ಬೆಂಗಳೂರು: ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ಸಿಗುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಕರ ಇತ್ತೀಚಿನ ಸೇವಾ ವಿವರಗಳನ್ನು ಪರಿಶೀಲಿಸಿ ಜೂನ್ 3 ರೊಳಗೆ ಇಇಡಿಎಸ್ ತಂತ್ರಾಂಶದಲ್ಲಿ ಅಪ್‌ಡೇಟ್ ಮಾಡುವಂತೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತೆ ಬಿ. ಬಿ. ಕಾವೇರಿ ಸೂಚಿಸಿದ್ದಾರೆ.
ಪ್ರೌಢಶಾಲಾ ಮುಖ್ಯಸ್ಥರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕಚೇರಿ ಮುಖ್ಯಸ್ಥರು ಸೇವಾ ವಿವರಗಳ ಅಪ್‌ಡೇಟ್ ಮಾಡುವ ಜವಾಬ್ದಾರಿ ಹೊಂದಿರುತ್ತಾರೆ. ಒಂದು ವೇಳೆ ನಿಖರ ಸೇವಾ ವಿವರವನ್ನು ಅಪ್‌ಡೇಟ್ ಮಾಡದೇ ಹೋದರೆ ಸಂಬಂಧಪಟ್ಟ ಬಟವಾಡೆ ಅಧಿಕಾರಿಯೇ ಹೊಣೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಬಟವಾಡೆ ಅಧಿಕಾರಿಗಳು, ಶಿಕ್ಷಕರ ಸರಿಯಾದ ಕೆಜಿಐಡಿ ನಂಬರ್ ನಮೂದಾಗಿರುವುದು, ಶಿಕ್ಷಕರ ಹೆಸರು ಕ್ರಮಬದ್ಧವಾಗಿ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಇದೆಯೇ ಎಂಬುದನ್ನು, ಶಿಕ್ಷಕರ ಜನ್ಮ ದಿನಾಂಕ, ಸೇವೆಗೆ ಸೇರಿದ ದಿನಾಂಕ, ಪ್ರಸ್ತುತ ವೃಂದಕ್ಕೆ ಸೇರಿದ ದಿನಾಂಕ, ಸೇವಾ ವಿವರದಲ್ಲಿ ಯಾವುದೇ ಕಲಂ ಖಾಲಿ ಇರದಂತೆ ತುಂಬಿರುವುದು, ಅನುದಾನಿತ ಶಿಕ್ಷಕರು ಶಾಲಾ ಶಿಕ್ಷಕರು ಎಂದು ನಮೂದಾಗಿದೆಯೇ, ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪ್ರೌಢಶಾಲೆ ಶಿಕ್ಷಕರೆಂದು ನಮೂದಿಸಲಾಗಿದೆಯೇ, ಕಾರ್ಯನಿರ್ವಹಿಸುತ್ತಿರುವ ವಲಯಗಳ ಮಾಹಿತಿಯನ್ನು ನಿಖರವಾಗಿ ನೀಡಬೇಕು.
ಹಾಗೆಯೇ ಶಿಕ್ಷಕರ ಆದ್ಯತೆಗಳ ಪರಿಶೀಲನೆ, ಕಾರ್ಯನಿರ್ವಹಿಸುತ್ತಿರುವ ಶಾಲೆಯ ಮ್ಯಾಪಿಂಗ್ ಆಗಿರುವ ಬಗ್ಗೆ, ಶಿಕ್ಷಕರ ಬೋಧನಾ ವಿಷಯ ನೇಮಕಾತಿ ಆದೇಶದಂತೆ ನಮೂದಾಗಿದೆಯೇ, ಖಾಯಂಪೂರ್ಣ ಅವಧಿ ಘೋಷಣೆ ಮಾಹಿತಿ ನಮೂದಾಗಿರುವುದು, ಶಿಕ್ಷಕರ ಪತ್ನಿ ಅಥವಾ ಪತಿಯ ಮಾಹಿತಿ, ನಿವೃತ್ತಿ ಹೊಂದಿದವರನ್ನು ತಂತ್ರಾಂಶದಿಂದ ಹೊರಗೆ ಹಾಕುವುದು, ಸಸ್ಪೆಂಡ್ ಆಗಿರುವ ಶಿಕ್ಷಕರ ಮಾಹಿತಿ ಸೇವಾ ವಿವರದಲ್ಲಿ ನಮೂದಿಸುವುದು ಮುಂತಾದ ಪ್ರಮುಖ ಮಾಹಿತಿಗಳನ್ನು ಅಪ್‌ಡೇಟ್ ಮಾಡುವಂತೆ ಸೂಚಿಸಲಾಗಿದೆ.