ಕಾಸರಗೋಡು: ರಾಜ್ಯದ ಅಧಿಕಾರ ವ್ಯಾಪ್ತಿಯಲ್ಲಿರುವ 12 ನಾಟಿಕಲ್ ಮೈಲ್ ಪ್ರದೇಶದಲ್ಲಿ ಜೂ.9 ಮಧ್ಯರಾತ್ರಿಯಿಂದ ಜು.31ರ ವರೆಗಿನ 52 ದಿನಗಳಲ್ಲಿ ಟ್ರಾಲಿಂಗ್ ನಿಷೇಧ ಏರ್ಪಡಿಸಲಾಗಿದೆ.
ಈ ಆದೇಶವನ್ನು ಕಡ್ಡಾಯವಾಗಿ ಪಾಲಿಸುವಂತೆ ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತಿಳಿಸಲಾಗಿದೆ.
ಹೆಚ್ಚುವರಿ ದಂಡನಾಧಿಕಾರಿ ಸಿ.ಬಿಜು ಅಧ್ಯಕ್ಷತೆ ವಹಿಸಿದ್ದರು. ಮೀನುಗಾರಿಕೆ ಸಹಾಯಕ ನಿರ್ದೇಶಕಿ ಕೆ.ಅಜಿತಾ ವರದಿ ವಾಚಿಸಿದರು. ಮೀನುಗಾರರ ಮತ್ತು ಅವರ ದೋಣಿಗಳ ಸಂರಕ್ಷಣೆಯ ನಿಟ್ಟಿನಲ್ಲಿ ಟ್ರಾಲಿಂಗ್ ನಿಷೇಧ ಕಡ್ಡಾಯವಾಗಿ ಪಾಲಿಸುವಂತೆ ಸಭೆ ತಿಳಿಸಿದೆ. ಟ್ರಾಲಿಂಗ್ ನಿಷೇಧದ ಹಿನ್ನೆಲೆಯಲ್ಲಿ ಕಾಂಞಂಗಾಡ್ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಾರ್ಯಾಲಯದಲ್ಲಿ 24 ತಾಸು ಚಟುವಟಿಕೆ ನಡೆಸುವ ನಿಯಂತ್ರಣ ಕೊಠಡಿ ಆರಂಭಿಸಲಾಗಿದೆ. ಸಂಖ್ಯೆ: 04672202537.
ಮಾನ್ಸೂನ್ ಕಾಲ ಮೀನುಗಳ ಸಂತಾನಾ ಭಿವೃದ್ಧಿಯ ಅವಧಿಯಾದುದರಿಂದ, ಮತ್ಸ್ಯ ಸಂಪತ್ತಿನ ಸಂರಕ್ಷಣೆ ಎಂಬ ದೃಷ್ಟಿಯಿಂದ ಟ್ರಾಲಿಂಗ್ ನಿಷೇಧ ನಡೆಸಲಾಗುತ್ತದೆ. ಈ ಅವಧಿಯಲ್ಲಿ ಕರಾವಳಿ ಪ್ರದೇಶಗಳ ಪೆಟ್ರೋಲ್ ಪಂಪ್‌ಗ್ಳನ್ನು ಮುಚ್ಚಲು ಆದೇಶ ನೀಡಲಾಗಿದೆ.
ಇತರ ರಾಜ್ಯಗಳ ಯಾಂತ್ರಿಕ ದೋಣಿಗಳೂ ಇಲ್ಲಿಂದ ತೆರಳುವಂತೆ ಆದೇಶ ನೀಡಲಾಗಿದೆ. ಟ್ರಾಲಿಂಗ್ ನಿಷೇಧ ಕಾಯಿದೆ ಕೆ.ಎಂ.ಎಫ್.ಆರ್. ಆ್ಯಕ್ಟ್ ಜಿಲ್ಲೆಯಲ್ಲಿ ಪರಿಣಾ ಮಕಾರಿಯಾಗಿ ಜಾರಿಗೊಳ್ಳಲು ಎಲ್ಲರ ಬೆಂಬಲ ಕೋರಲಾಗಿದೆ. ರಾತ್ರಿ ಕಾಲದ ಮೀನುಗಾರಿಕೆ ನಿಷೇಧಿಸಲಾಗುವುದು. ಸದಸ್ಯರಿಗೆ ಮೂರು ಕಂತುಗಳಲ್ಲಿ ಆರ್ಥಿಕ ಸಹಾಯ ವಿತರಿಸಲಾಗುವುದು.
ಕರಾವಳಿ ಪೊಲೀಸರು, ಮೀನುಗಾರಿಕೆ ಇಲಾಖೆ ಟ್ರಾಲಿಂಗ್ ನಿಷೇಧ ಬಿಗಿಗೊ ಳಿಸುವರು. ಗೋವಾದಲ್ಲಿ ವಿಶೇಷ ತರಬೇತಿ ಪಡೆದ 10ಮಂದಿ ರಕ್ಷಣೆಗಾರರನ್ನು ಟ್ರಾಲಿಂಗ್ ನಿಷೇಧದ ಅವಧಿಯಲ್ಲಿ ಸಂರಕ್ಷಣೆಗಾಗಿ ಬಳಸಿಕೊಳ್ಳಲಾಗುವುದು ಎಂದು ಸಭೆ ತಿಳಿಸಿದೆ.