ಲೋಡ್ ನಿಂದ ಟ್ರಾನ್ಸ್ ಫಾರ್ಮರ್ ಹಾನಿಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲು ಅಭಿಯಾನ ನಡೆಸಲಾಗುತ್ತಿದೆ.
ಅಭಿಯಾನದಲ್ಲಿ ಎಲ್ಲ ಹಂತದ ಅಧಿಕಾರಿಗಳೂ ಭಾಗಿಯಾಗಬೇಕು. ಪ್ರತಿ ದಿನ ಪರಿಶೀಲನೆ ನಡೆಸಿದ ಟ್ರಾನ್ಸ್ ಫಾರ್ಮರ್ ಗಳ ವಿವರ, ಅವುಗಳಲ್ಲಿ ಕಂಡು ಬಂದ ನ್ಯೂನ್ಯತೆ, ಯಾವ ಕಾರಣಕ್ಕಾಗಿ ತೊಂದರೆ ಕಾಣಿಸಿಕೊಂಡಿದೆ ಎಂಬ ವಿವರವನ್ನು ಕೇಂದ್ರ ಕಚೇರಿಗೆ ಪ್ರತಿ ದಿನ ಕಳುಹಿಸಿಕೊಡುವಂತೆ ಸೂಚನೆ ನೀಡಲಾಗಿದೆ. ಪ್ರತಿ ವರ್ಷವೂ ಈ ರೀತಿ ಅಭಿಯಾನ ನಡೆಸುವುದರಿಂದ ಟ್ರಾನ್ಸ್ ಫಾರ್ಮರ್ ಗಳ ಕ್ಷಮತೆ ಹೆಚ್ಚಲಿದೆ.
ಟ್ರಾನ್ಸ್ ಫಾರ್ಮರ್ ಗಳ ರಿಪೇರಿಗೆ ಇಂಧನ ಇಲಾಖೆ ಪ್ರತಿವರ್ಷ 150 ಕೋಟಿ ರೂ. ವೆಚ್ಚ ಮಾಡುತ್ತದೆ. ನಿರ್ವಹಣಾ ಕೆಲಸವನ್ನು ಕಾಲ ಕಾಲಕ್ಕೆ ನಡೆಸಿದರೆ ರಿಪೇರಿ ವೆಚ್ಚ ತಗ್ಗಿಸುವುದಕ್ಕೆ ಸಾಧ್ಯವಿದೆ. ಜತೆಗೆ ಎಲ್ಲಿ ಹೊಸ ಟ್ರಾನ್ಸ್ ಫಾರ್ಮರ್ ಗಳ ತುರ್ತು ಅಗತ್ಯವಿದೆ ಎಂಬುದನ್ನೂ ಈ ಅಭಿಯಾನದ ಮೂಲಕ ತಿಳಿದುಕೊಳ್ಳುವುದಕ್ಜೆ ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹದಿನೈದು ದಿನಗಳ ಕಾಲ ಅಭಿಯಾನ ನಡೆಸಲು ಸೂಚನೆ ನೀಡಲಾಗಿದೆ.
ನಮ್ಮ ಇಲಾಖೆಯ ಸ್ವತ್ತಿನ ಬಗ್ಗೆ ನಾವೇ ಜವಾಬ್ದಾರಿ ಹಾಗೂ ಬದ್ಧತೆ ಹೊಂದಿರಬೇಕು. ಈ ಹಿನ್ನೆಲೆಯಲ್ಲಿ ಅಭಿಯಾನ ಆಯೋಜಿಸಲಾಗಿದೆ. ಇದು 24 ಗಂಟೆಯಲ್ಲಿ ಟ್ರಾನ್ಸ್ ಫಾರ್ಮರ್ ಬದಲಾವಣೆ ಯೋಜನೆಯ ಮುಂದುವರಿದ ಭಾಗ. ಈ ದಿಶೆಯಲ್ಲಿ ನಾವು ಶೇ.80 ರಷ್ಟು ಯಶಸ್ಸು ಸಾಧಿಸಿದ್ದೇವೆ. ನಿರ್ವಹಣಾ ಸಮಸ್ಯೆ ಏಕೆ ಉದ್ಭವವಾಗುತ್ತಿದೆ ಎಂಬುದನ್ನು ಅರ್ಥೈಸಿಕೊಂಡರೆ ಪರಿಹಾರ ಕಲ್ಪಿಸುವುದು ಸುಲಭವಾಗುತ್ತದೆ.