Advertisement

ಕೆಎಚ್‌ಬಿ ಭೂ ಹಗರಣ ಎಸಿಗೆ ವರ್ಗಾವಣೆ

12:38 PM Dec 20, 2017 | |

ಮೈಸೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಡೆದಿರುವ ಭೂ ಸ್ವಾಧೀನ ಹಗರಣವನ್ನು ಸರ್ಕಾರ ಇದೀಗ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಗೆ ವರ್ಗಾಯಿಸಿದೆ.

Advertisement

ನ.7ರಂದು ಎಸಿಬಿಗೆ ವರ್ಗಾಯಿಸಲಾಗಿರುವ ಪ್ರಕರಣದ ತನಿಖೆ ಚುರುಕುಗೊಂಡಿದ್ದು, 46 ಮಂದಿ ವಿರುದ್ಧ ದಾಖಲಿಸಲಾಗಿರುವ ಎಫ್ಐಆರ್‌ ನಲ್ಲಿ ಶಾಸಕ ಜಿ.ಟಿ.ದೇವೇಗೌಡರ ಹೆಸರಿಲ್ಲ. ಆದರೆ, ಅವರ ಪುತ್ರ ಜಿ.ಡಿ.ಹರೀಶ್‌ ಗೌಡ 44ನೇ ಆರೋಪಿಯಾಗಿದ್ದಾರೆ.

ಜಿ.ಟಿ.ದೇವೇಗೌಡ ಅವರು ಕೆಎಚ್‌ಬಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮೈಸೂರು ತಾಲೂಕಿನ ಇಲವಾಲ ಹೋಬಳಿ ಗುಂಗ್ರಾಲ್‌ ಛತ್ರ, ಕಲ್ಲೂರು ನಾಗನಹಳ್ಳಿ, ಯಲಚನಹಳ್ಳಿ ಗ್ರಾಮಗಳಲ್ಲಿ ಬಡಾವಣೆ ನಿರ್ಮಾಣಕ್ಕೆ 2008 ಹಾಗೂ 2009ರಲ್ಲಿ ಭೂ ಸ್ವಾಧೀನಪಡಿಸಿಕೊಂಡಿದ್ದರು.

ಈ ವೇಳೆ ಎಕರೆಗೆ ಕನಿಷ್ಠ 8 ಲಕ್ಷದಿಂದ ಗರಿಷ್ಠ 18 ಲಕ್ಷದವರೆಗೆ ರೈತರಿಗೆ ಹಣ ನೀಡಿ ಮಧ್ಯವರ್ತಿಗಳು ಒಡಂಬಡಿಕೆ ಮಾಡಿಕೊಂಡು, ಬಳಿಕ ಕೆಎಚ್‌ಬಿಗೆ ಪ್ರತಿ ಎಕರೆಗೆ 36.50 ಲಕ್ಷ ರೂ.ಗೆ ಮಾರಾಟ ಮಾಡಿದ್ದರು. ಇದರಲ್ಲಿ ಕೆಎಚ್‌ಬಿ ಅಧ್ಯಕ್ಷರಾಗಿದ್ದ ಜಿ.ಟಿ.ದೇವೇಗೌಡ ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಈ ಪೈಕಿ 81 ಎಕರೆ ಜಮೀನು ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆಸಲಾಗಿದೆ ಎಂದು ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸಿ ವರದಿ ನೀಡುವಂತೆ ಸಿದ್ದರಾಮಯ್ಯ ಸರ್ಕಾರ ಲೋಕಾಯುಕ್ತಕ್ಕೆ ಸೂಚಿಸಿತ್ತು.

Advertisement

2015ರಲ್ಲಿ ಅಂದಿನ ಲೋಕಾಯುಕ್ತರು ತನಿಖೆ ನಡೆಸಿ ಭೂ ಖರೀದಿ ವ್ಯವಹಾರದಲ್ಲಿ ಮೇಲ್ನೋಟಕ್ಕೆ ಅವ್ಯವಹಾರ ನಡೆದಿರುವುದು ಕಂಡು ಬಂದಿದೆ ಎಂದು ವರದಿ ನೀಡಿದ್ದರು. ಆದರೆ, ಲೋಕಾಯುಕ್ತರ ವರದಿ ಮೇಲೆ ಸರ್ಕಾರ ಕ್ರಮಕ್ಕೆ ಮುಂದಾಗಲಿಲ್ಲ.

ಸರ್ಕಾರದ ಈ ಧೋರಣೆ ಪ್ರಶ್ನಿಸಿ ರೈತರಾದ ಬಸವರಾಜು, ರವಿ ಎಂಬುವವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಈ ನಡುವೆ ರಾಜ್ಯ ಸರ್ಕಾರ ಲೋಕಾಯುಕ್ತಕ್ಕೆ ಪರ್ಯಾಯವಾಗಿ ಭ್ರಷ್ಟಾಚಾರ ನಿಗ್ರಹ ದಳ ರಚಿಸಿತ್ತು. ಆದರೂ ಪ್ರಕರಣದ ತನಿಖೆ ನೆನಗುದಿಗೆ ಬಿದ್ದಿತ್ತು.

ರಾಜಕೀಯ ಆರೋಪ: ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ನೆನಗುದಿಗೆ ಬಿದ್ದಿದ್ದ ಪ್ರಕರಣವನ್ನು ತನಿಖೆಗೆ ಆದೇಶಿಸುವ ಮೂಲಕ ಸಿಎಂ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾಗಿರುವ ಜಿ.ಟಿ.ದೇವೇಗೌಡರನ್ನು ಹಣಿಯಲು ಹಗರಣ ಬಳಸಿಕೊಳ್ಳಲಾಗುತ್ತಿದೆ. ಎಫ್ಐಆರ್‌ ನಲ್ಲಿ ಜಿ.ಟಿ.ದೇವೇಗೌಡರ ಹೆಸರಿಲ್ಲದಿದ್ದರೂ ಅವರ ವಿರುದ್ಧ ರಾಜಕೀಯ ಹಗೆತನ ಸಾಧಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ನೋಟಿಸ್‌ ಜಾರಿಗೆ ಸಿದ್ಧತೆ: ಸೋಮವಾರ ಲೋಕಾಯುಕ್ತ ಪ್ರಕರಣದ ತನಿಖೆಯನ್ನು ಎಸಿಬಿಗೆ ವರ್ಗಾಯಿಸಿದೆ. ಪ್ರಕರಣ ಎಸಿಬಿಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಮೈಸೂರಿನ ಎಸಿಬಿ ಎಸ್ಪಿ ಡಾ.ಎಚ್‌.ಟಿ.ಶೇಖರ್‌, ತನಿಖೆಗೆ ಆರಂಭಿಸಲು ಸಿದ್ಧತೆ ನಡೆಸಿದ್ದು, ಕೆಎಚ್‌ಬಿ ಭೂ ಸ್ವಾಧೀನಪಡಿಸಿಕೊಂಡಿರುವ 47 ರೈತರು, ಮಧ್ಯವರ್ತಿಗಳಿಗೆ ನೋಟಿಸ್‌ ಜಾರಿ ಮಾಡಲು ಸಿದ್ಧತೆ ನಡೆಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next