ಶ್ರೀನಿವಾಸಪುರ: ಮಾವು ವಹಿವಾಟು ಎಪಿಎಂಸಿಯಲ್ಲೇ ನಡೆಸಬೇಕೆಂದು ಬೆಳೆಗಾರರು ಹಾಗೂ ವರ್ತಕರು ಸರ್ಕಾರವನ್ನು ಒತ್ತಾಯಿಸಿ ಪಟ್ಟಣದ ತಾಲೂಕು ಕಚೇರಿ ಮುಂದೆ ಪ್ರತಿಭಟಿಸಿದರು. ಎಪಿಎಂಸಿ ಯಾರ್ಡ್‌ನಲ್ಲಿ ಮಾವು ವಹಿವಾಟು ಬೇಡ ಎಂದು ಕೆಲವರು ತಮ್ಮ ಸ್ವಂತ ಲಾಭಕ್ಕೋಸ್ಕರ ರೈತರನ್ನು ಎತ್ತಿಕಟ್ಟಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ.
ಆದರೆ, ಇದನ್ನೇ ನಂಬಿ ಜೀವನ ನಡೆಸುವ ಮಂದಿಗೆ ಕಷ್ಟವಾಗಿದೆ. ಹೀಗಾಗಿ ಮಾವು ವಹಿವಾಟು ಎಪಿಎಂಸಿ ಪ್ರಾಂಗಣದಲ್ಲಿ ನಡೆಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಮಾವು ಬೆಳೆಗಾರರು ಮಾತನಾಡಿ, ಈಗಾಗಲೇ ಕೊವಿಡ್-19 ಹೆಸರಿನಲ್ಲಿ ಟೊಮೆಟೋ ಬೆಳೆದ ರೈತರು ಬೆಲೆಯಿಲ್ಲದೆ ಕೋಟ್ಯಂತರ ರೂ. ನಷ್ಟ ಅನುಭವಿಸಿದ್ದಾರೆ.
ಅದೇ ಪರಿಸ್ಥಿತಿ ಮಾವು ಬೆಳೆಗಾರರದ್ದು ಆಗಿದೆ. ಕೊರೊನಾ ಹೆಸರಲ್ಲಿ ಕೆಲವು ದಲ್ಲಾಳಿಗಳು ಹಾಗೂ ಇತರೆ ಸಂಘ ಸಂಸ್ಥೆಗಳ ಕಾರ್ಯಕರ್ತರು ಎಪಿಎಂಸಿನಲ್ಲಿ ಮಾವು ವಹಿವಾಟು ನಡೆಯುವುದಿಲ್ಲ ಎಂದು ಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು. ನೆರೆಯ ಆಂಧ್ರ, ತಮಿಳುನಾಡು, ತೆಲಂಗಾಣ ಸರ್ಕಾರ ಮಾವು ಬೆಳೆಗಾರರಿಗೆ ಎಪಿಎಂಸಿ ಮತ್ತು ಹಣ್ಣಿನ ಮಾರುಕಟ್ಟೆಗಳಲ್ಲಿ ಸ್ಪರ್ಧಾತ್ಮಕ ದರಗಳಿಗೆ ಮಾವು ಮಾರಾಟ ಮಾಡಿಕೊಳ್ಳಲು ಅನುಕೂಲ ಮಾಡಿಕೊಟ್ಟಿವೆ.
ಅದರಂತೆ ನಮಗೂ ಅವಕಾಶ ನೀಡಲು ಮನವಿ ಮಾಡಿದರು. ಮನವಿ ಸ್ವೀಕರಿಸಿದ ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್, ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದರು. ಮಾವು ಬೆಳೆಗಾರರಾದ ವೆಂಕಟಾಪುರ ವಿ.ಎನ್.ನಾರಾ ಯಣಸ್ವಾಮಿ, ಕಲ್ಲೂರು ಕೆ.ಕೆ.ಮಂಜು, ದಾಸರ ತಿಮ್ಮನಹಳ್ಳಿ ಶ್ರೀರಾಮರೆಡ್ಡಿ, ಒಳಗೇರನಹಳ್ಳಿ ನಟರಾಜ್, ಪಾತಪಲ್ಲಿ ಮಂಜುನಾಥರೆಡ್ಡಿ, ಖಾಸಿಂಗಡ್ಡ ಮುನೀರ್, ಮಿಲಿó ಮಂಜು, ಶೆಟ್ಟಿಪಲ್ಲಿ ಗೋಪಾಲಕೃಷ್ಣ, ದಿಗುವಪಲ್ಲಿ ಡಿ.ವಿ.ನಾರಾ ಯಣಸ್ವಾಮಿ, ಸಾಂಪಲ್ಲಿ ಚೌಡರೆಡ್ಡಿ, ಕೊಟ್ರಗೂಳಿ ಶ್ರೀರಾಮರೆಡ್ಡಿ, ಸುರೇಶ್, ವೆಂಕಟರವಣ ಇದ್ದರು.