Advertisement

ಮಹಿಳೆಯರ ಸಂರಕ್ಷಣೆ ಕುರಿತು ತರಬೇತಿ

03:10 PM Jan 20, 2018 | |

ದರ್ಬೆ : ಈಗಿನ ಸಮಾಜದಲ್ಲಿ ಮಕ್ಕಳಿಗೆ ತಮ್ಮ ತಂದೆ -ತಾಯಿಯರ ಮೇಲೆ ಇರುವ ನಂಬಿಕೆ ಬಹಳಷ್ಟು ಕಡಿಮೆಯಾಗಿದೆ. ಮಕ್ಕಳು ತಮ್ಮ ವೈಯಕ್ತಿಕ ವಿಚಾರಗಳನ್ನು ಹೆತ್ತವರೊಂದಿಗೆ ತಿಳಿಸುವುದನ್ನು ಬಿಟ್ಟು ಸ್ನೇಹಿತರೊಂದಿಗೆ ಹಂಚಿಕೊಳ್ಳುವುದರಲ್ಲಿಯೇ ಇಷ್ಟ ಪಡುತ್ತಾರೆ ಎಂದು ಸ್ವರಕ್ಷ ಫಾರ್‌ ವಿಮೆನ್‌ ಟ್ರಸ್ಟ್‌ನ ಸಿಇಒ ಕಾರ್ತಿಕ್‌ ಎಸ್‌. ಕಟೀಲು ಹೇಳಿದರು.

Advertisement

ಅವರು ಸಂತ ಫಿಲೋಮಿನಾ ಕಾಲೇಜಿನ ವಜ್ರ ಮಹೋತ್ಸವ ಆಚರಣೆಯ ಅಂಗವಾಗಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮಹಿಳಾ ಸಬಲೀಕರಣ ಘಟಕವು ಮಹಿಳೆಯರ ಸ್ವರಕ್ಷಣೆ ಕುರಿತು ಆಯೋಜಿಸಿದ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು.

ವಿದ್ಯುನ್ಮಾನ ಯುಗದಲ್ಲಿ ಮಹಿಳೆಯರು ತಮ್ಮ ಫೋಟೋಗಳನ್ನು ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ಗ್ಳಂತಹ ಜಾಲತಾಣಗಳಲ್ಲಿ ಅಪ್‌ ಲೋಡ್‌ ಮಾಡುವುದರಲ್ಲಿ ಬಹಳಷ್ಟು ಆಸಕ್ತಿ ಹೊಂದಿರುತ್ತಾರೆ. ಇದು ಕೆಲವೊಂದು ಸಂದರ್ಭದಲ್ಲಿ ಅಪಾಯಗಳಿಗೆ ಆಹ್ವಾನ ನೀಡಿದಂತೆ ಆಗುತ್ತದೆ ಎಂದು ಹೇಳಿದರು.

ಸಂಕೋಚ ಬೇಡ
ಮಹಿಳೆಯರು ಜನಜಂಗುಳಿ ಇರುವ ಪ್ರದೇಶದಲ್ಲಿ ಸಣ್ಣ ಪ್ರಮಾಣದ ದೌರ್ಜನ್ಯವನ್ನು ಅನುಭವಿಸಿದರೆ, ನಿರ್ಜನ ಪ್ರದೇಶದಲ್ಲಿ ದೊಡ್ಡ ಮಟ್ಟಿನ ದೌರ್ಜನ್ಯವನ್ನು ಅನುಭವಿಸುವುದನ್ನು ಕಾಣುತ್ತೇವೆ. ದೌರ್ಜನ್ಯಕ್ಕೆ ಒಳಗಾದಾಗ ಯಾವುದೇ ಸಂಕೋಚವಿಲ್ಲದೆ ಬಿಚ್ಚು ಮನಸ್ಸಿನಿಂದ ಹೆತ್ತವರೊಂದಿಗೆ, ಶಿಕ್ಷಕರೊಂದಿಗೆ ಅಥವಾ ಆರಕ್ಷಕ ಇಲಾಖೆಗೆ ತತ್‌ಕ್ಷಣ ಮಾಹಿತಿ ನೀಡುವಲ್ಲಿ ಹಿಂಜರಿಯಬಾರದು. ದೌರ್ಜನ್ಯದಂತಹ ಪರಿಸ್ಥಿತಿ ಎದುರಾದಾಗ ಶಾಂತಿಯನ್ನು ಕಾಪಾಡುವುದು, ಚುರುಕುತನದಿಂದ ಇರುವುದು ಬಹಳ ಮುಖ್ಯ ಎಂದು ಹೇಳಿ, ಸ್ವರಕ್ಷಣೆಯ ವಿವಿಧ ವಿಧಾನಗಳ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸಿದರು.

ಬಾಂಧವ್ಯ ನಿರ್ಮಾಣವಾಗಲಿ
ಅಧ್ಯಕ್ಷತೆ ವಹಿಸಿದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ವಂ| ಡಾ| ಆ್ಯಂಟನಿ ಪ್ರಕಾಶ್‌ ಮೊಂತೇರೊ ಮಾತನಾಡಿ, ನಮ್ಮ ಪ್ರಾಚೀನ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನವನ್ನು ಕಲ್ಪಿಸಲಾಗಿದೆ. ನಮ್ಮ ಸಮಾಜದಲ್ಲಿ ಸ್ತ್ರೀ -ಪುರುಷರು ಎನ್ನುವ ಯಾವುದೇ ತಾರತಮ್ಯವಿಲ್ಲದೆ ಪರಸ್ಪರ ಉತ್ತಮ ಬಾಂಧವ್ಯ ನಿರ್ಮಾಣವಾಗಬೇಕು. ಮಹಿಳೆಯರು ದೌರ್ಜನ್ಯದಂತಹ ಕಠಿಣ ಪರಿಸ್ಥಿತಿ ಬಂದಾಗ ಧೈರ್ಯಗುಂದದೆ, ಎದುರಿಸುವ ಶಕ್ತಿ ಸಾಮರ್ಥ್ಯವನ್ನು ಹೊಂದಬೇಕು. ಮಹಿಳೆಯರು ತಾವು ಕೈಗೊಳ್ಳುವ ಕೆಲಸಗಳಲ್ಲಿ ಆತ್ಮವಿಶ್ವಾಸ, ಕ್ರಿಯಾಶೀಲತೆ, ರಚನಾತ್ಮಕತೆ ಮುಂತಾದವುಗಳನ್ನು ಅಳವಡಿಸಿಕೊಂಡಾಗ ಯಶಸ್ಸನ್ನು ಕಾಣಬಹುದು ಎಂದು ಹೇಳಿದರು.

Advertisement

ಮಹಿಳಾ ಸಬಲೀಕರಣ ಘಟಕದ ಸಂಯೋಜಕಿ ಶ್ರೀಮಣಿ ಸ್ವಾಗತಿಸಿ, ಸಹ ಸಂಯೋಜಕಿ ನಮ್ರತಾ ಜಯರಾಮ್‌ ಶೆಣೈ ವಂದಿಸಿದರು. ವಿದ್ಯಾರ್ಥಿನಿ ಅಕ್ಷತಾ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next