Advertisement

ಸಮಸ್ಯೆಗೆ ಸ್ಪಂದಿಸದಿದ್ದರೆ ವರ್ಗಾವಣೆ

01:50 PM Sep 15, 2018 | |

ಇಂಡಿ: ನ್ಯಾಯ ನಿಷ್ಠೆಯಿಂದ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡುವುದಾದರೆ ಇಲ್ಲಿ ಕೆಲಸ ಮಾಡಿ, ಇಲ್ಲದಿದ್ದರೆ ಕೂಡಲೆ ಇಲ್ಲಿಂದ ಜಾಗ ಖಾಲಿ ಮಾಡಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.

Advertisement

ಶುಕ್ರವಾರ ಪ್ರವಾಸಿ ಮಂದಿರದ ಸಭಾ ಭವನದಲ್ಲಿ ನಡೆದ ಟಾಸ್ಕ್ಪೋರ್ಸ್‌ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ತಾಲೂಕನ್ನು ಎರಡನೇ ಜಿಲ್ಲೆಯನ್ನಾಗಿ ಮಾಡುವ ಗುರಿ ಹೊಂದಿದ್ದು ಆ ನಿಮಿತ್ತ ಕಾರ್ಯ ಮಾಡಬೇಕು ಎಂದು ತಾಕೀತು ಮಾಡಿದರು.

ಮುಂಗಾರು, ಹಿಂಗಾರು ಮಳೆಯಾಗದೆ ರೈತರು ಆತಂಕದಲ್ಲಿದ್ದಾರೆ. ಈಗಾಗಲೇ ಸರಕಾರ 86 ತಾಲೂಕುಗಳಿಗೆ ಬರ ಘೋಷಣೆ ಮಾಡಿದ್ದು ಅಧಿಕಾರಿಗಳು ರೈತರಿಗೆ ಸೂಕ್ತ ಪರಿಹಾರ ದೊರಕುವಂತೆ ಸರಕಾರಕ್ಕೆ ಸರಿಯಾದ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನನ್ನ ಅವಧಿಯಲ್ಲಿ ಮಹತ್ವದ ಎಲ್ಲ ಯೋಜನೆಗಳು ಅಭಿವೃದ್ಧಿ ಕಾರ್ಯಗಳು ಆಗಿವೆ. ಇಂದು ತಾಲೂಕಿನಾದ್ಯಂತ ಮುಂಗಾರು ಹಾಗೂ ಹಿಂಗಾರು ಬೆಳೆ ಸಂಪೂರ್ಣ ವಿಫಲವಾಗಿವೆ. ಕಳೆದ ವರ್ಷದಲ್ಲಿ ಅನೇಕ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದಾಗಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗಿತ್ತು. ಆದರೆ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯಿಂದ ಅಲ್ಪ ಸ್ವಲ್ಪ ಸಮಸ್ಯೆ ಪರಿಹಾರವಾಗಿದ್ದರೂ ಸಹಿತ ಹೇಳಿಕೊಳ್ಳುವಷ್ಟು ಯಶಸ್ವಿಯಾಗಿಲ್ಲ.

ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಕಾಲುವೆ ಆಧಾರಿತ ಯೋಜನೆಯಾಗಿದ್ದು ಅಧಿಕಾರಿಗಳು ವಿಶೇಷ ಗಮನ ಹರಿಸಿ ಎಂದ ಅವರು, ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಭೀಮಾ ನದಿಯಲ್ಲಿ ನೀರು ನಿಲ್ಲುವ ಸ್ಥಳದಲ್ಲಿ ಶಾಶ್ವತ ಯೋಜನೆ ಅನುಷ್ಠಾನಕ್ಕೆ ತರಲು ತ್ವರಿತವಾಗಿ ಯೋಜನೆ ಸಿದ್ಧಪಡಿಸಿ ಎಂದು ಪಿಆರ್‌ಡಿ ಅಧಿಕಾರಿ ಬಿ.ಎಫ್‌. ನಾಯ್ಕ ಅವರಿಗೆ ಸೂಚಿಸಿದರು. 

Advertisement

ಬರದ ಹಣೆ ಪಟ್ಟಿ ಕಟ್ಟಿಕೊಂಡಿರುವ ಈ ಭಾಗದ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಿ. ಕುಡಿಯುವ ನೀರಿನ ಸಮಸ್ಯೆಯಿಂದಾಗಿ ನಿಮ್ಮ ಕಚೇರಿಗೆ ಸಾಮಾನ್ಯ ವ್ಯಕ್ತಿ ಬಂದರೂ ಸಹಿತ ತಾಂತ್ರಿಕ ಕಾರಣಗಳನ್ನು ಹೇಳಬೇಡಿ. ಸರಿಯಾಗಿ ಸ್ಪಂದಿಸಿ 24 ಗಂಟೆಯಲ್ಲಿ ನೀರು ಒದಗಿಸಬೇಕು ಎಂದರು.

ಐಎಲ್‌ಸಿ ಕ್ಯಾನಲ್‌ ನೀರು ಹರಿಯುತ್ತಿಲ್ಲ ಎಂದು ರೂಗಿ ಗ್ರಾಮದ ರೈತರು ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡುವಾಗ ಅಧಿ ಕಾರಿಗಳು ಆಗಸ್ಟ್‌ 13ರೊಳಗೆ ಗಡುವು ಪಡೆದು ನೀರು ಬಿಡುತ್ತೇವೆ ಎಂದು ಹೇಳಿದ್ದು ನೀರು ಏಕೆ ಬಿಟ್ಟಿಲ್ಲ? ಸುಳ್ಳು ಹೇಳುವುದು ಅಶ್ವಾಸನೆ ಕೊಡುವುದು ರಾಜಕಾರಣಿಗಳ ಕೆಲಸ. ನೀವು ಸುಳ್ಳು ಹೇಳಿದರೆ ಸಾರ್ವಜನಿಕರು ನಂಬಿಕೆ ಯಾರ ಮೇಲೆ ಇಡಬೇಕು ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

ಕೃಷಿ ಅಧಿಕಾರಿ ಮಾದೇವಪ್ಪ ಏವೂರ ಮಾತನಾಡಿ, ಮುಂಗಾರು ಹಂಗಾಮಿನ ಬೆಳೆಗಳು ವಿಫಲವಾಗಿರುವುದರಿಂದ ಸರಕಾರಕ್ಕೆ ಪ್ರಸಕ್ತ ಸಾಲಿನಲ್ಲಿ 31.72 ಕೋಟಿ ರೂ. ಪರಿಹಾರ ಕೋರಿ ಮಾಹಿತಿ ಸಲ್ಲಿಸಲಾಗಿದೆ ಎಂದಾಗ ಶಾಸಕರು ಮಧ್ಯಪ್ರವೇಶಿಸಿ ನೋಡಿ ಹಿಂದೆ ಆಲಿಕಲ್ಲು ಮಳೆಯಾದ ಸಂದರ್ಭದಲ್ಲಿ ಕೆಲವೊಂದು ಗ್ರಾಮಗಳಿಗೆ ಮಾತ್ರ ಪರಿಹಾರ
ನೀಡಿ, ಇನ್ನು ಕೆಲವೊಂದು ಗ್ರಾಮಗಳಿಗೆ ಪರಿಹಾರ ನೀಡಿಲ್ಲ. ನಿಮ್ಮ ತಪ್ಪುಗಳಿಂದ ರೈತರಿಗೆ ಅನ್ಯಾಯ ಮಾಡಿದಂತಾಗಿದೆ. ಈ ಬಾರಿ ಹೆಚ್ಚುವರಿಯಾಗಿ ಪರಿಹಾರ ಕೋರಿ ಸರಕಾರಕ್ಕೆ ಪತ್ರ ಬರೆಯಲು ತಿಳಿಸಿದರು.

ತಾಲೂಕು ಮಟ್ಟದ ಅಧಿಕಾರಿಗಳಾದ ಪಶು ವೈದ್ಯಾಧಿಕಾರಿ ಸಿ.ಬಿ. ಕುಂಬಾರ, ತೋಟಗಾರಿಕೆ ಅಧಿಕಾರಿ ಎಸ್‌.ಎಚ್‌. ಪಾಟೀಲ, ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ, ತಾಲೂಕು ವೈದ್ಯಾಧಿಕಾರಿ ಕುಲಕರ್ಣಿ ತಮ್ಮ ಇಲಾಖೆ ಪ್ರಗತಿ ಪರಿಶೀಲನೆ ವರದಿ ನೀಡಿದರು.

ಉಪ ವಿಭಾಗಾಧಿಕಾರಿ ಡಾ| ಪಿ.ರಾಜು, ತಹಶೀಲ್ದಾರ್‌ ಸಂತೋಷ ಮ್ಯಾಗೇರಿ, ತಾಪಂ ಇಒ ವಿಜಯಕುಮಾರ ಅಜೂರ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ರಾಜಕುಮಾರ ತೋರವಿ, ಬಿಇಒ ಎಸ್‌.ಬಿ. ಬಿಂಗೇರಿ, ಹೆಸ್ಕಾಂ ಅಭಿಯಂತರ ಮೆಡೇದಾರ, ಸಣ್ಣ ನೀರಾವರಿ ಅಭಿಯಂತರ ಎಸ್‌. ಎಸ್‌. ಪಾಟೀಲ, ಪಿಡಬ್ಲೂಡಿ ಅಧಿಕಾರಿ ಕತ್ತಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next