ಚನ್ನರಾಯಪಟ್ಟಣ: ಶಿಕ್ಷಕರ ಬೋಧನಾ ಸಾಮರ್ಥ್ಯ ಉತ್ತಮ ಪಡಿಸಲು ಇಲಾಖೆ ಮೇಲಧಿಕಾರಿಗಳು ಆಗಾಗ್ಗೆ ಶಿಕ್ಷಕರಿಗೆ ಗುಣಮಟ್ಟದ ತರಬೇತಿ ನೀಡಲು ಮುಂದಾಗಬೇಕು ಎಂದು ಶಾಸಕ ಸಿ.ಎನ್ ಬಾಲಕೃಷ್ಣ ಸಲಹೆ ನೀಡಿದರು. ಪಟ್ಟಣದ ಹೊರವಲಯದಲ್ಲಿ ಮಾರನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಚಿಗುರು ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನವೋದಯ ಮಾದರಿ ಶಿಕ್ಷಣ ಅವಶ್ಯಕ: ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡುವ ಶಿಕ್ಷಕರಿಗೂ ಕಾಲ ಕಾಲಕ್ಕೆ ತಕ್ಕಂತೆ ತರಬೇತಿ ಅಗತ್ಯವಿದೆ. ಸ್ಫರ್ಧಾತ್ಮಕ ಹಾಗೂ ವೈಜ್ಞಾನಿಕ ಯುಗದಲ್ಲಿ ಹಿಂದುಳಿದ ಗ್ರಾಮೀಣ ವಿದ್ಯಾರ್ಥಿಗಳ ಸಾಧನೆಗೆ ಭದ್ರ ತಳಹದಿ ಹಾಕಲು ಹಾಗೂ ಖಾಸಗಿ ಶಾಲಾ ವಿದ್ಯಾರ್ಥಿಗಳೊಂದಿ ಸ್ಪರ್ಧಿಸಲು ಕೇಂದ್ರೀಯ ನವೋದಯ ಮಾದರಿ ಶಿಕ್ಷಣ ತಾಲೂಕಿಗೆ ಅವಶ್ಯಕತೆ ಇದೆ ಎಂದರು.
ಪ್ರಮಾಣಿಕತೆಯಿಂದ ಕಾರ್ಯ ನಿರ್ವಹಿಸಿ: ಮಕ್ಕಳ ಉನ್ನತ ಮಟ್ಟಕ್ಕೆ ಭವಿಷ್ಯ ರೂಪಿಸುವುದು ಪ್ರತಿಯೊಬ್ಬ ಶಿಕ್ಷಕರ ಕರ್ತವ್ಯವಾಗಿದೆ, ವಿದ್ಯಾರ್ಥಿಗಳಿಗೆ ಸಂಸ್ಕಾರ ಕಲಿಸಿ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಶ್ರದ್ಧೆಯಿಂದ ವ್ಯಾಸಂಗ ಮಾಡಬೇಕು. ಶಿಕ್ಷಕರು ತಮ್ಮ ವೃತ್ತಿಯನ್ನು ಪ್ರಾಮಾಣಿಕವಾಗಿ ಮಾಡಿದರೆ ಈ ಸಮಾಜದ ಅಂಕುಗಳನ್ನು ತಿದ್ದ ಬಹುದಾಗಿದೆ. ಪ್ರತಿಯೊಬ್ಬರಿಗೂ ಗುರುವಿನ ಮಾರ್ಗದರ್ಶನ ಅಗತ್ಯವಿದೆ ಇದನ್ನು ಅರಿತು ಶಿಕ್ಷಕರು ತಮ್ಮ ಶಿಷ್ಯಂದಿರ ಬಾಳಿಗೆ ಬೆಳಕಾಗುವ ರೀತಿಯಲ್ಲಿ ಅವರನ್ನು ತಿದ್ದಿ ತೀಡಬೇಕು ಎಂದು ಹೇಳಿದರು.
ಶೀಘ್ರದಲ್ಲೇ ಕ್ರಮ: ಪಟ್ಟಣದ ಹೊರಭಾಗದಲ್ಲಿ ವಸತಿ ಶಾಲೆ ಇರುವುದರಿಂದ ಹೈಮಾಸ್ಟ್ ದೀಪ ಹಾಗೂ ಸೋಲಾರ್ ವಿದ್ಯುತ್ ದೀಪಗಳನ್ನು ಅಳವಡಿಸಲು ಕ್ರಮ ವಹಿಸುತ್ತೇನೆ, ಶಾಲೆಯ ಅಭಿವೃದ್ಧಿ ದೃಷ್ಟಿಯಿಂದ ಆಗಬೇಕಿರುವ ಕೆಲಸವನ್ನು ಶಿಕ್ಷಕರು ತಮ್ಮ ಗಮನಕ್ಕೆ ತಂದರೆ ಅದಕ್ಕೆ ಪೂರಕವಾಗಿ ಸ್ಪಂದಿಸುವುದಲ್ಲದೆ ಶೀಘ್ರದಲ್ಲಿ ಕ್ರಮ ವಹಿಸುತ್ತೇನೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಎನ್.ಪುಟ್ಟಸ್ವಾಮಿಗೌಡ, ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಸ್ವಾಮಿ, ಸದಸ್ಯ ಮಂಜುನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಂಜಮ್ಮ, ತಹಶೀಲ್ದಾರ್ ಜೆ.ಬಿ.ಮಾರುತಿ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ಜಿಲ್ಲಾಧಿಕಾರಿ ಹರ್ಷ, ಅಕ್ಷರ ದಾಸೋಹ ಉಪನಿರ್ದೇಶಕ ಚಲುವರಾಯಸ್ವಾಮಿ, ನಿಲಯ ಪಾಲಕರಾದ ಮಂಜುನಾಥ್, ಮಹೇಶ್, ಪ್ರಾಂಶುಪಾಲರಾದ ಕಲ್ಪನಾ, ಸಂತೋಷ್ ಇದ್ದರು.