Advertisement

ಗುಂಡಿ ಮುಚ್ಚಲು ಅಧಿಕಾರಿಗಳಿಗೆ ತರಬೇತಿ

12:22 PM Oct 24, 2022 | Team Udayavani |

ಬೆಂಗಳೂರು: ಬೇಕಾಬಿಟ್ಟಿಯಾಗಿ ರಸ್ತೆ ಗುಂಡಿ ಮುಚ್ಚಿ, ರಸ್ತೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ನಿರ್ಲಕ್ಷ್ಯವಹಿಸುತ್ತಿರುವ ಬಿಬಿಎಂಪಿ ಎಂಜಿನಿಯರ್‌ಗಳಿಗೆ ರಸ್ತೆ ಗುಂಡಿ ಮುಚ್ಚುವ ಕುರಿತಂತೆ ತರಬೇತಿ ನೀಡಲು ಹಿರಿಯ ಅಧಿಕಾರಿಗಳು ನಿರ್ಧರಿಸಿದ್ದಾರೆ.

Advertisement

ಮೂರರಿಂದ ಐದು ವರ್ಷಗಳ ಎಂಜಿನಿ ಯರಿಂಗ್‌ ಕೋರ್ಸ್‌ ವ್ಯಾಸಂಗ ಮಾಡಿ, ಹಲವು ವರ್ಷಗಳ ಕಾಲ ಬಿಬಿಎಂಪಿಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ ಎಂಜಿನಿ ಯರ್‌ಗಳಿಗೆ ಭಾರತೀಯ ರಸ್ತೆ ಕಾಂಗ್ರೆಸ್‌ನಲ್ಲಿ ನಿಗದಿಯಾಗಿರುವ ನಿಯಮದಂತೆ ರಸ್ತೆ ಗುಂಡಿ ಮುಚ್ಚುವುದಕ್ಕೆ ಬರುತ್ತಿಲ್ಲ. ಬೇಕಾಬಿಟ್ಟಿಯಾಗಿ ರಸ್ತೆ ಗುಂಡಿ ಮುಚ್ಚುತ್ತಾ, ತೇಪೆ ಕೆಲಸ ಮಾಡುತ್ತಿರುವುದರಿಂದ ನಗರದಲ್ಲಿ ಗುಂಡಿಗಳ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಎಂಜಿನಿಯರ್‌ಗಳ ಅಜ್ಞಾನ ಮತ್ತು ಬೇಜಾವಾಬ್ದಾರಿತನವೇ ಕಾರಣ ಎಂದು ಅರಿತಿರುವ ಬಿಬಿಎಂಪಿ ಹಿರಿಯ ಅಧಿಕಾರಿಗಳು ತರಬೇತಿ ನೀಡಲು ಮುಂದಾಗಿದ್ದಾರೆ.  ಈ ಬಗ್ಗೆ ಹಿರಿಯ ಅಧಿಕಾರಿಗಳು ಚರ್ಚೆ ನಡೆಸಿದ್ದು, ಶೀಘ್ರದಲ್ಲಿ ದಿನಾಂಕ ನಿಗದಿ ಮಾಡಿ, ಎಂಜಿನಿಯರ್‌ಗಳಿಗೆ ತರಬೇತಿ ನೀಡಲಿದ್ದಾರೆ.

564 ಎಂಜಿನಿಯರ್‌ಗಳು: ಬಿಬಿಎಂಪಿಯ ಕಾಮಗಾರಿ ವಿಭಾಗದಲ್ಲಿ ಸಿವಿಲ್‌ ಕೆಲಸ ಮಾಡುವ 63 ಕಾರ್ಯಪಾಲಕ ಎಂಜಿನಿ ಯರ್‌, 213 ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಹಾಗೂ 288 ಸಹಾಯಕ ಎಂಜಿನಿಯರ್‌ಗಳು ಸೇರಿ ಒಟ್ಟು 564 ಎಂಜಿನಿಯರ್‌ಗಳಿದ್ದಾರೆ. ಅವರುಗಳು ಬಿಬಿಎಂಪಿಯಿಂದ ಕೈಗೊಳ್ಳುವ ಕಟ್ಟಡ ನಿರ್ಮಾಣ ಕಾಮಗಾರಿಗಳ ಜತೆಗೆ ರಸ್ತೆ, ಪಾದಚಾರಿ ಮಾರ್ಗ, ಚರಂಡಿ ಅಭಿವೃದ್ಧಿ ಮತ್ತು ನಿರ್ವಹಣೆ ಕೆಲಸವನ್ನೂ ಮಾಡಬೇಕಿದೆ. ಜತೆಗೆ ತಮ್ಮ ವ್ಯಾಪ್ತಿಯಲ್ಲಿನ ರಸ್ತೆಗಳ ನಿರ್ವಹಣೆ ಯನ್ನೂ ಮಾಡಬೇಕಿದೆ. ರಸ್ತೆಯಲ್ಲಿ ಗುಂಡಿ ಬಿದ್ದರೆ, ಪಾದಚಾರಿ ಮಾರ್ಗ ಹಾಳಾದರೆ, ಚರಂಡಿಯಲ್ಲಿ ಹೂಳು ತೆಗೆಯುವುದು ಸೇರಿ ಇನ್ನಿತರ ಕೆಲಸವನ್ನು ಮಾಡಬೇಕಿದೆ.

ಯಾವೆಲ್ಲ ವಿಷಗಳ ಬಗ್ಗೆ ತರಬೇತಿ?: ಬಿಬಿಎಂಪಿ 564 ಎಂಜಿನಿಯರ್‌ಗಳು ತಮ್ಮ ಕೆಲಸ ಸಮರ್ಪಕವಾಗಿ ಮಾಡದ ಕಾರಣ ರಸ್ತೆ ಗುಂಡಿ ಸಮಸ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಬಿಬಿಎಂಪಿಯ ಪ್ರಧಾನ ಎಂಜಿನಿಯರ್‌ ನೇತೃತ್ವದಲ್ಲಿ ತರಬೇತಿ ವಿವಿಧ ವಿಭಾಗದ ಮುಖ್ಯ ಎಂಜಿನಿಯರ್‌ಗಳು ತರಬೇತಿಯನ್ನು ನೀಡಲಿದ್ದಾರೆ. ತರಬೇತಿ ವೇಳೆ ರಸ್ತೆ ಗುಂಡಿಗಳ ಸೃಷ್ಟಿಗೆ ಕಾರಣಗಳು, ರಸ್ತೆ ಅಭಿವೃದ್ಧಿ ಮಾಡುವಾಗ ಬಿಟುಮಿನ್‌ ಹಾಗೂ ಅದರ ಶಾಖದ ಪ್ರಮಾಣ ಎಷ್ಟಿರಬೇಕು? ರಸ್ತೆ ನಿರ್ವಹಣೆಗೆ ಸಂಬಂಧಿಸಿದಂತೆ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು? ಈ ಕುರಿತುಎಂಜಿನಿಯರ್‌ಗಳಿಗೆ ತಿಳಿಸಿಕೊಡಲಾಗುತ್ತದೆ.

ಗುಂಡಿ ಮುಚ್ಚುವ ನಿಯಮ: ರಸ್ತೆ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ಇಂಡಿಯನ್‌ ರೋಡ್‌ ಕಾಂಗ್ರೆಸ್‌ನಲ್ಲಿ ಕೆಲ ನಿಯಮಗಳಿವೆ. ಅದರ ಪ್ರಕಾರ ರಸ್ತೆ ಗುಂಡಿ ಸೃಷ್ಟಿಯಾದ ನಂತರ ಅದರಲ್ಲಿ ನೀರು, ಮಣ್ಣಿನ ಕಣಗಳು ಶೇಖರಣೆಯಾಗಿದ್ದರೆ ಅದನ್ನು ಸಂಪೂರ್ಣವಾಗಿ ಹೊರಹಾಕಬೇಕು. ಅದಾದ ನಂತರ ರಸ್ತೆ ಗುಂಡಿಯನ್ನು ಚೌಕಾಕಾರ ಅಥವಾ ಆಯತಾಕಾರವಾಗಿ ಕತ್ತರಿಸಬೇಕು, ಗುಂಡಿಗೆ ಬಿಟುಮಿನ್‌ ಮಿಶ್ರಣವನ್ನು ತುಂಬಿ ರೋಲರ್‌ ಹಾಯಿಸಬೇಕು. ರಸ್ತೆ ಮೇಲ್ಮೈ ಹಾಗೂ ಗುಂಡಿ ಮುಚ್ಚಿದ ಭಾಗ ಸಮಾನವಾಗಿರಬೇಕು ಎಂಬ ಅಂಶಗಳಿವೆ.

Advertisement

ಖಾಸಗಿ ಸಂಸ್ಥೆಯಿಂದಲೂ ಮಾಹಿತಿ: ಬಿಬಿಎಂಪಿಯ ಹಿರಿಯ ಅಧಿಕಾರಿಗಳು ರಸ್ತೆ ನಿರ್ವಹಣೆ ಮತ್ತು ದುರಸ್ತಿ ಕುರಿತಂತೆ ತರಬೇತಿ ನೀಡಿದರೆ ರಸ್ತೆ ಗುಂಡಿ ಲೆಕ್ಕ ಹಾಕಿ, ಅದನ್ನು ಮುಚ್ಚಿರುವ ಕುರಿತ ಮಾಹಿತಿಯನ್ನು ನೀಡುವ ಫಿಕ್ಸ್‌ ಮೈ ಸ್ಟ್ರೀಟ್‌ ಆ್ಯಪ ಬಳಕೆ ಬಗ್ಗೆ ಖಾಸಗಿ ಸಂಸ್ಥೆಯಿಂದ ತರಬೇತಿ ನೀಡಲಾಗುತ್ತದೆ. ಪ್ರಮುಖವಾಗಿ ಫಿಕ್ಸ್‌ ಮೈ ಸ್ಟ್ರೀಟ್‌ ಆ್ಯಪ್‌ ಬಳಕೆ, ಅದರಲ್ಲಿ ರಸ್ತೆ ಗುಂಡಿಗಳ ವಿವರವನ್ನು ಅಪ್‌ಲೋಡ್‌ ಮಾಡುವುದು, ಗುಂಡಿ ಮುಚ್ಚಿದ ನಂತರ ಅದರ ಮಾಹಿತಿಯನ್ನು ಆ್ಯಪ್‌ನಲ್ಲಿ ನೀಡುವುದು ಹೀಗೆ ಇನ್ನಿತರ ವಿಷಯಗಳ ಕುರಿತಂತೆ ಖಾಸಗಿ ಸಂಸ್ಥೆ ಎಂಜಿನಿಯರ್‌ಗಳಿಗೆ ತಿಳಿಸಿಕೊಡಲಾಗುತ್ತದೆ.

ರಸ್ತೆ ನಿರ್ವಹಣೆ ಮತ್ತು ಗುಂಡಿಗಳನ್ನು ಮುಚ್ಚುವ ಕುರಿತು ಬಿಬಿಎಂಪಿ ಇಇ, ಎಇ, ಎಇಇಗಳಿಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ.  ಬಿಬಿಎಂಪಿಯ ಹಿರಿಯ ಎಂಜಿನಿಯರ್‌ಗಳ ಮೂಲಕ ತರಬೇತಿ ನೀಡಲಾಗುತ್ತದೆ. ತರಬೇತಿಗೆ ಶೀಘ್ರದಲ್ಲಿ ದಿನಾಂಕ ನಿಗದಿ ಮಾಡಲಾಗುವುದು. –ಪ್ರಹ್ಲಾದ್‌, ಬಿಬಿಎಂಪಿ ಪ್ರಧಾನ ಎಂಜಿನಿಯರ್‌

-ಗಿರೀಶ್‌ ಗರಗ

Advertisement

Udayavani is now on Telegram. Click here to join our channel and stay updated with the latest news.

Next