ಬೆಂಗಳೂರು: ರಾಜಕೀಯ ಸೇರುವವರಿಗೆ ತರಬೇತಿ ನೀಡಲು ಆಡಳಿತ ತರಬೇತಿ ಸಂಸ್ಥೆಯೊಂದನ್ನು ಸ್ಥಾಪಿಸುವ ಉದ್ದೇಶ ಹೊಂದಿರುವುದಾಗಿ ರಾಜ್ಯ ವಿಧಾನಸಭಾಧ್ಯಕ್ಷ ಯು. ಟಿ. ಖಾದರ್ ಹೇಳಿದ್ದಾರೆ.
ನಾನು ಇಂತಹ ಸಂಸ್ಥೆಯೊಂದನ್ನು ಸ್ಥಾಪಿಸುವ ಅಗತ್ಯದ ಬಗ್ಗೆ ಈಗಾಗಲೇ ಪರಿಷತ್ ಸಭಾಪತಿ, ಮುಖ್ಯಮಂತ್ರಿ ಮತ್ತು ಕಾನೂನು ಮತ್ತು ಸಂಸದೀಯ ಸಚಿವರ ಜತೆ ಮಾತನಾಡಿದ್ದೇನೆ. ರಾಜಕಾರಣಕ್ಕೆ ಬರುವವರಿಗೆ ಕ್ರಮಬದ್ಧ ತರಬೇತಿ ಸಿಗಬೇಕು ಎಂಬುದು ನಮ್ಮ ಉದ್ದೇಶ ಎಂದು ಹೇಳಿದರು.
ರಾಜಕೀಯ ಎಂಬುದು ಗಣಿತವಲ್ಲ. ಇಲ್ಲಿ ಎರಡು ಪ್ಲಸ್ ಎರಡು ಎಂಬುದು ನಾಲ್ಕು, ಇಪ್ಪತ್ತೆರಡು, ಇನ್ನೂರ ಇಪ್ಪತ್ತೆರಡು ಅಥವಾ ಮೈನಸ್ ಇಪ್ಪತ್ತೆರಡು ಆಗಬಹುದು. ಮೈನಸ್ ಇಪ್ಪತ್ತೆರಡು ಆಗುವ ಅಂದರೆ ನಮ್ಮ ಸಮಾಜವನ್ನು ಹಿಮ್ಮುಖವಾಗಿ ಕೊಂಡೊಯ್ಯುವ ಪ್ರಯತ್ನ ಶಾಸಕರಿಂದ ಆಗಬಾರದು. ರಾಜಕಾರಣ ಎಂಬುದು ರಸಾಯನ ಶಾಸ್ತ್ರವಿದ್ದಂತೆ. ಇಲ್ಲಿ ಪ್ರತಿಕ್ರಿಯೆಗಳು ಹೆಚ್ಚಿರುತ್ತವೆ. ಇದೆಲ್ಲವನ್ನೂ ಸಮತೋಲನದಿಂದ ಕೊಂಡೊಯ್ಯುವ, ಸಮಚಿತ್ತದಿಂದ ಎದುರಿಸುವ ಕಲೆಯನ್ನು ಶಾಸಕರು ರೂಡಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ತರಬೇತಿ ಶಿಬಿರ ಆಯೋಜಿಸಿದ್ದೇವೆ ಎಂದು ಹೇಳಿದರು.
ವಿಧಾನ ಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಶಾಸನ ಸಭೆಯ ದಿನದ ಅಜೆಂಡಾವನ್ನು ಅಂದೇ ಪೂರ್ಣಗೊಳಿಸಲು ಪ್ರಯತ್ನಿಸಿ. ಜನರ ಅತಿ ನಿರೀಕ್ಷೆಯಿದ್ದರೂ ಅದನ್ನು ಪ್ರಾಮಾಣಿಕವಾಗಿ ಈಡೇರಿಸಲು ಪ್ರಯತ್ನಿಸಿ. ಸದನಕ್ಕೆ ತಪ್ಪದೆ ಹಾಜರಾಗಿ ಟಿಪ್ಪಣಿಗಳನ್ನು ಮಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.