ಬೆಂಗಳೂರು: ಸಾರಿಗೆ ಇಲಾಖೆಯ 4 ನಿಗಮಗಳ 3959 ಸಿಬಂದಿಗಳಿಗೆ ಅಂತರ್ ನಿಗಮಕ್ಕೆ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಗುರುವಾರದಿಂದಲೇ ವರ್ಗಾವಣೆ ಆದೇಶ ಮಾಡಲಾಗಿದ್ದು, ವಿವರವನ್ನು ಆನ್‌ಲೈನ್ ಮೂಲಕ ಪಡೆಯಬಹುದಾಗಿದೆ ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಹೇಳಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, 4ನಿಗಮಗಳಿಂದ ಚಾಲಕ, ನಿರ್ವಾಹಕ, ತಾಂತ್ರಿಕ ಸಿಬಂದಿ ಹಾಗೂ ಇನ್ನಿತರ ಆಡಳಿತ ಸಿಬಂದಿಯಿಂದ 18,978 ಅರ್ಜಿಗಳು ಸಲ್ಲಿಕೆಯಾಗಿದ್ದು, 14,418 ಅರ್ಜಿಗಳು ಊರ್ಜಿತಗೊಂಡಿವೆ ಎಂದು ತಿಳಿಸಿದರು.
ಬಿಎಂಟಿಸಿಯಿಂದ 8,031, ಕೆಎಸ್‌ಆರ್‌ಟಿಸಿಯಿಂದ 4,400, ಈಶಾನ್ಯ ಕರ್ನಾಟಕ ಸಾರಿಗೆಯಿಂದ 1,025 ಹಾಗೂ ವಾಯುವ್ಯ ಕರ್ನಾಟಕ ಸಾರಿಗೆಯಿಂದ 962 ಅರ್ಜಿಗಳು ಪುರಸ್ಕೃತಗೊಂಡಿದ್ದವು. ಅವುಗಳಲ್ಲಿ ಅರ್ಹತೆ ಆಧಾರದ ಮೇಲೆ 3959 ಸಿಬಂದಿಯನ್ನು ಅಂತರ್ ನಿಗಮಕ್ಕೆ ವರ್ಗಾಯಿಸಲಾಗಿದ್ದು, ಶೇಕಡಾ 10ರಷ್ಟು ಸ್ಥಾನಗಳನ್ನು ವಿಧವೆಯರು, ಆರೋಗ್ಯ ಸಮಸ್ಯೆಯುಳ್ಳವರು ಮತ್ತು ಪತಿ – ಪತ್ನಿ ಪ್ರಕರಣಗಳಿಗೆ ಮೀಸಲಿಡಲಾಗಿದೆ. ಬಿಎಂಟಿಸಿಯಿಂದ 2,348 ಸಿಬಂದಿ ವರ್ಗಾವಣೆಯಾಗಿದ್ದಾರೆ. ಆದರೆ, ಬೇರೆ ನಿಗಮದಿಂದ ಬಿಎಂಟಿಸಿಗೆ ಕೇವಲ 267 ಜನ ಸಿಬಂದಿ ವರ್ಗವಾಗಿ ಬಂದಿದ್ದಾರೆ ಎಂದು ಹೇಳಿದರು.
4 ಸಾವಿರ ಹುದ್ದೆ ಭರ್ತಿ: ಬಿಎಂಟಿಸಿಯಲ್ಲಿ ಚಾಲಕ, ನಿರ್ವಾಹಕ ಹಾಗೂ ತಾಂತ್ರಿಕ ವರ್ಗ ಸೇರಿ 4,000 ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡಲು ಶೀಘ್ರವೇ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸ ಲಾಗುವುದು. ನೇಮಕಾತಿ ಮಾಡಲು ಖಾಸಗಿ ಕಂಪೆನಿಗೆ ಜವಾಬ್ದಾರಿ ವಹಿಸಲಾಗಿತ್ತು. ಆದರೆ, ಕಂಪೆನಿ ನೇಮಕಾತಿ ಪ್ರಕ್ರಿಯೆಯಿಂದ ಹಿಂದೆ ಸರಿದಿದ್ದು, ಸಾರಿಗೆ ಇಲಾಖೆ ವತಿಯಿಂದಲೇ ಶೀಘ್ರ ನೇಮಕ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ಸ್ಪೀಡ್ ಗೌರ್ನರ್ ದರ ನಿಗದಿಯಾಗಿಲ್ಲ: ವಾಹನಗಳಿಗೆ ಸ್ಪೀಡ್ ಗೌರ್ನರ್ ಅಳವಡಿಸುವ ಕುರಿತಂತೆ ಎರಡು ಕಂಪೆನಿಗಳು ಅರ್ಹತೆ ಪಡೆದುಕೊಂಡಿದ್ದು, ದರ ನಿಗದಿ ಯಲ್ಲಿ ವ್ಯತ್ಯಾಸವಾಗಿರುವುದರಿಂದ ಯಾವುದೇ ತೀರ್ಮಾ ನವಾಗಿಲ್ಲ. ಹತ್ತು ಕಂಪೆನಿಗಳು ಅರ್ಜಿ ಹಾಕಿದ್ದರೂ ಎರಡು ಕಂಪೆನಿಗಳು ಮಾತ್ರ ಅರ್ಹವಾಗಿವೆ ಎಂದರು.