ಚಿಕ್ಕಮಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳಿಗೆ ವರ್ಗಾವಣೆ
ಭಾಗ್ಯ ಅಥವಾ ಆತ್ಮಹತ್ಯೆ ಭಾಗ್ಯವನ್ನು ಕೊಡುಗೆಯಾಗಿ ನೀಡಿದೆ ಎಂದು ಮಾಜಿ ಸಚಿವರೂ ಆದ ಜಿಲ್ಲಾ ಬಿಜೆಪಿ ಅಧ್ಯಕ್ಷ, ಶಾಸಕ
ಡಿ.ಎನ್.ಜೀವರಾಜ್ ಆರೋಪಿಸಿದರು.
ಬುಧವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷ ಅಧಿಕಾರಿಗಳಿಗೆ ವರ್ಗಾವಣೆ ಶಿಕ್ಷೆ ನೀಡಿ, ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸದ ಅಧಿಕಾರಿಗಳಿಗೆ ಸರ್ಕಾರ ಮಣೆ ಹಾಕುತ್ತಿದೆ. ಚಾಮರಾಜನಗರ ಜಿಲ್ಲೆಯ ತಹಶೀಲ್ದಾರ್ ಇಂದು ಆತ್ಮಹತ್ಯೆ
ಮಾಡಿಕೊಂಡಿದ್ದಾರೆ. ಬಳ್ಳಾರಿಯ ತಹಶೀಲ್ದಾರ್ ಒಬ್ಬರ ಮೇಲೆ ಮರಳು ಲಾರಿ ಹತ್ತಿಸಿ ಸಾಯಿಸಲು ಪ್ರಯತ್ನಿಸಲಾಗಿದೆ. ರಾಜ್ಯದಲ್ಲಿ
ಉನ್ನತ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ದೂರಿದರು.
ಸ್ಥಳೀಯ ನಾಯಕರ ಕುಮ್ಮಕ್ಕಿನಿಂದ ಶೃಂಗೇರಿ, ಕೊಪ್ಪ, ಎನ್.ಆರ್.ಪುರದ ತಹಶೀಲ್ದಾರ್‌ಗಳು ಸರಿಯಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಶೃಂಗೇರಿ ತಹಶೀಲ್ದಾರ್ ಪದ್ಮನಾಭ ಶಾಸ್ತ್ರಿಗೆ ಕೊಪ್ಪ ತಹಶೀಲ್ದಾರ್ ಆಗಿ ಹೆಚ್ಚುವರಿ ಪ್ರಭಾರ ವಹಿಸಲಾಗಿದೆ. ಹಾಗೂ ಎನ್.ಆರ್.ಪುರ ತಹಶೀಲ್ದಾರ್‌ಗೆ ತರೀಕೆರೆ ಎಸಿಯಾಗಿ ಹೆಚ್ಚಿನ ಜವಾಬ್ದಾರಿಯನ್ನು ಸರ್ಕಾರ ನೀಡಿದೆ. ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರ ಕನಸಿನ ಕೂಸು 94ಸಿ ಯೋಜನೆಗೆ 2012ರ ಹಿಂದಿನ ವಾಸ ದೃಢೀಕರಣ ನೀಡುವಂತೆ ಸರ್ಕಾರ ಆದೇಶ ಮಾಡಿದೆ. ನರಸಿಂಹರಾಜಪುರದಲ್ಲಿ ಜನತೆ 2004 ಹಾಗೂ 2008ನೇ ಸಾಲಿನ ಕಂದಾಯ ಪಾವತಿಸಿದ ರಶೀದಿ ಕೊಟ್ಟರೂ ತಹಶೀಲ್ದಾರ್ 2011ರ ವಾಸದ ದಾಖಲಾತಿಯನ್ನೇ ನೀಡುವಂತೆ ಕೇಳುತ್ತಾರೆ. ಸಾರ್ವಜನಿಕರಿಗೆ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ . ದಕ್ಷ ಅಧಿಕಾರಿಗಳಿಗೆ ವರ್ಗಾವಣೆ ಶಿಕ್ಷೆ, ಬೇಜವಾಬ್ದಾರಿ ಅಧಿಕಾರಿಗಳಿಗೆ ಹೆಚ್ಚಿನ ಹೊಣೆ ಇದು ಸರ್ಕಾರದ ನೀತಿ ಎಂದರು.
ಕಂದಾಯ ಸಚಿವರು ಹಕ್ಕುಪತ್ರ ನೀಡುವಲ್ಲಿ ಶಾಸಕರು ಇಚ್ಛಾಶಕ್ತಿ ಹೊಂದಿಲ್ಲ ಎಂಬ ಹೇಳಿಕೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ತಹಶೀಲ್ದಾರ್‌ರವರಿಗೆ ಅಕ್ರಮ ಸಕ್ರಮ ಯೋಜನೆಯ ಸಭೆ ನಡೆಸುವಂತೆ ಅನೇಕ ಬಾರಿ ನೋಟಿಸ್ ನೀಡಿದ್ದರೂ ಅವರು ಸ್ಪಂದಿಸಿಲ್ಲ, ಸಭೆ ನಡೆಸುವಂತೆ ಹೇಳಿದರೆ ಬೇಜವಾಬ್ದಾರಿ ಕಾರಣಗಳನ್ನು ನೀಡುತ್ತಾರೆ. ಹೀಗಾದರೆ ಸಾಮಾನ್ಯ ಜನತೆಯ ಸಮಸ್ಯೆ ನಿವಾರಣೆ ಹೇಗೆ. ಇಂತಹ ಅಧಿಕಾರಿಗಳಿಗೆ ಸರ್ಕಾರ ರಕ್ಷಣೆ ನೀಡುತ್ತಿದೆ ಎಂದರು. ಅಕ್ರಮ ಸಕ್ರಮ ಹಾಗೂ ಸಾಗುವಳಿ ಚೀಟಿ ನೀಡುವ ಸಭೆ ನಡೆಸುವಂತೆ ತಹಶೀಲ್ದಾರ್‌ಗಳಿಗೆ ನೀಡಿದ ನೋಟಿಸ್ ಹಾಗೂ ಅವರಿಂದ ಬಂದ ಉತ್ತರ ಇವುಗಳನ್ನು ದಾಖಲೆ ಸಹಿತವಾಗಿ ಕಂದಾಯ ಸಚಿವರಿಗೆ ಹಾಗೂ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಮಣ ರೆಡ್ಡಿಯವರಿಗೆ ಸಲ್ಲಿಸಿದ್ದೇನೆ. ಈ ಬಗ್ಗೆ ಸದನದಲ್ಲಿಯೂ ಅನೇಕ ಬಾರಿ ಚರ್ಚೆ ನಡೆಸಿದ್ದೇನೆ ಆದರೆ ಇದುವರೆಗೂ ತಾವು ಸಲ್ಲಿಸಿದ ದಾಖಲೆಗಳಿಗೆ ಕಂದಾಯ ಇಲಾಖೆಯಿಂದ ಯಾವುದೇ ಪ್ರತ್ಯುತ್ತರ ಬಂದಿಲ್ಲ ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಚೈತ್ರಶ್ರೀ ಮಾಲತೇಶ್, ವಿಸ್ತಾರಕ ಯೋಜನೆಯ ಚಿಕ್ಕಮಗಳೂರು ಉಸ್ತುವಾರಿ ಎಸ್.ದತ್ತಾತ್ರಿ,
ನಗರಸಭೆ ಸದಸ್ಯ ಎಚ್.ಡಿ. ತಮ್ಮಯ್ಯ, ಜಿಲ್ಲಾ ಪಂಚಾಯತ್ ಸದಸ್ಯ ಸೋಮಶೇಖರ್, ದೇವರಾಜ್ ಶೆಟ್ಟಿ, ಟಿ.ರಾಜಶೇಖರ್
ಇದ್ದರು.