ದಾವಣಗೆರೆ: ಶಿಕ್ಷಣ ಇಲಾಖೆ ಮುಂದಿನ ಶೈಕ್ಷಣಿಕ ಸಾಲಿನಿಂದ “ಕಲಿಕಾ ಚೇತರಿಕೆ’ ಕಾರ್ಯಕ್ರಮ ಅನುಷ್ಠಾನಗೊಳಿಸಲು ಭರದ ಸಿದ್ಧತೆ ಮಾಡಿಕೊಳ್ಳುತ್ತಿದ್ದು ಇದರಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಈ ಬಾರಿ “ಬೇಸಿಗೆ ರಜೆಯ ನೆಮ್ಮದಿ’ ಇಲ್ಲದಂತಾಗಿದೆ.
ಕೊರೊನಾ ಕಾರಣದಿಂದ ಕಳೆದೆರಡು ವರ್ಷ ಬೇಸಿಗೆ ರಜಾ ಅವಧಿಯಲ್ಲಿ ಎಲ್ಲಿಯೂ ಯಾರಿಗೂ ಮುಕ್ತವಾಗಿ ಪ್ರವಾಸ ಕೈಗೊಳ್ಳಲಾಗಿಲ್ಲ. ಇದಕ್ಕೆ ಶಿಕ್ಷಕ ವರ್ಗವೂ ಹೊರತಾಗಿಲ್ಲ. ಈ ಸಲದ ರಜೆಯಲ್ಲಾದರೂ ಮಕ್ಕಳು, ಕುಟುಂಬಸ್ಥರು, ಬಂಧು, ಸ್ನೇಹಿತರೊಂದಿಗೆ ಪ್ರವಾಸ ಕೈಗೊಳ್ಳಬೇಕೆಂದುಕೊಂಡ ಶಿಕ್ಷಕರ ಯೋಜನೆಗೆ “ಕಲಿಕಾ ಚೇತರಿಕೆ’ ತರಬೇತಿ ತಣ್ಣೀರೆರಚಿದಂತಾಗಿದೆ.
ಶಿಕ್ಷಣ ಇಲಾಖೆ ಹಮ್ಮಿಕೊಂಡ ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕಾಗಿ ಇಲಾಖೆ ಈ ವರ್ಷ 15 ದಿನ ಮೊದಲೇ ಶೈಕ್ಷಣಿಕ ವರ್ಷ ಆರಂಭಿಸಲು ನಿರ್ಧರಿಸಿದೆ. ಶಾಲಾ ರಜೆಗೂ ಮುನ್ನವೇ ರಾಜ್ಯ ಮಟ್ಟದಲ್ಲಿ ಉಪನಿರ್ದೇಶಕರು (ಅಭಿವೃದ್ಧಿ ಮತ್ತು ಆಡಳಿತ), ಡಯಟ್‌ನ ಕಲಿಕಾ ಚೇತರಿಕೆ ನೋಡಲ್ ಅಧಿಕಾರಿಗಳಿಗೆ, ಶಾಲಾ ಶಿಕ್ಷಕರ ಸಂಘಗಳ ರಾಜ್ಯ ಪದಾಧಿಕಾರಿಗಳು ಹಾಗೂ ಜಿಲ್ಲಾ ಪದಾಧಿಕಾರಿಗಳಿಗೆ, ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ನೀಡಲಾಗಿದೆ. ಆದರೆ ಈಗಿನ ಶಾಲಾ ರಜೆ ಅವಧಿಯಲ್ಲಿ ಜಿಲ್ಲಾ ಹಂತ ಹಾಗೂ ಬ್ಲಾಕ್ ಹಂತದ ತರಬೇತಿ ನಡೆಸಲು ಮುಂದಾಗಿರುವುದು ರಜೆಯ ಮೂಡ್‌ನಲ್ಲಿದ್ದ ಶಿಕ್ಷಕರಿಗೆ ನಿರಾಸೆ ಮೂಡಿಸಿದೆ.
ರಾಜ್ಯದ ಪತ್ರಿಯೊಂದು ಜಿಲ್ಲೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರಿಗೆ ಮೇ 10ರೊಳಗೆ ತರಬೇತಿ ನೀಡಲು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಯೋಜನೆ ಹಾಕಿಕೊಂಡಿದೆ. 40 ಶಿಕ್ಷಕರನ್ನು ಒಂದು ತಂಡ ಮಾಡಿ ಸಂಪನ್ಮೂಲ ವ್ಯಕ್ತಿಗಳ ಮೂಲಕ ಎರಡು ದಿನಗಳ ತರಬೇತಿ ನೀಡಲು ಇಲಾಖೆ ಏ.13ರಂದು ಸ್ಪಷ್ಟ ಮಾರ್ಗದರ್ಶಿ ನಿರ್ದೇಶನವನ್ನೂ ನೀಡಿದೆ. ತರಬೇತಿ ಕೇವಲ ಎರಡೇ ದಿನಗಳದ್ದಾದರೂ ಯಾವ ಶಿಕ್ಷಕರಿಗೆ ಯಾವ ದಿನ ತರಬೇತಿ ಬರುತ್ತದೆ ಎಂಬುದು ಇನ್ನಷ್ಟೇ ತರಬೇತಿ ದಿನಾಂಕ ಪಟ್ಟಿ ಸಿದ್ಧವಾಗಬೇಕಿದೆ. ಆದ್ದರಿಂದ ಶಿಕ್ಷಕರು ರಜೆಯ ನೆಮ್ಮದಿ ಇಲ್ಲದೇ ತರಬೇತಿಯ ದಿನಾಂಕದ ನಿರೀಕ್ಷೆಯಲ್ಲೇ ದಿನ ಕಳೆಯುವಂತಾಗಿದೆ.
ತರಬೇತಿ ದಿನಾಂಕವಾದರೂ ತಕ್ಷಣ ನಿಗದಿಪಡಿಸಿದರೆ ಆ ದಿನಾಂಕ ಬಿಟ್ಟು ತಮ್ಮ ರಜೆಯ ವೇಳಾಪಟ್ಟಿ ಹಾಕಿಕೊಳ್ಳಬಹುದು ಎಂದು ಕೆಲ ಶಿಕ್ಷಕರು ಅಪೇಕ್ಷಿಸಿದರೆ, ಇನ್ನು ಕೆಲವು ಶಿಕ್ಷಕರು ಶಾಲಾ ವೇಳೆಯಲ್ಲೇ ಮಾಡಿದರೆ ಒಳಿತು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮತ್ತೆ ಕೆಲವರು ಶಾಲಾ ಪುನಾರಂಭದ ಕೊನೆಯ ಎರಡು ದಿನ ತರಬೇತಿ ದಿನಾಂಕ ನಿಗದಿಪಡಿಸಿದರೆ ಅಲ್ಲಿವರೆಗಾದರೂ ನೆಮ್ಮದಿಯಿಂದ ರಜೆ ಕಳೆಯಬಹುದು ಎನ್ನುತ್ತಿದ್ದಾರೆ.
ಕಲಿಕಾ ಚೇತರಿಕೆ ಕಾರ್ಯಕ್ರಮ ಅನುಷ್ಠಾನಕ್ಕಾಗಿ ಶಿಕ್ಷಕರಿಗೆ ಅಗತ್ಯ ತರಬೇತಿಯನ್ನು ಶಾಲಾ ಅವಧಿಯಲ್ಲೇ ನೀಡಬೇಕಿತ್ತು. ರಜಾ ದಿನದ ತರಬೇತಿಯಲ್ಲಿ ಶಿಕ್ಷಕರು ದೈಹಿಕವಾಗಿ ಭಾಗವಹಿಸಿದರೂ ಮಾನಸಿಕವಾಗಿ ಖುಷಿಯಾಗಿ ಭಾಗವಹಿಸುವುದಿಲ್ಲ. ಈ ವರ್ಷ 15 ದಿನ ಮೊದಲೇ ಶಾಲೆ ಪುನಾರಂಭ ಮಾಡುವ ಜತೆಗೆ ರಜೆಯಲ್ಲಿಯೇ ತರಬೇತಿಯನ್ನೂ ಹಮ್ಮಿಕೊಂಡಿರುವುದು ಸರಿಯಲ್ಲ. ಇದರಿಂದ ಶಿಕ್ಷಕರಿಗೆ ರಜೆ ಇದ್ದೂ ಇಲ್ಲದಂತಾಗುತ್ತದೆ. ●
ಹೆಸರು ಹೇಳಲಿಚ್ಛಿಸದ ಶಿಕ್ಷಕ
ಇದು ಇಡೀ ರಾಜ್ಯದಲ್ಲಿರುವ ಎಲ್ಲ ಶಿಕ್ಷಕರ ಸಮಸ್ಯೆ. ಮೇ 10ರೊಳಗೆ ಎಲ್ಲ ಶಿಕ್ಷಕರಿಗೆ ತರಬೇತಿ ನೀಡಲು ಡಯಟ್‌ನವರು ಯೋಜನೆ ಹಾಕಿಕೊಂಡಿದ್ದಾರೆ. ಇದರಿಂದ ತಮ್ಮ ಊರಿಗೆ, ಪ್ರವಾಸಕ್ಕೆ ತೆರಳಿರುವ ಶಿಕ್ಷಕರಿಗೆ, ತೆರಳಲು ಯೋಜನೆ ಹಾಕಿಕೊಂಡಿರುವ ಶಿಕ್ಷಕರಿಗೆ ತೊಂದರೆಯಾಗುತ್ತದೆ. ●
ರವಿ ಗೋಣೆಪ್ಪನವರ, ಜಿಲ್ಲಾ ಕಾರ್ಯದರ್ಶಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಹಾವೇರಿ
–ಎಚ್.ಕೆ. ನಟರಾಜ