ಬೆಂಗಳೂರು: ಚುನಾವಣಾ ನೀತಿ ಸಂಹಿತೆಯ ಮಧ್ಯೆಯೇ ಹೆಚ್ಚುವರಿ ಶಿಕ್ಷಕರು ಮತ್ತು ಸಾಮಾನ್ಯ ಶಿಕ್ಷಕರ ವರ್ಗಾವಣಾ ಪ್ರಕ್ರಿಯೆ ನಡೆಸಲು ರಾಜ್ಯದ ಮುಖ್ಯ ಕಾರ್ಯದರ್ಶಿ ನೇತೃತ್ವದ ಸ್ಕ್ರೀನಿಂಗ್ ಕಮಿಟಿಯ ಮೂಲಕ ಪ್ರಸ್ತಾವನೆ ಸಲ್ಲಿಸುವಂತೆ ಚುನಾವಣಾ ಆಯೋಗ ಹೇಳಿದೆ.
ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಅನುಮತಿ ನೀಡಬೇಕೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು.
ಈ ಮನವಿಗೆ ಪ್ರತಿಕ್ರಿಯೆ ನೀಡಿರುವ ಚುನಾವಣಾ ಆಯೋಗವು ಸ್ಕ್ರಿನಿಂಗ್ ಕಮಿಟಿ ಮೂಲಕ ಪ್ರಸ್ತಾವನೆ ಕಳುಹಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಮರು ಓಲೆ ಬರೆದಿದೆ ಎಂದು ತಿಳಿದು ಬಂದಿದೆ.
ಶಿಕ್ಷಣ ಇಲಾಖೆಯು ಸ್ಕ್ರೀನಿಂಗ್ ಕಮಿಟಿಗೆ ಮನವಿ ಮಾಡಲು ಸಿದ್ಧತೆ ಮಾಡಿಕೊಂಡಿದ್ದು ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿನ ಕಮಿಟಿಯ ಮುಂದಿನ ಸಭೆಯಲ್ಲಿ ಶಿಕ್ಷಕರ ವರ್ಗಾವಣೆಯ ಅನುಮತಿ ಕೋರಿ ಆಯೋಗಕ್ಕೆ ಪತ್ರ ಬರೆಯುವ ಬಗ್ಗೆ ತೀರ್ಮಾನವಾಗುವ ನಿರೀಕ್ಷೆಯಿದೆ.
ವರ್ಗಾವಣೆಗಾಗಿ 88,324 ಶಿಕ್ಷಕರು ಅರ್ಜಿ ಹಾಕಿದ್ದು ಪ್ರಕ್ರಿಯೆ ನಡೆಸಲು ಸಕ್ಷಮ ಪ್ರಾಧಿಕಾರ ಈಗಾಗಲೇ ಅನುಮತಿ ನೀಡಿದೆ. ವರ್ಗಗೊಳ್ಳುವ ಶಿಕ್ಷಕರು ಜೂನ್ 1 ಬಳಿಕವೇ ನಿಯುಕ್ತಿಗೊಂಡ ಸ್ಥಳಕ್ಕೆ ತೆರಳಲಿದ್ದಾರೆ ಎಂದು ಶಿಕ್ಷಣ ಇಲಾಖೆ ಈಗಾಗಲೇ ಸ್ಪಷ್ಟಪಡಿಸಿದೆ.