Advertisement

ಬಜಪೆ ಪಟ್ಟಣ ಪಂ.ಗೆ ಸರಕಾರಿ ಜಾಗ ಹಸ್ತಾಂತರಕ್ಕೆ ನಿರ್ಧಾರ

09:55 AM Apr 17, 2022 | Team Udayavani |

ಬಜಪೆ: ಕೆಂಜಾರು, ಮಳವೂರು ಮತ್ತು ಬಜಪೆಯಲ್ಲಿನ ಸರಕಾರಿ ಜಾಗವನ್ನು ಆದೇಶ ಪತ್ರಮೂಲಕ ಬಜಪೆ ಪಟ್ಟಣ ಪಂಚಾಯತ್‌ಗೆ ಹಸ್ತಾಂತರಿಸಲು ಕ್ರಮ ತೆಗೆದುಕೊಳ್ಳುವ ಬಗ್ಗೆ ಮಂಗಳೂರು ತಹಶೀ ಲ್ದಾರರ ಗ್ರಾಮ ವ್ಯಾಸ್ತವ್ಯದಲ್ಲಿ ನಿರ್ಧಾರ ತೆಗೆದು ಕೊಳ್ಳಲಾಯಿತು.

Advertisement

ಸುರತ್ಕಲ್‌ ಹೋಬಳಿಯ ಕೆಂಜಾರು ಗ್ರಾಮದ ಆಮಂತ್ರಣ ಹಾಲ್‌ನಲ್ಲಿ ಶನಿವಾರ ತಹಶೀಲ್ದಾರರ ಗ್ರಾಮವಾಸ್ತವ್ಯದಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಯಿತು.

ಮಂಗಳೂರು ತಾಲೂಕು ತಹಶೀಲ್ದಾರ ಪುರಂದರ ಹೆಗ್ಡೆ ಈ ಬಗ್ಗೆ ಮಾಹಿತಿ ನೀಡುತ್ತಾ, ಬಡವರಿಗೆ ಎಲ್ಲರಿಗೂ ಮನೆ ನಿವೇಶನ ನೀಡಲಾಗುವುದು. ಜಾಗವನ್ನು ನಿಗದಿ ಪಡಿಸಿ, ಸರ್ವೇ ಮಾಡಿ, ಗಡಿಗುರುತು ಹಾಕಿ ಮನೆ ನಿವೇಶನ ನೀಡಲು ಕ್ರಮ ತೆಗೆದು ಕೊಳ್ಳಲಾಗುವುದು ಎಂದರು.

ಒಂದೇ ಕುಟುಂಬಕ್ಕೆ 5 ಸೈಟ್‌

ಗ್ರಾಮ ವಾಸ್ತವ್ಯದಲ್ಲಿ ಕೆಂಜಾರಿನಲ್ಲಿ ಒಂದೇ ಕುಟುಂಬಕ್ಕೆ 5 ಮನೆ ನಿವೇಶನ ನೀಡಲಾಗಿದೆ. ಹಿಂದೆ ಒಂದು ಮನೆ ನಿವೇಶನವನ್ನು ಅವರು ಮಾರಿದ್ದು, ಈಗ ಅವರಿಗೆ 5 ಮನೆ ನಿವೇಶನ ನೀಡಲಾಗಿದೆ. ಈ ಬಗ್ಗೆ ಕಾನೂನು ಕ್ರಮ ತೆಗೆದುಕೊಂಡು ಅವರ ಮನೆ ನಿವೇಶನವನ್ನು ರದ್ದು ಮಾಡಬೇಕೆಂದು ತಹಶೀಲ್ದಾರರಿಗೆ ಗ್ರಾಮಸ್ಥರು ದೂರು ನೀಡಿದ್ದಾರೆ.

Advertisement

ಅಂಬೇಡ್ಕರ್‌ ಭವನ ದುರಸ್ತಿಗೆ ಅನುದಾನ

ಅಂಬೇಡ್ಕರ್‌ನಗರ ಅಂಬೇಡ್ಕರ್‌ ಭವನ ಬೀಳುವ ಸ್ಥಿತಿಯಲ್ಲಿದೆ. ಶೀಘ್ರ ತಡೆಗೋಡೆ ನಿರ್ಮಾಣ ಮಾಡಬೇಕು ಎಂಬ ಮನವಿ ಬಂತು. ಬಜಪೆ ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ ಪೂರ್ಣಕಲಾ ವೈ.ಕೆ. ಉತ್ತರಿಸಿ., ಈಗಾಗಲೇ ಈ ಕಾಮಗಾರಿಗೆ 5 ಲಕ್ಷ ರೂ. ಅನುದಾನ ಕಾಯ್ದಿರಿಸಲಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಮಂಗಳೂರು ತಾಲೂಕು ತಹಶೀಲ್ದಾರ ಪುರಂದರ ಹೆಗ್ಡೆ, ಸರಕಾರ ನೇರ ನಿಮ್ಮ ಮನೆ ಬಾಗಿಲಿಗೆ ಬಂದು ಸರಕಾರದ ಯೋಜನೆಗಳನ್ನು ತಲುಪಿಸುವ ಕಾರ್ಯಕ್ರಮ ಇದಾಗಿದೆ. ಯೋಜನೆಗಳ ಸಾರ್ಥಕತೆಯ ಬಗ್ಗೆ ತಿಳಿಯಲು ಗ್ರಾಮ ವಾಸ್ತವ್ಯ ಕಾರ್ಯಕ್ರಮ ಅಗತ್ಯ. ಅರ್ಜಿ, ಅಹವಾಲು ಸ್ವೀಕಾರ ಅದಕ್ಕೆ ಸ್ಥಳದಲ್ಲಿಯೇ ಕಾನೂನು ಮಿತಿಯೊಳಗೆ ಪರಿಹಾರ. ಗ್ರಾಮದ ಸಮಸ್ಯೆಗೆ ಅದ್ಯತೆ, ಎಲ್ಲ ಇಲಾಖಾಧಿಕಾರಿಗಳ ಭಾಗವಹಿಸಿ, ಸೌಲಭ್ಯಗಳ ಮಾಹಿತಿ, ಅದು ಸಿಕ್ಕಿಲ್ಲವಾದಲ್ಲಿ ಅ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಬಜಪೆ ಪಟ್ಟಣ ಪಂ. ಮುಖ್ಯಾಧಿಕಾರಿ ಪೂರ್ಣಕಲಾ ವೈ.ಕೆ. ಮಾಹಿತಿ ನೀಡುತ್ತಾ, ಪಟ್ಟಣ ಪಂಚಾಯತ್‌ನ ಅನುದಾನವನ್ನು ಶೇ.24.10 ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಇತರ ಬಡವರಿಗೆ ಶೇ.7.25, ಅಂಗವಿಕಲರಿಗೆ ಶೇ. 5 ಮೀಸಲಿಡಲಾಗುತ್ತದೆ. ಕ್ರಿಯಾ ಯೋಜನೆಯಲ್ಲಿರುವ ಕಾಮಗಾರಿ ಮಾತ್ರ ಮಾಡಲಾಗುತ್ತದೆ. ದಾರಿದೀಪ, ರಸ್ತೆ, ಚರಂಡಿಗಳು ಆರ್ಥಿಕ ಲಭ್ಯತೆ ಅನುಗುಣವಾಗಿ ವಿನಿಯೋಗಿಸಲಾಗುತ್ತದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಪೂಂಜ ಮಾತನಾಡಿ, ಶಿಕ್ಷಣ ಎಂಬುವುದು ಮೂಲಭೂತ ಹಕ್ಕುಗಳಲ್ಲಿ ಒಂದು. ಬಡತನದಿಂದ ಶಿಕ್ಷಣ ವಂಚಿತರಾಗಬಾದರೆಂಬ ಮುಖ್ಯ ಉದ್ದೇಶ ಸರಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಕೊರೊನಾದಿಂದ ಶಿಕ್ಷಣ ಭಾಧಿತವಾಗಿದೆ. ಈ ಸಾಲಿನ ಶೈಕ್ಷಣಿಕ ವರ್ಷ ಮೇ 15ರಿಂದ ಆರಂಭಗೊಳ್ಳಲಿದೆ. 2 ವರ್ಷಗಳ ಕಲಿಕಾ ಕೊರತೆಯನ್ನು ಇದು ತುಂಬಲಿದೆ. ಮಕ್ಕಳು ನಿರಂತರವಾಗಿ ಶಾಲೆಗೆ ಬರುವ ಬಗ್ಗೆ ಖಾತರಿ ಪೋಷಕರಲ್ಲಿ ಇರಬೇಕು ಎಂದರು.ಈ ಸಂದರ್ಭದಲ್ಲಿ 8 ಮಂದಿಗೆ ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿ ಆದೇಶ ಪತ್ರವನ್ನು ತಹಶೀಲ್ದಾರ ಪುರಂದರ ಹೆಗ್ಡೆ ವಿತರಿಸಿದರು.

ಸುರತ್ಕಲ್‌ ಹೋಬಳಿಯ ಉಪತಹಶೀಲ್ದಾರ ನವೀನ್‌ ಕುಮಾರ್‌, ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕ ಗೋಪಾಲ, ಮಳವೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಗಣೇಶ್‌ ಅರ್ಬಿ, ಕೃಷ್ಣಪ್ಪ ಪೂಜಾರಿ ಕೆಂಜಾರು ಕಾನ, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಗ್ರಾಮ ಲೆಕ್ಕಾಧಿಕಾರಿ ಉಮೇಶ್‌ ಬೆಡಸೂರ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next