ಬೆಂಗಳೂರು: “ನಮ್ಮ ಮೆಟ್ರೋ’ ಹೆಚ್ಚುವರಿ ಬೋಗಿಗಳ ಸೇರ್ಪಡೆಗೆ ಮುಹೂರ್ತ ನಿಗದಿಯಾಗಿದೆ. ಪ್ರೇಮಿಗಳ ದಿನದಂದು ಮೊದಲ ಹಂತದಲ್ಲಿ ಮೂರು ಬೋಗಿಗಳು ಬಿಇಎಂಎಲ್‌ನಿಂದ ಬಿಎಂಆರ್‌ಸಿಗೆ ಹಸ್ತಾಂತರಗೊಳ್ಳಲಿವೆ.
ಫೆ.14ರಂದು ಬೆಳಗ್ಗೆ 10.30ಕ್ಕೆ ಬಿಇಎಂಎಲ್ ಆವರಣದಲ್ಲಿ ಈ ಹೆಚ್ಚುವರಿ ಬೋಗಿಗಳು ಹಸ್ತಾಂತರಗೊಳ್ಳಲಿವೆ. ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಸಂಸದ ಪಿ.ಸಿ.ಮೋಹನ್, ಶಾಸಕರಾದ ಎಸ್.ರಘು, ಎಂ.ನಾರಾಯಣಸ್ವಾಮಿ, ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ಭಾಗವಹಿಸಲಿದ್ದಾರೆ.
ಪ್ರಯಾಣಿಕರ ದಟ್ಟಣೆ ಹಿನ್ನೆಲೆಯಲ್ಲಿ ಮೆಟ್ರೋ ರೈಲಿನ ಬೋಗಿಗಳ ಸಂಖ್ಯೆಯನ್ನು ಮೂರರಿಂದ ಆರಕ್ಕೆ ವಿಸ್ತರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) ನಿರ್ಧರಿಸಿದ್ದು, ಅದರಂತೆ 150 ಹೆಚ್ಚುವರಿ ಬೋಗಿಗಳ ತಯಾರಿಕೆಗೆ ಬಿಇಎಂಎಲ್‌ಗೆ ಬೇಡಿಕೆ ಸಲ್ಲಿಸಿತ್ತು. ಈ ಪೈಕಿ ಮೊದಲ ಹಂತವಾಗಿ ಬುಧವಾರ ಮೂರು ಬೋಗಿಗಳು ಬಿಎಂಆರ್‌ಸಿಗೆ ಹಸ್ತಾಂತರಗೊಳ್ಳಲಿವೆ.
ಮೂರು ಬೋಗಿಗಳನ್ನು ಒಳಗೊಂಡ ಮೊದಲ ಸೆಟ್ ಈಗಾಗಲೇ ಸಿದ್ಧಗೊಂಡಿದ್ದು, ಬಿಇಎಂಎಲ್‌ನ ಫ್ಯಾಕ್ಟರಿಯಲ್ಲಿ ಪರೀಕ್ಷಾ ಸಂಚಾರವನ್ನೂ ಯಶಸ್ವಿಯಾಗಿ ಪೂರೈಸಿದೆ ಎಂದು ಬಿಇಎಂಎಲ್ ತಾಂತ್ರಿಕ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸೇರ್ಪಡೆಗೊಂಡರೂ ಸದ್ಯಕ್ಕಿಲ್ಲ ಸೇವೆ: ಮೆಟ್ರೋ ಬೋಗಿಗಳು ಈಗಲೇ ಹಸ್ತಾಂತರಗೊಂಡರೂ ಪ್ರಯಾಣಿಕರ ಸೇವೆಗೆ ಮೊದಲು ಹಲವು ಹಂತಗಳನ್ನು ಅನುಸರಿಸಬೇಕಾಗುತ್ತದೆ. ಪ್ರಸ್ತುತ ಇರುವ 3 ಬೋಗಿಗಳ ರೈಲಿನ ಒಂದು ತುದಿಯನ್ನು ಬಿಡಿಸಿ, ನಡುವೆ ಈ ಮೂರು ಬೋಗಿಗಳನ್ನು ಜೋಡಿಸಬೇಕು.
ನಂತರ ಆರು ಬೋಗಿಗಳ ರೈಲು ಇಂತಿಷ್ಟು ದಿನಗಳ ಕಾಲ ಪರೀಕ್ಷಾರ್ಥ ಸಂಚಾರ ನಡೆಸಬೇಕು. ರೈಲ್ವೆ ಸುರಕ್ಷತಾ ಆಯುಕ್ತರ ಅನುಮತಿ ಪಡೆಯಬೇಕು. ಇದೆಲ್ಲದಕ್ಕೂ ಸುಮಾರು ಮೂರು ತಿಂಗಳು ಹಿಡಿಯುತ್ತದೆ. ಆದರೆ, ಮಾರ್ಚ್ ಒಳಗೇ ಇದೆಲ್ಲವನ್ನೂ ಪೂರ್ಣಗೊಳಿಸುವ ಗುರಿ ಇದೆ ಎಂದು ಬಿಎಂಆರ್‌ಸಿ ಹಿರಿಯ ಅಧಿಕಾರಿಯೊಬ್ಬರು ತಿಳಿಸುತ್ತಾರೆ.